ADVERTISEMENT

‘ಹಿಂದುಳಿದವರಿಗೆ ಪ್ರಾತಿನಿಧ್ಯವೇ ಮೀಸಲಾತಿಯ ಆಶಯ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 7:35 IST
Last Updated 17 ಏಪ್ರಿಲ್ 2017, 7:35 IST

ಬಾಗಲಕೋಟೆ: ‘ಮೀಸಲಾತಿ  ಮೂಲ ಉದ್ದೇಶ ಬಹುತೇಕರು ಅರ್ಥಮಾಡಿ ಕೊಂಡಿಲ್ಲ. ಹಿಂದುಳಿದವರಿಗೆ ಪ್ರಾತಿನಿಧ್ಯ ಕಲ್ಪಿಸುವುದೇ ಮೀಸಲಾತಿ. ಭಾರತ ದೇಶವಲ್ಲದೆ, ಬೇರೆ ದೇಶಗಳಲ್ಲೂ ಈ ವ್ಯವಸ್ಥೆ ಜಾರಿಯಲ್ಲಿದೆ’ ಎಂದು ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಬಿ.ಗೋಪಾಲ್ ಅಭಿಪ್ರಾಯ ಪಟ್ಟರು.ಅಂಬೇಡ್ಕರ್ ಅವರ 126ನೇ ಜನ್ಮ ದಿನೋತ್ಸವದ ಅಂಗವಾಗಿ ನವನಗರದ ಅಂಬೇಡ್ಕರ್ ಭವನದಲ್ಲಿ ಪ್ರಜಾ ಪರಿ ವರ್ತನ ವೇದಿಕೆ ಭಾನುವಾರ ಆಯೋಜಿ ಸಿದ್ದ ‘ಬಡ್ತಿಯಲ್ಲಿ ಮೀಸಲಾತಿ’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಹಿಂದೂಪರ ಸಂಘಟನೆಗಳು ಬಿಜೆಪಿಯೊಂದಿಗೆ ಸೇರಿ ಪರಿಶಿಷ್ಟರ ವಿರುದ್ಧ ಮೀಸಲಾತಿ ವಿರೋಧಿ ಷಡ್ಯಂತ್ರ ರೂಪಿಸುತ್ತಿವೆ. ಅದೇ ಕಾರಣಕ್ಕೆ ಜಾತಿ ಆಧಾರಿತ ಮೀಸಲಾತಿ ರದ್ದುಮಾಡಿ, ಆರ್ಥಿಕತೆ ಆಧಾರಿತ ಮೀಸಲಾತಿ ಜಾರಿಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆಗ್ರಹಿಸುತ್ತಿದ್ದಾರೆ’ ಎಂದರು.ಪ್ರಜಾ ಪರಿವರ್ತನ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಹಾರಾಜನವರ ಮಾತನಾಡಿ, ‘ಮೀಸಲಾತಿ ವಿರೋಧಿಗಳಿಗೆ ಸರಿಯಾದ ಉತ್ತರ ಕೊಡಲಾಗುತ್ತಿಲ್ಲ.

ಶೇ 50ರಷ್ಟು ಮೀಸಲಾತಿಯಲ್ಲಿ ದಲಿತರಿಗೆ ಶೇ 18ರಷ್ಟು, ಹಿಂದುಳಿದ ವರ್ಗಗಳಿಗೆ ಶೇ 32ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ದಲಿತರಿಗಿಂತ ಹೆಚ್ಚು ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಹಿಂದುಳಿದ ವರ್ಗದವರೇ ದಲಿತರ ಮೀಸಲಾತಿ ವಿರುದ್ಧ ಮಾತನಾಡು ತ್ತಿದ್ದಾರೆ ಎಂದು ಟೀಕಿಸಿದರು.‘ನ್ಯಾಯಾಂಗ ನೀಡುವ ತೀರ್ಪು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆಯಾಗುವ ರೀತಿಯೇ, ಸಂವಿಧಾನಾತ್ಮಕವಾಗಿ ಬಂದಿರುವ ಮೀಸಲಾತಿ ಪ್ರಶ್ನಿಸುವುದು ಕೂಡಾ ಸಂವಿಧಾನ ನಿಂದನೆಯಾ ಗುತ್ತದೆ. ಹಾಗಾಗಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ  ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ಮಾಡಬೇಕು ಎಂದು ಹೇಳಿದರು.

ADVERTISEMENT

‘ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ವ್ಯತಿರಿಕ್ತವಾಗಿ ಸುಪ್ರೀಂಕೋರ್ಟ್‌ನ ತೀರ್ಪು ಬಂದಲ್ಲಿ ಎಲ್ಲಾ ನೌಕರರೂ ಕೆಲಸ ಸ್ಥಗಿತಗೊಳಿಸಿ, ಸಾಮೂಹಿಕ ಪ್ರತಿಭಟನೆಗೆ ಸಿದ್ಧರಾಗಬೇಕಿದೆ’ ಎಂದರು.ವಾಣಿಜ್ಯ ತೆರಿಗೆ ಇಲಾಖೆ  ಆಯುಕ್ತ ಶಿವಾನಂದ ಆಲಬಾಳ, ಕೆ.ದಾಸಪ್ರಕಾಶ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ವೈ. ಬೀಳಗಿ,     ಬಂಜಾರ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ  ನಾಯಕ, ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಾಥಮಿಕ ಮತ್ತು  ಪ್ರೌಢಶಾಲೆ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಸಿ.ಯಂಕಂಚಿ, ಅಶೋಕ ಭಜಂತ್ರಿ, ಆರ್.ಜಿ.ಸನ್ನಿ, ಹುಸನಪ್ಪ ಹಿರೇಮನಿ, ಎ.ಎಸ್. ಗಡ್ಡಿ, ಚಂದ್ರಶೇಖರ್ ಮುಂಡೆವಾಡಿ, ವೈ.ಎಚ್. ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.