ADVERTISEMENT

ಸರ್ಕಾರದಿಂದ ₹1 ಕೋಟಿ ಬಿಡುಗಡೆ!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:33 IST
Last Updated 25 ಏಪ್ರಿಲ್ 2017, 6:33 IST

ಬಾಗಲಕೋಟೆ: ‘ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ನಿಭಾಯಿಸಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಲು ಹಣದ ಕೊರತೆ ಇಲ್ಲ’ ಎಂದು ಸೋಮವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯ ಸಭೆಯಲ್ಲಿ ಸ್ಪಷ್ಟಪಡಿಸಿದ ಅಧ್ಯಕ್ಷೆ ವೀಣಾ ಕಾಶಪ್ಪನವರ, ‘ತುರ್ತು ಪರಿಸ್ಥಿತಿ ನಿಭಾಯಿಸಲು ಸರ್ಕಾರದಿಂದ  ₹1 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.

‘ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾದಲ್ಲಿ ಕೊಳವೆಬಾವಿ ಕೊರೆಸಲು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲು ಸದಸ್ಯರು ಕ್ರಿಯಾ ಯೋಜನೆ ರೂಪಿಸಿಕೊಟ್ಟಲ್ಲಿ ಅನುದಾನ ನೀಡಲಾಗುವುದು’ ಎಂದು ತಿಳಿಸಿದರು.‘ಸರ್ಕಾರದ ಅನುದಾನವನ್ನು ಕೊಳವೆಬಾವಿ ಕೊರೆಸಲು ಮಾತ್ರ ಬಳಸಬೇಕು. ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕಕ್ಕೆ ವಿಪತ್ತು ನಿರ್ವಹಣಾ ನಿಧಿ (ಸಿಆರ್ಎಫ್) ಅನುದಾನದಲ್ಲಿ ಖರ್ಚು ಮಾಡಿ’ ಎಂದು ಸೂಚಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಆಗಬಹುದಾದ ಗ್ರಾಮಗಳನ್ನು ತಾಲ್ಲೂಕುವಾರು ಪಟ್ಟಿ ಮಾಡಿ ಎರಡು ದಿನಗಳಲ್ಲಿ ಕೆಲಸ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೇವಲ ಕೊಳವೆಬಾವಿ ಹಾಕಿದರೆ ಸಾಲದು, ಪೈಪ್‌ಲೈನ್ ಮಾಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಿ’ ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ  ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು. 

ADVERTISEMENT

ಕೊಳವೆಬಾವಿ ವಿಫಲವಾದಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಬೇಕು. ಖಾಸಗಿಯವರಿಂದ ನೀರು ಸಿಗದೇ ಹೋದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.‘ಕುಡಿಯುವ ನೀರಿಗಾಗಿ ಕೊರೆಯಲಾದ ಕೊಳವೆಬಾವಿಗಳ ಮಾಹಿತಿ ಪಡೆದು ಅವುಗಳ ಸ್ಥಿತಿಗತಿ ಬಗ್ಗೆ ಚರ್ಚಿಸಲಾಯಿತು. ಪುನರ್ವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ’ ಎಂದು ವೀಣಾ ತಿಳಿಸಿದರು.

‘ಮಕ್ಕಳು ತೆರೆದ ಕೊಳವೆ ಬಾವಿಗೆ ಬಿದ್ದು ಮೃತಪಟ್ಟ ಪ್ರಕರಣಗಳು ಮತ್ತೆ ಮರುಕಳುಹಿಸುತ್ತಿವೆ. ಅಥಣಿ ತಾಲ್ಲೂಕಿನ ಝಂಜರವಾಡ ಗ್ರಾಮದಲ್ಲಿ ಆರು ವರ್ಷದ ಬಾಲಕಿ ಕಾವೇರಿ ಕೊಳವೆಬಾವಿಗೆ ಬಿದ್ದ ಪ್ರಕರಣ ಸಂಭವಿಸಿದೆ. ಕೊಳವೆಬಾವಿ ಕೊರೆದಾಗ ತಕ್ಷಣ ಮುಚ್ಚುವ ಕೆಲಸವಾಗಬೇಕು. ಜಿಲ್ಲೆಯಲ್ಲಿರುವ ವಿಫಲ ಕೊಳವೆ ಬಾವಿಗಳನ್ನು ಮುಚ್ಚಲು ಕ್ರಮಕೈಗೊಳ್ಳುವುದರ ಜೊತೆಗೆ ವಿಫಲವಾದ ಖಾಸಗಿ ಕೊಳವೆಬಾವಿಗಳನ್ನು ಮುಚ್ಚಿಸುವ ಕೆಲಸವಾಗಬೇಕು. ಖಾಸಗಿ ಕೊಳವೆಬಾವಿ ಮಾಲೀಕರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಖಾರಿ ವಿಕಾಸ್ ಸುರಳಕರ್ ಸಭೆಗೆ ಹೇಳಿದರು.

ಜಿ.ಪಂ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ತಲೆದೂರಿರುವ ಹಾಗೂ ಮುಂದಿನ ದಿನಗಳಲ್ಲಿ ಕಂಡುಬರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮಗಳ ಮಾಹಿತಿ ನೀಡಿದಾಗ ಅಧಿಕಾರಿಗಳು ಸಮಸ್ಯೆ ಕಂಡುಬರುವ ಗ್ರಾಮಗಳ, ಜನವಸತಿಗಳ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಅಧ್ಯಕ್ಷರು ಸೂಚಿಸಿದರು.
ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಯೋಜನಾ ನಿರ್ದೇಶಕ ಎಸ್.ಎಸ್.ಹಿರೇಮಠ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.