ADVERTISEMENT

ಸಂತ್ರಸ್ತರ ಸಮಿತಿ ಪಕ್ಷಾತೀತ ಸಂಘಟನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 10:08 IST
Last Updated 20 ಏಪ್ರಿಲ್ 2017, 10:08 IST

ಜಮಖಂಡಿ: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯ ಹಿನ್ನೀರಿನ ಸಂತ್ರಸ್ತರ ಹಿತರಕ್ಷಣಾ ಸಮಿತಿ ಪಕ್ಷಾತೀತ ಸಂಘಟನೆ ಆಗಿದೆ. ಸಮಿತಿಯಲ್ಲಿ ಎಲ್ಲ ರಾಜಕೀಯ ಪಕ್ಷದವರು ಇದ್ದಾರೆ. ಆದ್ದರಿಂದ ಈ ಕುರಿತು ಇಲ್ಲಸಲ್ಲದ ವದಂತಿಗಳಿಗೆ ಯಾರೂ ಕಿವಿಕೊಡಬಾರದು ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.ಸಂತ್ರಸ್ತರ ಸಮಸ್ಯೆಗಳ ಕುರಿತು ಚರ್ಚಿಸಲು ಹಾಗೂ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲು ನಗರದ ಬಸವ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಂತ್ರಸ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿ ಎಕರೆ ಖುಷ್ಕಿ ಭೂಮಿಗೆ ₹ 30 ಲಕ್ಷ ಹಾಗೂ ಪ್ರತಿ ಎಕರೆ ನೀರಾವರಿ ಭೂಮಿಗೆ ₹ 40 ಲಕ್ಷ ಪರಿಹಾರಧನ ನೀಡಬೇಕು. ಏಕರೂಪ ದರ ನಿಗದಿ ಮಾಡಬೇಕು. ಎಲ್ಲ ಸಂತ್ರಸ್ತ ರೈತರಿಗೆ ವೈಜ್ಞಾನಿಕವಾಗಿ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.ಸಂತ್ರಸ್ತರ ಹಿತರಕ್ಷಣಾ ಸಮಿತಿಯ ದಿವಂಗತ ಅಧ್ಯಕ್ಷ ವಾಸಣ್ಣ ದೇಸಾಯಿ ಅವರ ಪುತ್ರ ಮುತ್ತು ದೇಸಾಯಿ ಈಗ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರು ಬಿಜೆಪಿಗೆ ಸೇರಿದವರಲ್ಲ. ಆದಾಗ್ಯೂ, ಅವರ ನಾಯಕತ್ವದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರೆಯುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಜಿ.ಎಸ್‌. ನ್ಯಾಮಗೌಡ ಮಾತನಾಡಿ, ರಾಜಕೀಯ ಬೆರೆಸಿ ಸಂತ್ರಸ್ತರ ಹಿತರಕ್ಷಣಾ ಸಮಿತಿಯನ್ನು ಒಡೆಯುವ ಹುನ್ನಾರ ನಡೆಸಬಾರದು. ಅದರಿಂದ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸಾಧ್ಯವಾಗದು ಎಂದರು.ಮಾಜಿ ಶಾಸಕ ಸಿದ್ದು ಸವದಿ, ವಕೀಲ ಎನ್‌.ಎಸ್‌. ದೇವರವರ ಮಾತನಾಡಿದರು. ಸಮಿತಿ ಅಧ್ಯಕ್ಷ ಮುತ್ತು ದೇಸಾಯಿ, ಮಾಜಿ ಶಾಸಕ ಜಯವಂತ ಕಾಳೆ, ವಕೀಲ ಜಿ.ಕೆ. ಮಠದ, ಸಿದ್ದನಗೌಡ ವಲ್ಲಿಗೌಡರ, ಬಿ.ಎಸ್‌. ಸಿಂಧೂರ, ಸಿ.ಆರ್‌. ಸುತಾರ, ಡಾ.ಉಮೇಶ ಮಹಾಬಳಶೆಟ್ಟಿ, ಟಿ.ಎ. ಬಿರಾದಾರ, ಎಂ.ಎಂ. ಹಟ್ಟಿ, ಎಸ್‌.ಬಿ. ಪಾಟೀಲ, ಪಿ.ಆರ್‌. ಪಾಲಬಾವಿ, ಕಾಡು ಮಾಳಿ ಮತ್ತಿತರರು ವೇದಿಕೆಯಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.