ADVERTISEMENT

ವಾಜಪೇಯಿ ನಗರ: ಕರಗಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 28 ಮೇ 2017, 10:29 IST
Last Updated 28 ಮೇ 2017, 10:29 IST

ಬಾಗಲಕೋಟೆ: ಇಲ್ಲಿನ ವಾಜಪೇಯಿ ಕಾಲೊನಿಯ ಉದ್ಯಾನವನ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದ್ದ ಲಕ್ಷ್ಮೀ ಗುಡಿಯನ್ನು ಶನಿವಾರ ನಗರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದ  ಪರಿಣಾಮ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೊನೆಗೆ ನವನಗರ ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನಸಭೆಯಲ್ಲಿ ಗುಡಿಯನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಲು ಸ್ಥಳೀಯರು ಮುಂದಾದ ಕಾರಣ ಪರಿಸ್ಥಿತಿ ತಿಳಿಗೊಂಡಿತು.

ವಾಜಪೇಯಿ ಕಾಲೊನಿಯ ಲಕ್ಷ್ಮೀ ಗುಡಿಯನ್ನು ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ದೇವರ ವಿಗ್ರಹ ಇಟ್ಟಿರುವುದು ಹಾಗೂ ಅದರ ಮೇಲೆ ಪತ್ರಾಸ್ ಹಾಕಿರುವ ಜಾಗ ನಗರಸಭೆಗೆ ಸೇರಿದೆ ಎಂಬುದು ಅಧಿಕಾರಿಗಳ ವಾದ. ಅಕ್ರಮ ನಿರ್ಮಾಣವನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದ ಅಧಿಕಾರಿಗಳು ಅದಕ್ಕೆ ಮನ್ನಣೆ ದೊರೆಯದ ಕಾರಣ ತಾವೇ ತೆರವುಗೊಳಿಸಲು ಮುಂದಾಗಿದ್ದರು.

ADVERTISEMENT

ಮುಂಜಾನೆ ತೆರವು ಕಾರ್ಯಾಚರಣೆಗೆ ಜೆಸಿಬಿ ಯಂತ್ರಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಆದರೆ ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ತೆರವು ಕಾರ್ಯಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಗುಂಪೊಂದು ಮೂರು ವರ್ಷಗಳಿಂದ ಪೂಜೆ ಮಾಡುತ್ತಿದ್ದೇವೆ. ಈಗ ಏಕಾಏಕಿ ತೆರವುಗೊಳಿಸಲು ಮುಂದಾಗಿರುವುದೇಕೆ ಎಂದು ಪ್ರಶ್ನಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.

ಈ ವೇಳೆ ಮಧ್ಯಪ್ರವೇಶಿಸಿದ ನವನಗರ ಠಾಣೆ ಪೊಲೀಸರು, ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಧ್ಯಸ್ಥಿಕೆ ವಹಿಸಿ ಸಂಧಾನಸಭೆ ನಡೆಸಿದರು.
‘ಈ ಸಂದರ್ಭದಲ್ಲಿ ಕಾಲೊನಿ ನಿವಾಸಿಗಳೇ ಗುಡಿ ಹಾಗೂ ಅದಕ್ಕೆ ನೆರಳು ಮಾಡಲು ನಿರ್ಮಾಣ ಮಾಡಿದ್ದ ಪತ್ರಾಸ್‌ ಅನ್ನು ತೆರವು ಮಾಡುವುದಾಗಿ ಹೇಳಿದ ಕಾರಣ  ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾಗ್ರತ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಿಪಿಐ ಶಿವಶಂಕರ ಗಣಾಚಾರಿ, ಸಬ್‌ ಇನ್‌ಸ್ಪೆಕ್ಟರ್ ಚಂದ್ರಶೇಖರ ಬದನೂರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.