ADVERTISEMENT

ಶ್ವಾನದ ಕೊರಳಿಗೆ ಗಂಟೆ ಕಟ್ಟುವವರ್‍ಯಾರು?

ವೆಂಕಟೇಶ್ ಜಿ.ಎಚ್
Published 4 ಡಿಸೆಂಬರ್ 2017, 6:38 IST
Last Updated 4 ಡಿಸೆಂಬರ್ 2017, 6:38 IST
ನವನಗರದ ಸೆಕ್ಟರ್‌ ನಂ 4ಲ್ಲಿ ಬೀದಿಬದಿ ನಾಯಿಗಳು ಕಾರುಬಾರು
ನವನಗರದ ಸೆಕ್ಟರ್‌ ನಂ 4ಲ್ಲಿ ಬೀದಿಬದಿ ನಾಯಿಗಳು ಕಾರುಬಾರು   

ಬಾಗಲಕೋಟೆ: ಸರ್ಕಾರ ನಿಗದಿಪಡಿಸಿದ ಮೊತ್ತದಲ್ಲಿ ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲು ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಮುಂದೆ ಬಾರದ ಕಾರಣ ನಗರದಲ್ಲಿ ಶ್ವಾನಸಂತಾನ ಹೆಚ್ಚಳಗೊಂಡಿದೆ. ಬಿಡಾಡಿ ದನ, ಹಂದಿಗಳ ಜೊತೆಗೆ ಈಗ ನಾಯಿಗಳ ಹಾವಳಿಯೂ ಮಿತಿಮೀರಿದ್ದು, ಹಳೆ ಬಾಗಲಕೋಟೆಗಿಂತ ನವನಗರದಲ್ಲಿ ಅವುಗಳ ಆಟಾಟೋಪ ಹೆಚ್ಚಾಗಿದೆ.

‘ಸರ್ಕಾರ ನಾಯಿಯೊಂದಕ್ಕೆ ಸಂತಾನಶಕ್ತಿಹರಣ ಚಿಕಿತ್ಸೆ ವೆಚ್ಚ ₹445 ನಿಗದಿಪಡಿಸಿದೆ. 2002ರಿಂದಲೂ ಇದೇ ದರ ಕೊಡಲಾಗುತ್ತಿದೆ. 15 ವರ್ಷಗಳ ಹಿಂದೆ ನಿಗದಿಪಡಿಸಿದ ಮೊತ್ತದಲ್ಲಿಯೇ ಈಗಲೂ ಶಸ್ತ್ರಚಿಕಿತ್ಸೆ ನಡೆಸಿ ಇಂಜೆಕ್ಷನ್ ನೀಡಲು ಆಗುವುದಿಲ್ಲ. ಪ್ರತಿ ನಾಯಿಗೆ ಕನಿಷ್ಠ ₹1000 ಕೊಡಲಿ ಎಂಬುದು ಗುತ್ತಿಗೆದಾರರ ಒತ್ತಾಯ.

ಹಾಗಾಗಿ ಟೆಂಡರ್‌ನಲ್ಲಿ ಪಾಲ್ಗೊಳ್ಳಲು ಯಾರೂ ಮುಂದೆ ಬರುತ್ತಿಲ್ಲ ಎಂದು ನಗರಸಭೆ ಪರಿಸರ ಅಧಿಕಾರಿ ಹನುಮಂತ ಕಲಾದಗಿ ಹೇಳುತ್ತಾರೆ. ‘ಈಗಾಗಲೇ ಮೂರು ಬಾರಿ ಟೆಂಡರ್ ಕರೆದಿದ್ದೇವೆ. ಯಾರೂ ಸ್ಪಂದಿಸಿಲ್ಲ. ಈ ಬಾರಿ ಕರೆದಿರುವ ಟೆಂಡರ್‌ಗೆ ಡಿಸೆಂಬರ್ 17 ಕೊನೆಯ ದಿನವಾಗಿದೆ. ಸಂಬಂಧಿಸಿದವರು ಪಾಲ್ಗೊಳ್ಳಲಿ’ ಎಂದು ಮನವಿ ಮಾಡುತ್ತಾರೆ.

ADVERTISEMENT

ಹೆಚ್ಚಿದ ಶ್ವಾನಗಳ ಹಾವಳಿ: ಹಿಂಡು ಹಿಂಡಾಗಿ ಕಲೆತು ಪುಂಡಾಟ ನಡೆಸುವ ನಾಯಿಗಳಿಂದಾಗಿ ಕತ್ತಲಾದರೆ ಮನೆಯಿಂದ ಹೊರಗೆ ಹೋಗಲು, ಇಲ್ಲವೇ ಸೆಕ್ಟರ್‌ಗಳ ಒಳ ರಸ್ತೆಗಳಲ್ಲಿ ಸಂಚರಿಸಲು, ದ್ವಿಚಕ್ರ ವಾಹನಗಳಲ್ಲಿ ಓಡಾಡಲು ಸಾರ್ವಜನಿಕರು ಭಯಪಡುವಂತಾಗಿದೆ.

ಕರು ಬಲಿ: ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಡಿಸೆಂಬರ್ 1ರಂದು ನವನಗರದ ಸೆಕ್ಟರ್‌ ನಂ 10ರಲ್ಲಿ ಕರು ಬಲಿಯಾಗಿದೆ.
ನವೆಂಬರ್ 31ರಂದು ರಾತ್ರಿ ಆ ಪ್ರದೇಶದಲ್ಲಿ ಬಿಡಾಡಿ ಹಸು ಕರುವಿಗೆ ಜನ್ಮನೀಡಿದೆ. ಅಮ್ಮನೊಂದಿಗೆ ಇದ್ದ ಕರುವಿನ ಮೇಲೆ ನಾಯಿಗಳು ದಾಳಿ ನಡೆಸಿವೆ. ಸ್ಥಳೀಯರು ರಕ್ಷಣೆಗೆ ಬರುವ ವೇಳೆಗೆ ಕರು ತೀವ್ರವಾಗಿ ಗಾಯಗೊಂಡಿತ್ತು. ಅಲ್ಲಿನ ಯುವಕ ಮಂಡಳದವರು ನಂತರ ನಗರಸಭೆಗೆ ಮಾಹಿತಿ ನೀಡಿದ್ದರು. ವೈದ್ಯರು ಬಂದು ಇಂಜೆಕ್ಷನ್ ನೀಡಿ ಗಂಜಿ ಕುಡಿಸಿ ಬದುಕಿಸಲು ಪ್ರಯತ್ನಿಸಿದರೂ ಫಲಕಾರಿಯಾಗದೇ ಮರುದಿನ ಮಧ್ಯಾಹ್ನ ಕರು ಅಸುನೀಗಿದೆ.

ತಡರಾತ್ರಿ ಬೇರೆ ಊರುಗಳಿಂದ ಬರುವವರು, ಊರಿಗೆ ಹೊಸಬರು ಹಾಗೂ ಹೊರಗಿನವರು ಸೆಕ್ಟರ್‌ಗಳ ಒಳಗೆ ಬಂದರೆ ನಾಯಿಗಳ ಕಾಕದೃಷ್ಟಿಗೆ ಬೀಳುತ್ತಿದ್ದಾರೆ. ಹಲವರು ಕಚ್ಚಿಸಿಕೊಂಡರೂ ದೂರು ನೀಡುವ ಗೋಜಿಗೆ ಹೋಗದೇ ನಗರಸಭೆ, ಬಿ.ಟಿ.ಡಿ.ಎ ಆಡಳಿತವನ್ನು ಶಪಿಸುತ್ತಾ ವೈದ್ಯರ ಮೊರೆ ಹೋಗಿದ್ದಾರೆ.

ನಾಯಿಗಳ ಸಂಖ್ಯೆ ದ್ವಿಗುಣ: ‘ನಗರಸಭೆಯಿಂದ 2013ರಲ್ಲಿ 650 ಹಾಗೂ 2014ರಲ್ಲಿ 500 ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲಾಗಿದೆ. ನಂತರ ಆ ಕಾರ್ಯ ನಡೆದಿಲ್ಲ. ಇದರಿಂದ ಅವುಗಳ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ. 1500ಕ್ಕೂ ಹೆಚ್ಚು ಬೀದಿ ನಾಯಿಗಳು ಇರುವ ಅಂದಾಜು ಇದೆ’ ಎಂದು ಕಲಾದಗಿ ಹೇಳುತ್ತಾರೆ.

‘ಈಗ ಚಳಿಗಾಲ ಅವುಗಳ ಸಂತಾನ ಹೆಚ್ಚಳದ ಅವಧಿ ಇದು. ಸಂತಾನಶಕ್ತಿಹರಣ ಚಿಕಿತ್ಸೆ ಕೈಗೊಳ್ಳಲು ತುರ್ತಾಗಿ ಕ್ರಮ ಕೈಗೊಳ್ಳಲಿದ್ದೇವೆ. ಈಗ ನಿಗದಿಪಡಿಸಿರುವ ಮೊತ್ತ ಹೆಚ್ಚಳ ಮಾಡುವಂತೆ ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

* * 

ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕರಿಂದ ದೂರು ಹೆಚ್ಚಾಗಿವೆ. ಸಂತಾನಹರಣ ಚಿಕಿತ್ಸೆ ಟೆಂಡರ್‌ನಲ್ಲಿ ಪಾಲ್ಗೊಳ್ಳುವಂತೆ ಸರ್ಕಾರೇತರ ಸಂಸ್ಥೆಗಳಿಗೂ ಮನವಿ ಮಾಡಲಾಗಿದೆ
ಹನುಮಂತ ಕಲಾದಗಿ, ನಗರಸಭೆ ಪರಿಸರ ಅಧಿಕಾರಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.