ADVERTISEMENT

ಮಹಾದಾಯಿ ಜಾರಿಗೆ ಸರ್ಕಾರದ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 28 ಮೇ 2017, 10:27 IST
Last Updated 28 ಮೇ 2017, 10:27 IST

ಬಾದಾಮಿ: ಮಹಾದಾಯಿ ನದಿ ಜೋಡಣೆ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ನವಲಗುಂದ ಮತ್ತು ನರಗುಂದದಲ್ಲಿ 670 ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರಗಳೂ ಸ್ಪಂದಿಸಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ, ರಾಜ್ಯದ ಸಂಸದರಿಗೆ ಮತ್ತು ರಾಜ್ಯ ಮುಖ್ಯಮಂತ್ರಿಗೆ ಇಚ್ಛಾಶಕ್ತಿಯ ಕೊರತೆಯಿಂದ ಯೋಜನೆಯು ಜಾರಿಯಾಗಿಲ್ಲ ಎಂದು ಜೆಡಿಎಸ್‌ ಶಾಸಕ ಎಚ್‌.ಎನ್‌. ಕೋನರಡ್ಡಿ ಆರೋಪಿಸಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಉತ್ತರ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಜೆಡಿಎಸ್‌ ಸೇರಲು ಬಯಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯಲ್ಲಿ 45 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಭರವಸೆ ಇದೆ. 25ರಿಂದ 30 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತವೆಂದರು. 

‘ರಾಜ್ಯದಲ್ಲಿ ಸಾಲದ ಬಾಧೆಯಿಂದ 1500ಕ್ಕೂ ಅಧಿಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೈತರ ಬಗ್ಗೆ ಕಿಂಚಿತ್‌ ಕಾಳಜಿ ಇಲ್ಲ. ಕೇಂದ್ರ ಸರ್ಕಾರ ಉದ್ದಿಮೆದಾರರಿಗೆ ₹ 12 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಉತ್ತರಪ್ರದೇಶದಲ್ಲಿ ಮತ್ತು ತಮಿಳುನಾಡಿನಲ್ಲಿ ರೈತರ ಸಾಲ ಮನ್ನಾ ಮಾಡಿದ ಸರ್ಕಾರಗಳು ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಯಾಕೆ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

ಹುಬ್ಬಳ್ಳಿಯಲ್ಲಿ ಮೇ 29ರಂದು ಸಭೆ: ಮಲಪ್ರಭಾ ನದಿಗೆ ಮಹಾದಾಯಿ ಮತ್ತು ಕಳಸಾ ಬಂಡೂರಿ ಜೋಡಣೆ ಹೋರಾಟದ ರೂಪುರೇಷೆ ಮತ್ತು ರೈತರ ಸಾಲ ಮನ್ನಾ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲು ಇದೇ 29ರಂದು ಮಧ್ಯಾಹ್ನ 1ಕ್ಕೆ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳ 13 ತಾಲ್ಲೂಕುಗಳ ಜೆಡಿಎಸ್‌ ಮತ್ತು ರೈತ ಮುಖಂಡರ ಸಭೆಯನ್ನು ಹುಬ್ಬಳ್ಳಿಯ ಚವ್ಹಾಣ ಗ್ರೀನ್‌ ಗಾರ್ಡ್‌ನ್‌ನಲ್ಲಿ ಕರೆಯಲಾಗಿದೆ. ಪಕ್ಷದ ಮುಖಂಡರು, ರೈತರ ವಿವಿಧ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಪಾಲ್ಗೊಳ್ಳುವರು ಎಂದರು.

ಮೇ 30ರ ಸಮಾರಂಭದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತೊರೆದು ಜೆಡಿಎಸ್‌ ಪಕ್ಷವನ್ನು ಸೇರುತ್ತಿದ್ದೇನೆ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹನುಮಂತ ಮಾವಿನ ಮರದ ಸ್ಪಷ್ಟಪಡಿಸಿದರು. ಜಿಲ್ಲಾ ಜೆಡಿಎಸ್‌ ಅಧ್ಯಕ್ಷ  ರವಿ ಹುಣಶ್ಯಾಳ, ತಾಲ್ಲೂಕು ಘಟಕದ ಜೆಡಿಎಸ್‌ ಅಧ್ಯಕ್ಷ ಎಂ.ಎಸ್‌. ಹಿರೇಹಾಳ, ಚಂದ್ರಕಾಂತ ಶೇಖಾ, ಅಜೀಜ್‌ ಮುಲ್ಲಾ, ಚನ್ನಪ್ಪ ಮೇಟಿ, ಶೌಕತ್ ಅಲಿ ಸೌದಾಗರ, ಅನ್ವರ್‌ ಖಾನ್‌, ರೈತ ಸಂಘದ ವಸಂತ ಜಡಿಯನ್ನವರ, ವೆಂಕಟೇಶ, ರಂಗಪ್ಪ ಕಲಾದಗಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.