ADVERTISEMENT

‘ಯಶಸ್ಸಿನ ಕಡೆಗೆ ಸದಾ ಗಮನ ಇರಲಿ’

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಪದಕ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:41 IST
Last Updated 9 ಮಾರ್ಚ್ 2017, 11:41 IST
ಬಾಗಲಕೋಟೆ: ‘ವಿದ್ಯಾರ್ಥಿಗಳಿಗೆ ಜೀವನದಲ್ಲಿ ನಿರ್ದಿಷ್ಟ ಗುರಿ ಇರಬೇಕು. ಆ ಗುರಿಯತ್ತ ಪ್ರಾಮಾಣಿಕ ಪ್ರಯತ್ನವಿದ್ದರೇ ಬದುಕಿನಲ್ಲಿ ಸನ್ಮಾನ ಹಾಗೂ ಗೌರವ  ಹುಡುಕಿಕೊಂಡು ಬರುತ್ತವೆ’ ಎಂದು ಹಾರೂಗೇರಿಯ ಬಿ.ಆರ್. ದರೂರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿ.ಎಸ್. ಮಾಳಿ ಅಭಿಪ್ರಾಯಪಟ್ಟರು.
 
ಇಲ್ಲಿನ ಬಿ.ವಿ.ವಿ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 
‘ಇಂದು ವಿದ್ಯಾರ್ಥಿಗಳ ಪಾಲಿಗೆ ಬಂಗಾರದ ದಿನ. ಸಂಸ್ಥೆಯ ವ್ಯಾಪ್ತಿಯ ಶಾಲೆ–ಕಾಲೇಜುಗಳ ಆಕಾಶ ಬುಟ್ಟಿಗಳಿಗೆ ಸನ್ಮಾನ ಮಾಡುವ ಮೂಲಕ ಬಿ.ವಿ.ವಿ ಸಂಘ ತನ್ನ ಘನತೆ ಹೆಚ್ಚಿಸಿಕೊಂಡಿದೆ. ಇಂತಹ ಪ್ರತಿಭೆಗಳು ಸಾವಿರಾರು ಜನರಿಗೆ ದಾರಿ ದೀಪವಾಗಿ ಬೆಳಗಬೇಕು. ಅಂದಾಗ ಮಾತ್ರ ಅದಕ್ಕೆ ಬೆಲೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
 
ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು, ಸಮಯಪಾಲನೆ ಇದ್ದರೇ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ನಮ್ಮವರು ಡಾಕ್ಟರ್‌, ಎಂಜಿನಿಯರ್‌ಗಳು ವಿಶ್ವದ ತುಂಬಾ ಇದ್ದಾರೆ. 
 
ಐಎಎಸ್‌, ಐಪಿಎಸ್ ಅಧಿಕಾರಿಗಳಂತಹ ಉನ್ನತ ಹುದ್ದೆಗೇರಲು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಹೆಚ್ಚು ಗಮನ ಕೊಡಿ’ ಎಂದು ಕಿವಿಮಾತು ಹೇಳಿದರು. ಸಾನಿಧ್ಯ ವಹಿಸಿದ್ದ ಚರಂತಿಮಠದ ಪ್ರಭುಸ್ವಾಮೀಜಿ ಮಾತನಾಡಿ, ‘ವಿದ್ಯೆಗಾಗಿ ವ್ಯಯ ಮಾಡುವ ಸಮಯ ದೇವರ ಪೂಜೆಗಿಂತ ಶ್ರೇಷ್ಠ ಎಂದು ಬಣ್ಣಿಸಿದರು.
 
ಸಂಘದ ಗೌರವ ಕಾರ್ಯಾಧ್ಯಕ್ಷ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ(ಬೇವೂರ), ಚನ್ನಪ್ಪ ಅಥಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಎಸ್.ಎಚ್. ಪಾಟೀಲ ಸೇರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಪ್ರೊ.ಎಸ್. ಎಂ. ಮುಳ್ಳೂರು, ಡಾ. ಸುಮಂಗಲಾ ಮೇಟಿ ನಿರೂಪಿಸಿದರು. ಡಾ. ಆರ್. ಎಚ್. ಫತ್ತೇಪುರ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.