ADVERTISEMENT

ಸಾಗುವಳಿ ಭೂಮಿ ಸಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:21 IST
Last Updated 17 ಜುಲೈ 2017, 7:21 IST

ಗುಳೇದಗುಡ್ಡ: ಗ್ರಾಮೀಣ ಭಾಗದ ರೈತರು ಹಲವು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಅರಣ್ಯ ಭೂಮಿಯನ್ನು ‘ಅಕ್ರಮ ಸಕ್ರಮ ಕಾಯ್ದೆ’ ಅಡಿ ಸಕ್ರಮ ಗೊಳಿಸಬೇಕು ಎಂದು ಕಟಗಿನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಶನಿವಾರ ಒತ್ತಾಯಿಸಿದ್ದಾರೆ.

‘ಗ್ರಾಮದ ಸರ್ವೆ ನಂ. 56ರ ಅರಣ್ಯ ಪ್ರದೇಶದಲ್ಲಿ 4 ಎಕರೆ ಪಾಳು ಬಿದ್ದ ಜಾಗವಿದೆ. ಅಲ್ಲಿ 1974ರಿಂದ ನಮ್ಮ ಹಿರಿಯರಾದಿಯಾಗಿ ನಾವು ಸಾಗುವಳಿ ಮಾಡಿಕೊಂಡು ಬಂದಿದ್ದೇವೆ. ಅಂದಿನಿಂದಲೂ ಆ ಜಾಗ ನಮ್ಮ ಬದುಕಿಗೆ ದಾರಿಯಾಗಿದೆ. ಅಲ್ಲಿ ಯಾವುದೇ ರೀತಿಯ ಬೆಲೆಬಾಳುವ ಮರಗಳಿಲ್ಲ. ಹಾಗಾಗಿ, ಆ ಜಾಗವನ್ನು ನಮ್ಮ ಹೆಸರಿಗೆ ಸಕ್ರಮ ಮಾಡಿಕೊಡಬೇಕು’ ಎಂದು ಆಸಂಗೆಪ್ಪ ನಕ್ಕರಗುಂದಿ ಅರಣ್ಯ ಅಧಿಕಾರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

‘ಕಟಗಿನಹಳ್ಳಿಯಲ್ಲಿ ಸಾಗುವಳಿ ಮಾಡುತ್ತಿರುವ ಜಮೀನನ್ನು ನಿಯಮಾನುಸಾರ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರವಸೆ ನೀಡಿದ್ದಾರೆ’ ಎಂದು ಆಸಂಗೆಪ್ಪ ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ ಬಗರಹುಕುಂ ಕಾಯ್ದೆಯನ್ನು ಜಾರಿಗೆ ತಂದಿದೆ. ಅಲ್ಲದೆ, ಬಡವರು ಸಾಗುವಳಿ ಮಾಡುತ್ತಿರುವ ಜಮೀನನ್ನು ಅವರ ಹೆಸರಿಗೇ ಸಕ್ರಮ ಮಾಡಿಕೊಡಬೇಕೆಂದು ಎರಡೂವರೆ ದಶಕದಿಂದ ಹೋರಾಡುತ್ತಿದ್ದೇವೆ. ಈ ಕುರಿತು ಅಧಿಕಾರಿಗಳಿಗೆ ಮನವಿ ಕೂಡ ಮಾಡಿದ್ದೇವೆ’ ಎಂದು ಎಂದು ತಿಪ್ಪಣ್ಣ ಎಸ್. ಗೌಡರ ಮತ್ತು ಕರಿಯಪ್ಪ ಎಸ್. ಡೊಳ್ಳಿನ ಹೇಳಿದರು.

ಸಸಿಗಳನ್ನು ಕಿತ್ತಿಲ್ಲ: ‘ಅಕ್ರಮವಾಗಿ ಸಾಗುವಳಿ ಮಾಡುತ್ತ ಬಂದಿರುವ ಭೂಮಿಯ ಪಕ್ಕದಲ್ಲಿ ಅರಣ್ಯ ಇಲಾಖೆ ನೆಟ್ಟಿರುವ ವಿವಿಧ ಜಾತಿಯ ಸಸಿಗಳನ್ನು ಕಿತ್ತು ಹಾಕದೆ, ಸಂರಕ್ಷಿಸಿದ್ದೇವೆ. ಈ ಅರಣ್ಯ ಜಮೀನನ್ನು ನಾವು ಒತ್ತುವರಿ ಮಾಡಿಲ್ಲ. ಹಿರಿಯರ ಕಾಲದಿಂದ ಇಲ್ಲಿ ಸಾಗುವಳಿ ಮಾಡುತ್ತಿದ್ದೇವೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬೈಲಪ್ಪ ಕನಕಪ್ಪ ಗೌಡರ ಹೇಳಿದರು.

‘ಬಡ ರೈತರು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಿ, ಹಕ್ಕು ಪತ್ರ ನೀಡಬೇಕು’ ಎಂದು ಗ್ರಾಮದ ಪ್ರಗತಿಪರ ರೈತರಾದ ಪ್ರಕಾಶ ಗೌಡರ ಮತ್ತು ಶಿವಪ್ಪ ಹಾದಿಮನಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.