ADVERTISEMENT

ಸಭೆಗೆ ಸಂಪೂರ್ಣ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 10:17 IST
Last Updated 14 ಜುಲೈ 2017, 10:17 IST

ಬಾಗಲಕೋಟೆ: ಸರ್ಕಾರದ ಯೋಜನೆಗಳಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವ ರೀತಿಯ ಅನುಕೂಲವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಯನ್ನು ಸಭೆಗೆ ನೀಡಬೇಕು. ಕೇವಲ ಅಂಕಿ ಅಂಶ ಹೇಳಿ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಅಂಕಿ ಅಂಶಗಳಿಂದ ಅಭಿವೃದ್ಧಿ ಕಾಣುವುದಿಲ್ಲ. ಎಷ್ಟು ಜನ ರೈತರು ಹಾಗೂ ಫಲಾನುಭವಿಗಳಿಗೆ ಯೋಜನೆಯ ಪ್ರಯೋಜನವಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದರು.

ರೈತರ ಆರ್ಥಿಕ ಪ್ರಗತಿಗೆ ತೋಟಗಾರಿಕೆ ಬೆಳೆಗಳು ಪ್ರಮುಖವಾಗಿವೆ. ಜಿಲ್ಲೆಯ ಎಲ್ಲ ಭಾಗಗಳಲ್ಲಿ ತೋಟಗಾರಿಕೆ ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಇಲಾಖೆ ಸಚಿವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ಮಾಡುವುದರ ಬಗ್ಗೆ ಗಮನಕ್ಕೆ ತರುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಪಿ.ರಮೇಶಕುಮಾರ ಅವರಿಗೆ ವೀಣಾ ತಿಳಿಸಿದರು.

ಆಗ ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಮೋಡ ಬಿತ್ತನೆಯಿಂದ ಮಳೆಯಾದ ಉದಾಹರಣೆ ಎಲ್ಲಿಯೂ ಇಲ್ಲ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಬದಲಿಗೆ ಸಂಕಷ್ಟದಲ್ಲಿರುವ ರೈತರ ಬಗ್ಗೆ ಸಮೀಕ್ಷೆ ನಡೆಸಿ ಅದೇ ಹಣದಲ್ಲಿ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಬೆಳೆ ಸಂಪೂರ್ಣ ಬೋಗಸ್ ಆಗಿದ್ದು, ಅಧಿಕಾರಿಗಳು ಗಮನಹರಿಸಬೇಕು ಎಂದರು.

ಕೃಷಿ ಇಲಾಖೆ ನೀಡುತ್ತಿರುವ ತಾಡಪತ್ರಿ ಅರ್ಹ ರೈತ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಅವರ ಆಯ್ಕೆ ಮಾಡಲು ಯಾವ ಮಾನದಂಡ ಉಪಯೋಗಿಸುತ್ತೀರಿ. ಸಚಿವರು ಹಾಗೂ ಶಾಸಕರ ಶಿಫಾರಸ್ಸು ಪತ್ರಗಳು ಮಾನದಂಡವಾಗುತ್ತವೆಯೇ ಎಂದು ಸದಸ್ಯ ಮಹಾಂತೇಶ ಉದಪುಡಿ ಅವರು ಕೃಷಿ ಇಲಾಖೆ ಅಧಿ ಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿ ಯಿಸಿದ ಅಧಿಕಾರಿ, ಸಿನಿಯಾರಿಟಿ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ ಯಾವುದೇ ಶಿಫಾರಸುಗಳ ಅಗತ್ಯ ಇಲ್ಲ ಎಂದು ತಿಳಿಸಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್, ಉಪಕಾರ್ಯದರ್ಶಿ ಅಮರೇಶ ನಾಯಕ  ಅಧಿಕಾರಿಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.