ADVERTISEMENT

ಸಹಸ್ರಾರು ತೆಂಗಿನ ಕಾಯಿಗಳಲ್ಲಿ ಅರಳಿದ ಗಣಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 6:03 IST
Last Updated 28 ಆಗಸ್ಟ್ 2017, 6:03 IST
ಬಾಗಲಕೋಟೆಯ ನವನಗರದ ಸೆಕ್ಟರ್ ನಂ.12ರಲ್ಲಿ ಸಂಗಮೇಶ್ವರ ಯುವಕ ಮಂಡಳ ವತಿಯಿಂದ ಪ್ರತಿಷ್ಠಾಪಿಸಿರುವ ತೆಂಗಿನಕಾಯಿ ಗಣಪ
ಬಾಗಲಕೋಟೆಯ ನವನಗರದ ಸೆಕ್ಟರ್ ನಂ.12ರಲ್ಲಿ ಸಂಗಮೇಶ್ವರ ಯುವಕ ಮಂಡಳ ವತಿಯಿಂದ ಪ್ರತಿಷ್ಠಾಪಿಸಿರುವ ತೆಂಗಿನಕಾಯಿ ಗಣಪ   

ಬಾಗಲಕೋಟೆ: ಇಲ್ಲಿನ ನವನಗರದ ಸೆಕ್ಟರ್ ನಂ.12ರಲ್ಲಿ ಸಂಗಮೇಶ್ವರ ಯುವಕ ಮಂಡಳ ವತಿಯಿಂದ ಕೇವಲ ತೆಂಗಿನಕಾಯಿಗಳಿಂದಲೇ ಪ್ರತಿಷ್ಠಾಪನೆ ಮಾಡಿರುವ ಗಣೇಶ ಮೂರ್ತಿ ಈಗ ಎಲ್ಲರ ಆಕರ್ಷಣೆ. ಪರಿಸರ ಪ್ರೇಮ ಸಾರುವ ಮೂಲಕ ಮಾದರಿಯಾಗಿದೆ.

ಸುಮಾರು 1700ಕ್ಕೂ ಅಧಿಕ ತೆಂಗಿನಕಾಯಿ ಬಳಸಿಕೊಂಡು ಸತತ ನಾಲ್ಕು ದಿನಗಳ ಕಾಲ ಯುವಕ ಮಂಡಳದ 15ಕ್ಕೂ ಹೆಚ್ಚು ಮಂದಿ, ಚಿತ್ರಕಲಾ ಶಿಕ್ಷಕ ಬಸವರಾಜ ಅಂಬಿಗೇರ ನೇತೃತ್ವದಲ್ಲಿ ಮೂರ್ತಿಯನ್ನು ತಯಾರಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಮೊದಲಿಗೆ ಬಿದಿರಿನಿಂದ ಮೂರ್ತಿಯ ರೂಪವನ್ನು ಸಿದ್ದಪಡಿಸಿಕೊಂಡು ಅದಕ್ಕೆ ಒಣ ಗರಿಕೆ (ಹುಲ್ಲು) ಹಾಕಿ ನಂತರ ದಾರದಿಂದ ಪೋಣಿಸಿಕೊಂಡ ತೆಂಗಿನಕಾಯಿಗಳನ್ನು ಜೋಡಿಸಿ ಸಿದ್ಧಪಡಿಸಲಾಗಿದೆ. ಗಣೇಶನ ವಾಹನವಾದ ಇಲಿಯನ್ನು ಸಹಿತ ತೆಂಗಿನಕಾಯಿಯಲ್ಲಿ ಸಿದ್ಧಪಡಿಸಿರುವುದು ಮತ್ತೊಂದು ವಿಶೇಷ.

ADVERTISEMENT

‘ಮಣ್ಣಿನಿಂದ ತಯಾರಿಸಿದ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಬದಲಿಗೆ ಗಣೇಶನಿಗೆ ಪ್ರಿಯವಾದ ತೆಂಗಿನಕಾಯಿಯಿಂದಲೇ ಮೂರ್ತಿ ಸಿದ್ಧಪಡಿಸಿದರೆ ಪರಿಸರಕ್ಕೆ ಯಾವುದೇ ಹಾನಿ ಇಲ್ಲ. ಹಾಗಾಗಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ಪ್ರತಿಷ್ಠಾಪ ನೆಯ ಹತ್ತನೇ ವರ್ಷದಲ್ಲಿ ಈ ನಿರ್ಧಾರ ಮಾಡಲಾ ಗಿದೆ’ ಎಂದು ಮುಖಂಡ ಬಸವರಾಜ ಹೆಳವರ್ ಹೇಳಿದರು.

‘ಪ್ಲಾಸ್ಟರ್ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸಿದ ಮೂರ್ತಿಗಳ ತಯಾರಿಕೆ ಹಾಗೂ ಪ್ರತಿಷ್ಠಾಪನೆ ಮಾಡುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿರುವುದು ಒಳ್ಳೆಯ ಕೆಲಸವಾಗಿದೆ. ಅದು ಪರಿಸರಕ್ಕೆ ಹಾಗೂ ಜೀವ ಸಂಕುಲಕ್ಕೂ ಹಾನಿಯುಂಟು ಮಾಡುತ್ತದೆ. ಹಾಗಾಗಿ ಪರಿಸರ ಪ್ರೇಮಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿದ್ದೇವೆ’ ಎಂದು ಯುವಕ ಮಂಡಳಿಯ ಕುಮಾರ ಅಕ್ಕಿಮಡಿ ತಿಳಿಸಿದರು.

‘ಗಣೇಶನ ಮೂರ್ತಿ ಎಂದಾಗ ಕೊನೆಯಲ್ಲಿ ವಿಸರ್ಜನೆ ಮಾಡಬೇಕು ಎನ್ನುವುದು ಬಹುತೇಕರ ತಲೆಯಲ್ಲಿ ಹಾಸುಹೊಕ್ಕಾಗಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಅದನ್ನು ಮಣ್ಣಿಗೆ ಸೇರಿಸಿದರೆ ಮೊಳಕೆಯೊಡೆದು ಸಸಿಯಾಗುತ್ತದೆ. ಅದೊಂದು ಪವಿತ್ರ ಮರವಾಗಿ ಬೆಳೆದು ಕೇಳಿದ್ದನ್ನು ಕರುಣಿಸುವ ಕಲ್ಪವೃಕ್ಷವಾಗುತ್ತದೆ. ಹಾಗಾಗಿ ಕೊನೆಯ ದಿನ ಈ ಕಾಯಿ ಗಳನ್ನು ಆಶೀರ್ವಾದ ರೂಪ ದಲ್ಲಿ ಒಂದಕ್ಕೆ ₹ 25 ರಂತೆ ಭಕ್ತ ರಿಗೆ ವಿತರಿಸಲಾ ಗುತ್ತದೆ’ ಎಂದು ಉಪನ್ಯಾಸಕ ಪ್ರವೀಣ ಅಕ್ಕಿಮರಡಿ  ಮತ್ತು ಸಂಜಯ ಹೆಳವರ್  ತಿಳಿಸಿದರು.

ಮಂಡಳಿಯ ಬಹುತೇಕ ಸದಸ್ಯರು ಉಪನ್ಯಾಸಕ, ಶಿಕ್ಷಕ, ಆಟೊ ಚಾಲಕ ಹೀಗೆ ವಿವಿಧ ಕೆಲಸಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ವರ್ಷದಲ್ಲಿ ಒಂದು ಸಾರಿ ಮಾತ್ರ ಬರುವ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಬೇಕು ಎನ್ನುವ ಉದ್ದೇಶದಿಂದ ತಮ್ಮ ವೈಯಕ್ತಿಕ ಕೆಲಸದ ಒತ್ತಡದ ನಡುವೆಯೂ ಗಣಪನ ಕಾಯಕದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ.

ಐದು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜಾ ಕೈಂಕರ್ಯ, ಪ್ರಸಾದ ವ್ಯವಸ್ಥೆ ಹಾಗೂ ಸಂಜೆ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತವೆ. ಕಾಲೊನಿಯ ಪ್ರತೀ ಮನೆಯಲ್ಲೂ ಕೂಡಾ ಹಬ್ಬದ ಕಳೆ ಕಟ್ಟಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.