ADVERTISEMENT

ರೈತ, ನೇಕಾರರಿಗೆ ವಿಶೇಷ ಪ್ಯಾಕೇಜ್: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2017, 9:58 IST
Last Updated 21 ಡಿಸೆಂಬರ್ 2017, 9:58 IST
ವೇದಿಕೆಯ ಮುಂದೆ ಗದ್ದಲವಾಗುತ್ತಿದ್ದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಸಮಾಧಾನ ಪಡಿಸಿದರು
ವೇದಿಕೆಯ ಮುಂದೆ ಗದ್ದಲವಾಗುತ್ತಿದ್ದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಸಮಾಧಾನ ಪಡಿಸಿದರು   

ಬಾದಾಮಿ: ‘ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣವೇ ರೈತರು ಮತ್ತು ನೇಕಾರರಿಗೆ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಆವರ್ತ ನಿಧಿಯನ್ನು ತೆಗೆದಿರಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇಲ್ಲಿನ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಂಗಳವಾರ ಜರುಗಿದ ಬಿಜೆಪಿ ಪರಿವರ್ತನಾ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ರಾಜ್ಯದಲ್ಲಿ 150 ಮತಕ್ಷೇತ್ರಗಳನ್ನು ಗೆದ್ದೇ ತೀರುತ್ತೇವೆ’ ಎಂದರು.

‘ಎಂ.ಬಿ. ಪಾಟೀಲರೇ ನೀರಾವರಿ ಯೋಜನೆಗಳನ್ನು ಜಾರಿಗೆ ತರುವುದರನ್ನು ಬಿಟ್ಟು ಏನು ಮಾಡುತ್ತಿದ್ದೀರಿ? ಯುಕೆಪಿ ನೀರಾವರಿ ಯೋಜನೆ ಎತ್ತ ಸಾಗಿದೆ. ರೈತರು ಬೀದಿ ಪಾಲಾಗಿದ್ದಾರೆ. ನಾಲ್ಕುವರೆ ವರ್ಷ ನೀವೇನು ಕತ್ತೆ ಕಾದಿದ್ದೀರಾ?’ ಎಂದು ಛೇಡಿಸಿದರು.

ADVERTISEMENT

‘ಮಹಿಳೆಯರಿಗೆ ಕಳಪೆ ಸೀರೆ ಮತ್ತು ಮಕ್ಕಳಿಗೆ ಮುರುಕು ಸೈಕಲ್‌ ಕೊಟ್ಟಿದ್ದಾರೆ ಎಂದು ಟೀಕಿಸುತ್ತಿರುವ ಸಿಎಂ, ಕಳಪೆ ಸೀರೆ ಕೊಟ್ಟ ಬಗ್ಗೆ ತಾಯಂದಿರನ್ನು ನೀವೇ ಕೇಳಿ, ಕೊಟ್ಟಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ’ ಎಂದರು.

‘ಕೇಂದ್ರ ಸರ್ಕಾರದ ಅಮೃತ ಯೋಜನೆಗೆ ರಾಜ್ಯಕ್ಕೆ ₹ 134 ಕೋಟಿ, ರಸ್ತೆ ಅಭಿವೃದ್ಧಿಗೆ ₹ 300ಕೋಟಿ ಮಂಜೂರಾಗಿದೆ. ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಯುಕೆಪಿ ನೀರಾವರಿ ಯೋಜನೆಗೆ ₹ 1 ಲಕ್ಷ ಕೋಟಿ ಮಂಜೂರು ಮಾಡಿ, ರೈತರಿಗೆ ನೀರು ಕೊಡುವೆ. ಇದನ್ನು ರಕ್ತದಿಂದ ಬರೆದು ಕೊಡುವೆ’ ಎಂದರು.

‘ಮತಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆಮಾಡುವಾಗ ಸರ್ವೇ ಮಾಡಿಸುತ್ತೇವೆ. ಯಾರ ಪರವಾಗಿ ಬೆಂಬಲ ಬರುವುದೋ ಅವರಿಗೆ ಟಿಕೆಟ್‌ ಕೊಡುತ್ತೇವೆ. ಮುಖಂಡರು ಮತ್ತು ಕಾರ್ಯಕರ್ತರು ಬೆಂಬಲಿಸಬೇಕು . ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.