ADVERTISEMENT

ರಾಜಕೀಯ ಪಲ್ಲಟಗಳಿಗೆ ನೆಲೆಯಾದ ಕ್ಷೇತ್ರ

ಬಾಗಲಕೋಟೆ ಕ್ಷೇತ್ರ: ನೇಪಥ್ಯಕ್ಕೆ ಸರಿದ ಸಂತ್ರಸ್ತರ ಹಾಡುಪಾಡು, ಜಾತಿಯದ್ದೇ ಮೇಲಾಟ

ವೆಂಕಟೇಶ್ ಜಿ.ಎಚ್
Published 7 ಏಪ್ರಿಲ್ 2018, 5:42 IST
Last Updated 7 ಏಪ್ರಿಲ್ 2018, 5:42 IST

ಬಾಗಲಕೋಟೆ: ಘಟಪ್ರಭೆ ಹಾಗೂ ಮಲಪ್ರಭಾ ನದಿಗಳ ತಟದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಹರವಿಕೊಂಡಿದೆ. ಜಿಲ್ಲಾ ಕೇಂದ್ರ ಸ್ಥಾನವಾದ ಕಾರಣ ಸಹಜವಾಗಿಯೇ ಇಲ್ಲಿನ ಹಣಾಹಣಿ ಮಹತ್ವ ಪಡೆದುಕೊಂಡಿದೆ.

ಹಿಂದಿನ ಚುನಾವಣೆಗಳಲ್ಲಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಸಂತ್ರಸ್ತರ ಹಾಡು–ಪಾಡು ಅಭ್ಯರ್ಥಿಗಳಿಗೆ ವಿಷಯ ವಸ್ತುವಾಗಿದ್ದರೂ ಅಂತಿಮವಾಗಿ ಹಣ, ಜಾತಿ–ಧರ್ಮದ ಮೇಲಾಟವೇ ಸೋಲು–ಗೆಲುವಿನ ಲೆಕ್ಕ ಪಕ್ಕಗೊಳಿಸಿದ ನಿದರ್ಶನ ಕಣ್ಣಮುಂದಿವೆ. ಈ ಬಾರಿಯೂ ಮುಳುಗಡೆ ಸಂತ್ರಸ್ತರದ್ದು ಅರಣ್ಯ ರೋದನ. ಬಿಸಿಲ ಝಳದ ಏರಿಕೆಯ ನಡುವೆ ಚುನಾವಣೆ ಕೂಡ ಕಾವು ಪಡೆಯುತ್ತಿದೆ. ಬಾಗಲಕೋಟೆ ನಗರ ಬಿಟ್ಟರೆ, ಕಮತಗಿ, ಅಮೀನಗಡ ಕ್ಷೇತ್ರದ ವ್ಯಾಪ್ತಿಯ ಅರೆಪಟ್ಟಣಗಳಾಗಿವೆ. ಉಳಿದಂತೆ ರಾಂಪುರ, ಶಿರೂರ, ಬೇವೂರ ಮೊದಲಾದ ಹೋಬಳಿ ಕೇಂದ್ರಗಳು ಫಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಎನಿಸಿವೆ.

ಮೊದಲು ಕಾಂಗ್ರೆಸ್‌ನ ಭದ್ರ ನೆಲೆ: ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರ ಮುಂಬೈ ಪ್ರಾಂತ್ಯಕ್ಕೆ ಸೇರಿತ್ತು. ಕರ್ನಾಟಕ ಏಕೀಕರಣಗೊಂಡ ನಂತರ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಒಲಿದಿತ್ತು. ಮುಂದೆ 25 ವರ್ಷಗಳ ಕಾಲ ಬಾಗಲಕೋಟೆ ಕಾಂಗ್ರೆಸ್ ಭದ್ರ ನೆಲೆಯಾಗಿತ್ತು. ಈ ಅವಧಿಯಲ್ಲಿ ಎಸ್.ನಿಜಲಿಂಗಪ್ಪ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿ ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. 1983ರ ಚುನಾವಣೆಯಲ್ಲಿ ಪಕ್ಷದ ಬಂಡಾಯ ಅಭ್ಯರ್ಥಿ ಮಂಟೂರ ಗೂಳಪ್ಪ ಅವರಿಂದ ಮೊದಲ ಬಾರಿಗೆ ಸೋಲಿನ ಕಹಿ ಉಂಡಿದ್ದ ಕಾಂಗ್ರೆಸ್‌ಗೆ 2013ರ ಚುನಾವಣೆವರೆಗೂ ವಿಜಯಲಕ್ಷ್ಮೀ ಮರೀಚಿಕೆಯಾಗಿಯೇ ಉಳಿದಿದ್ದಳು. ಜನಸಂಘ, ಜನತಾಪರಿವಾರದ ಹೆಜ್ಜೆ ಗುರುತಿನಲ್ಲಿಯೇ ಬಿಜೆಪಿಯ ಭದ್ರಕೋಟೆಯಾಗಿ ಬಾಗಲಕೋಟೆ ಬದಲಾಗಿತ್ತು. ಮೂರು ದಶಕಗಳ ಈ ವನವಾಸಕ್ಕೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ವೈ.ಮೇಟಿ ಅಂತ್ಯ ಹಾಡಿದ್ದರು. ಇದೀಗ ಮತ್ತೊಂದು ಚುನಾವಣೆ ಎದುರಾಗಿದೆ.

ADVERTISEMENT

ಗೆಲುವಿನ ಹಳಿಗೆ ಮರಳಲು ಬಿಜೆಪಿ, ಸುದೀರ್ಘ ಅವಧಿಯ ನಂತರ ದಕ್ಕಿರುವ ವಿಜಯಲಕ್ಷ್ಮಿ ಉಳಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಖಾತೆ ತೆರೆಯಲು ಜಾತ್ಯತೀತ ಜನತಾದಳ ಸಿದ್ಧತೆ ನಡೆಸಿವೆ.ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಟಿಕೆಟ್ ಪಕ್ಕಾ ಆಗಿರುವ ಕಾರಣ ಬಿಜೆಪಿ ಈಗಾಗಲೇ ಚುನಾವಣೆ ಪ್ರಚಾರ ಆರಂಭಿಸಿದೆ. ‘ಜೆಡಿಎಸ್‌ ಟಿಕೆಟ್‌ ನನಗೆ’ ಎಂದು ಮೋಹನ ಜಿಗಳೂರ ಹೇಳಿಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪೈಪೋಟಿ ಹೆಚ್ಚಿದೆ. ಹಾಲಿ ಶಾಸಕ ಎಚ್.ವೈ.ಮೇಟಿಗೆ ಟಿಕೆಟ್ ಎಂದು ಎಐಸಿಸಿ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕ್ಕಂ ಠಾಕೂರ್ ಹೇಳಿದ್ದಾರೆ. ಆದರೂ ಕಳೆದ ಚುನಾವಣೆಯಲ್ಲಿ ನಾವು ಮಾಡಿದ್ದ ತ್ಯಾಗವನ್ನು ವರಿಷ್ಠರು ಪರಿಗಣಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಮಾಜಿ ಶಾಸಕ ಪಿ.ಎಚ್.ಪೂಜಾರ ಹಾಗೂ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಇದ್ದಾರೆ. ಟಿಕೆಟ್ ಸಿಗದಿದ್ದರೆ ಮುಂದಿನ ತೀರ್ಮಾನದ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸುವೆ ಎಂದೂ ತಪಶೆಟ್ಟಿ ಹೇಳಿದ್ದಾರೆ. ಇನ್ನೊಂದೆಡೆ ಪಿ.ಎಚ್.ಪೂಜಾರ ಅವರ ಮೌನ ಹೈಕಮಾಂಡ್‌ನ ಬೇಗುದಿ ಹೆಚ್ಚಿಸಿದೆ. ಹಾಗಾಗಿ ಕ್ಷೇತ್ರದಲ್ಲಿ ಶೀಘ್ರ ಒಂದಷ್ಟು ರಾಜಕೀಯ ಪಲ್ಲಟದ ಚಿತ್ರಣ ಕಾಣಸಿಗಲಿದೆ ಎನ್ನಲಾಗುತ್ತಿದೆ.

ಜನಸಂಘದ ಹೆಜ್ಜೆ ಗುರುತು..

ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣದ ಹೆಜ್ಜೆ ಗುರುತು 1962ರ ಚುನಾವಣೆಯಿಂದಲೇ ಜನಸಂಘದ ಸ್ಪರ್ಧೆಯ ಮೂಲಕ ಕಾಣಬಹುದಾಗಿದೆ. ಆಗ ಜನಸಂಘದ ಅಭ್ಯರ್ಥಿ ಜಿ.ಡಿ.ಕಾಂಬಳೆ ಶೇ 21.72ರಷ್ಟು ಮತ ಪಡೆದಿದ್ದರು. 1967ರಲ್ಲಿ ಬಿಜೆಎಸ್‌ನಿಂದ ಕೆ.ಜಿ.ದತ್ತಾತ್ರೇಯ ಸ್ಪರ್ಧಿಸಿದರೂ ಮತಗಳಿಕೆ ಪ್ರಮಾಣ ಶೇ 2.47ಕ್ಕೆ ಕುಸಿಯುತ್ತದೆ. 1972ರಲ್ಲಿ ಎಸ್.ಬಿ.ವಿರೂಪಾಕ್ಷಪ್ಪ ಶೇ 2.87ರಷ್ಟು ಮತ ಪಡೆದರೆ, 1994ರ ಚುನಾವಣೆಯಲ್ಲಿ ಬಿಜೆಪಿ ರೂಪುಗೊಂಡು ಅಭ್ಯರ್ಥಿ ಪಿ.ಎಚ್.ಪೂಜಾರ ಶೇ 39 ರಷ್ಟು ಮತ ಪಡೆಯುತ್ತಾರೆ. ಮುಂದೆ 1999ರಿಂದ 2008ರ ಚುನಾವಣೆವರೆಗೂ ವಿಜಯದ ಓಟ ಅಬಾಧಿತವಾದರೂ ಅಭ್ಯರ್ಥಿಗಳು ಮಾತ್ರ ಬದಲಾಗುತ್ತಾರೆ.

ನಿಜಲಿಂಗಪ್ಪಗೆ ಸಿಹಿ–ಕಹಿ..

ಬಾಗಲಕೋಟೆ ಕ್ಷೇತ್ರ 1962ರ ಚುನಾವಣೆಯಲ್ಲಿ ಮೊದಲ ಬಾರಿಗೆ ನಾಡಿನ ಗಮನಸೆಳೆದಿತ್ತು. ಆಗ ಹೊಸದುರ್ಗದಲ್ಲಿ ಸೋಲುಂಡಿದ್ದ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಸ್.ನಿಜಲಿಂಗಪ್ಪ ಇಲ್ಲಿ ರಾಜಕೀಯ ಪುನರ್ಜನ್ಮ ಪಡೆದಿದ್ದರು. ಪಕ್ಷದ ಶಾಸಕ ಬಿ.ಟಿ.ಮುರನಾಳರಿಂದ ರಾಜೀನಾಮೆ ಕೊಡಿಸಿ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಆದರೆ 1972ರ ಚುನಾವಣೆಯಲ್ಲಿ ಇಂದಿರಾ ಕಾಂಗ್ರೆಸ್ ಎದುರು ಕೂದಲೆಳೆಯ ಅಂತರದಲ್ಲಿ ನಿಜಲಿಂಗಪ್ಪ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಸೋಲು ಕಂಡಿತ್ತು. ಆಗ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎನ್‌.ಪಿ.ಮಲ್ಲನಗೌಡ ಕೇವಲ 212 ಮತಗಳ ಅಂತರದಿಂದ ಸೋತಿದ್ದರು.

ಕಂಠಿಗೆ ಕೈಕೊಟ್ಟ ಅದೃಷ್ಟ: 1985ರ ಚುನಾವಣೆಯಲ್ಲಿ ಜನತಾ ಪಕ್ಷದ ಮಂಟೂರ ಗೂಳಪ್ಪ ವಿರುದ್ಧ ಕಾಂಗ್ರೆಸ್‌ನ ರಾಜಶೇಖರ ಕಂಠಿ 183 ಮತಗಳ ಅಂತರದಿಂದ ಸೋತಿದ್ದರು. ಮುಂದೆ 1999ರಲ್ಲೂ ಬಿಜೆಪಿಯ ಪಿ.ಎಚ್.ಪೂಜಾರ ವಿರುದ್ಧ ಕೇವಲ 138 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.