ADVERTISEMENT

‘ರಾಷ್ಟ್ರದ ಸನಾತನ ಸಂಸ್ಕೃತಿ ಉಳಿಸಿ’

ಬಾದಾಮಿಯಲ್ಲಿ ನಡೆದ ಗುರುಪೂರ್ಣಿಮೆ ಸಮಾರಂಭದಲ್ಲಿ ಜಯಂತ ಅಠವಲೆ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 11:33 IST
Last Updated 10 ಜುಲೈ 2017, 11:33 IST

ಬಾದಾಮಿ: ರಾಷ್ಟ್ರದ ಸನಾತನ ಧರ್ಮದ ಉಳಿವಿಗಾಗಿ ಅನೇಕ ರಾಜ ಮಹಾರಾಜರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ಶಿವಾಜಿ ಮಹಾರಾಜ ಹಿಂದೂಗಳ ಉಳಿವಿಗಾಗಿ ಹೋರಾಟ ಮಾಡಿದ ಇತಿಹಾಸವನ್ನು ಇಂದಿನ ಯುವಕರು ಅರಿತುಕೊಳ್ಳಬೇಕಿದೆ ಎಂದು ಪರಮಪೂಜ್ಯ ಜಯಂತ ಅಠವಲೆ ಹೇಳಿದರು.

ಇಲ್ಲಿನ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸನಾತನ ಸಂಸ್ಥೆಯ ಆಶ್ರಯದಲ್ಲಿ ಜರುಗಿದ ಗುರುಪೂರ್ಣಿಮೆ ಸಮಾರಂಭಕ್ಕೆ ಅವರು ಚಾಲನೆ ನೀಡಿದರು.
ದೇಶದಲ್ಲಿ ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಲೌ ಜಿಹಾದ್‌ ಭಯೋತ್ಪಾದನೆಗಿಂತ ದೊಡ್ಡ ಸಮಸ್ಯೆಯಾಗಿ ಬೆಳೆಯುತ್ತಿದೆ. ಹಿಂದೂಗಳು ಜಾಗೃತಿಯಾಗಿ ವಿರೋಧಿಸಬೇಕು ಎಂದರು.

ಹಿಂದಿನ ಇತಿಹಾಸದಲ್ಲಿ ಮತ್ತು ಸ್ವಾತಂತ್ರ್ಯ ಪೂರ್ವದಲ್ಲಿ ದೇಶಕ್ಕೆ ಗೌರವದ ಸ್ಥಾನವಿತ್ತು. ಆದರೆ ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷಗಳಾದರೂ ಇಂದು ಸಂವಿಧಾನ ಭದ್ಧವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಸರಿಯಾದ ಆಡಳಿತ ದೊರಕಿಲ್ಲ ಎಂದು ವಿದುಲಾ ಹಳದಿಪುರ ವಿಷಾದ ವ್ಯಕ್ತಪಡಿಸಿದರು.

ADVERTISEMENT

ಪ್ರಜಾಪ್ರಭುತ್ವ ವ್ಯವಸ್ಥೆಯು ಇಂದು ವಿಷವರ್ತುಲದಲ್ಲಿದೆ. ಜಾತೀಯತೆ, ಅಲ್ಪಸಂಖ್ಯಾತರ ಓಲೈಕೆ, ಮಿತಿಮೀರಿದ ಭ್ರಷ್ಟಾಚಾರದಿಂದ ಹಿಂದೂ ದೇಶದ ಸಂಸ್ಕೃತಿಯ ಅಧಃಪತನವಾಗುತ್ತಿದೆ. ಎಲ್ಲ ಹಿಂದೂಗಳು ಸಂಘಟಿತರಾಗಿ ಒಗ್ಗಟ್ಟಿನಿಂದ ಹೋರಾಟ ಕೈಗೊಳ್ಳ ಬೇಕಿದೆ ಎಂದರು. 

ಹಿಂದಿನ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಇರುತ್ತಿದ್ದವು. ಶಿಕ್ಷಣ ಸಂಸ್ಥೆಗಳಲ್ಲಿ ನೈತಿಕ ಮೌಲ್ಯಗಳು ನಶಿಸಿ ಇಂದು ಶಿಕ್ಷಣ ಸಂಸ್ಥೆಗಳು ಮಾರುಕಟ್ಟೆ ಕೇಂದ್ರಗಳಾಗಿವೆ ಎಂದು ತಿಳಿಸಿದರು.

ಗುರುಗಳು ರಾಷ್ಟ್ರ ಮತ್ತು ಧರ್ಮದ ರಕ್ಷಕರಾಗಿದ್ದಾರೆ. ಗುರು ಬಲದಿಂದ ರಾಮರಾಜ್ಯದಂತಹ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಸಂಘಟಿತರಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್‌.ಎಸ್‌. ಬೊಮ್ಮನಗೌಡರ ಅತಿಥಿ ಯಾಗಿ ಗುರು ಪೌರ್ಣಿಮೆಯ ಮಹತ್ವ ಕುರಿತು ಹೇಳಿದರು. ಸನಾತನ ಸಂಸ್ಥೆಯ ಸದಸ್ಯರು ಸಮಾರಂಭದಲ್ಲಿ ಇದ್ದರು. ಸಂತೋಷ ಸ್ವಾಗತಿಸಿದರು. ಗೀತಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.