ADVERTISEMENT

ಮೀನುಗಾರನ ಮಗನಿಗೆ ಶೇ 95.66

​ಪ್ರಜಾವಾಣಿ ವಾರ್ತೆ
Published 14 ಮೇ 2017, 10:12 IST
Last Updated 14 ಮೇ 2017, 10:12 IST

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದ ಮೆಹಬೂಬ್‌ಸಾಬ್‌ ತೆಗ್ಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇ 95.66ರಷ್ಟು ಅಂಕ ಪಡೆದು ತಾಲ್ಲೂಕಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.ಸೊನ್ನದ ಮೀನುಗಾರ ಮೌಲಾಸಾಬ್‌ ತೆಗ್ಗಿ ಹಾಗೂ ಫಾತಿಮಾ ದಂಪತಿಯ ಮಗ ಮೆಹಬೂಬ್‌ಸಾಬ್‌ ಬೀಳಗಿಯ ಸಿದ್ದೇಶ್ವರ ಕಾಲೇಜಿನ ವಿದ್ಯಾರ್ಥಿ.

ಅಪಘಾತವೊಂದರಲ್ಲಿ ಮೌಲಾಸಾಬ್‌ ತಮ್ಮ ಎಡಗೈ ಕಳೆದುಕೊಂಡಿದ್ದು ಕೃಷ್ಣಾನದಿಯಲ್ಲಿ ಮೀನು ಹಿಡಿದು ಮಾರಾಟ ಮಾಡಿ ಜೀವನ ಬಂಡಿ ಸಾಗಿಸುತ್ತಿದ್ದಾರೆ. ಮೀನು ಸಿಗದ ದಿನ ಕುಟುಂಬದ ಸದಸ್ಯರ ತುತ್ತಿನ ಚೀಲದ ಭರ್ತಿ ಮಾಡುವ ಚಿಂತೆ. ಇಂತಹ ಸಂಕಷ್ಟದ ನಡುವೆಯೂ ಮೆಹಬೂಬ್‌ ಚೆನ್ನಾಗಿ ಓದಿ ಉತ್ತಮ ಅಂಕ ಪಡೆದಿರುವುದು ಕುಟುಂಬದವರ ಸಂತಸಕ್ಕೆ ಕಾರಣವಾಗಿದೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ  ತೆಗ್ಗಿ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಕಷ್ಟಪಟ್ಟು ಅಭ್ಯಾಸ ಮಾಡಿದ ಮಗ ಜಿಲ್ಲೆಗೆ ಮೂರನೇ ಸ್ಥಾನ ಹಾಗೂ ತಾಲ್ಲೂಕಿಗೆ ಮೊದಲ ಸ್ಥಾನ ಪಡೆದಿರುವುದು ಪಾಲಕರ ಸಂತಸ ಇಮ್ಮಡಿಯಾಗಿಸಿದೆ.

ADVERTISEMENT

‘ಮನೆ ಪಾಠಕ್ಕೆ ಹೋಗದೇ, ವಿಶೇಷ ತರಬೇತಿ ಪಡೆಯದೇ ಮಗ ಹಗಲಿರುಳು ಮನೆಯಲ್ಲಿಯೇ ಕುಳಿತು ಅಭ್ಯಾಸ ನಡೆಸಿದ ಪರಿಣಾಮ ಈ ಯಶಸ್ಸು ದೊರತಿದೆ. ಮಗನ ಸಾಧನೆ ಮುಂದೆ ನಮ್ಮ ಕಷ್ಟಗಳೆಲ್ಲ ಕರಗಿ ಹೋದವು’ ಎಂದು ಮೌಲಾಸಾಬ್‌ ಹೇಳಿದಾಗ ಅವರ ಕಣ್ಣಾಲಿ ತೇವಗೊಂಡಿದ್ದವು.

ಐಎಎಸ್ ಮಾಡುವ ಹಂಬಲ
‘ನಿತ್ಯ ಎಂಟು ಗಂಟೆ ಓದುತ್ತಿದ್ದೆನು. ಅಂದಿನ ಪಾಠ ಅಂದೇ ಮನನ ಮಾಡಿಕೊಂಡ ಪರಿಣಾಮ ಉತ್ತಮ ಫಲಿತಾಂಶ ದೊರೆತಿದೆ. ಕಾಲೇಜಿನಲ್ಲಿ ಶಿಕ್ಷಕರು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಮುಂದೆ ಐಎಎಸ್ ಮಾಡುವ ಹಂಬಲವಿದೆ. ಅಧಿಕಾರಿಯಾಗಿ ನೊಂದವರ ಧ್ವನಿಯಾಗುವೆ’ ಎಂದು ಮೆಹಬೂಬ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬಿಡುವಿನ ವೇಳೆ ಕೆಲಸ: ಮೆಹಬೂಬ್‌ಸಾಬ್ ಮನೆಯಲ್ಲಿ ಟಿ.ವಿ ಇಲ್ಲ. ಪೋಷಕರ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಮೊಬೈಲ್‌ಫೋನ್ ಕೊಂಡಿಲ್ಲ. ಬಿಡುವಿನ ಸಮಯದಲ್ಲಿ ಬೀಳಗಿಯ ತಂಪುಪಾನೀಯದ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಓದಿಗೆ ಬೇಕಾದ ಪರಿಕರಗಳನ್ನು ಅಲ್ಲಿ ದೊರೆತ ಸಂಬಳದಿಂದ ಕೊಂಡಿದ್ದಾಗಿ ಹೇಳುತ್ತಾರೆ.
ಮಹಾಂತೇಶ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.