ADVERTISEMENT

ಸಂದಿಗ್ಧ ಪರಿಸ್ಥಿತಿಯಲ್ಲಿ ಕರಕುಶಲಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 8:43 IST
Last Updated 20 ಜನವರಿ 2018, 8:43 IST

ಅಮೀನಗಡ: ‘ದೇಶದಲ್ಲಿ ಶ್ರಮಜೀವಿಗಳಿಗೆ ಅವರ ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗಬೇಕು. ಕೈ ತುಂಬ ದುಡಿಯುವವನು ಹೊಟ್ಟೆ ತುಂಬ ಉಂಡು ಮಲಗುವಂತಾಗಬೇಕು. ಅದೇ ನಮ್ಮ ಹೋರಾಟದ ಪ್ರಮುಖ ಉದ್ದೇಶ’ ಎಂದು ರಂಗಕರ್ಮಿ ಹೋರಾಟಗಾರ ಪ್ರಸನ್ನ ಹೇಳಿದರು. ಪಟ್ಟಣದ ಜಯಶ್ರೀ ನೇಕಾರ ಸಹಕಾರಿ ಸಂಘಕ್ಕೆ ಭೇಟಿ ನೀಡಿ ನಿರ್ದೇಶಕ ಮಂಡಳಿ ಹಾಗೂ ನೇಕಾರ ಧುರೀಣರ ಸಭೆಯಲ್ಲಿ ಮಾತನಾಡಿದರು.

‘ಪವರ್‌ಲೂಮ್‌ಗೆ ಬೆಂಬಲಿಸಿದರೆ ಕೈಮಗ್ಗ ನಶಿಸುತ್ತದೆ. ಕೈಮಗ್ಗಕ್ಕೆ ಹೆಚ್ಚು ಒತ್ತು ನೀಡಿದರೆ ಪವರ್‌ಲೂಮ್‌ ನಂಬಿಕೊಂಡಿರುವ ನೇಕಾರರು ತೊಂದರೆಗೊಳಗಾಗುತ್ತಾರೆ. ಇಂಥಹ ಸಂದಿಗ್ಧ ಸ್ಥಿತಿಯಲ್ಲಿ ಹೋರಾಟದ ಹೆಜ್ಜೆ ಸಾಗುತ್ತದೆ’ ಎಂದರು.

‘ದೇಶದಲ್ಲಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಮ್ಮ ಕರಗಳಿಂದಲೇ ಉತ್ಪಾದನೆಯನ್ನು ಮಾಡಿ ಜೀವನವನ್ನು ಸಾಗಿಸುವ ಶ್ರಮ ಜೀವಿಗಳ ಸಂಖ್ಯೆ ಶೇ 70 ರಷ್ಟಿದ್ದು, ಯಾಂತ್ರಿಕತೆಯಿಂದ ಬದುಕುವ ಜನತೆ ಶೇ30 ರಷ್ಟಿದ್ದಾರೆ. ಆದರೆ ಶ್ರಮಜೀವಿಗಳಿಗೆ ಅವರ ಉತ್ಮನ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಯಂತ್ರಗಳ ಉತ್ಪಾದಕರು ಇಂದು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ. ಕರಕುಶಲ ಕರ್ಮಿಗಳು ತೃಪ್ತಿಯಿಂದ ಊಟ ಮಾಡಲೂ ಪರಿತಪಿಸುತ್ತಿದ್ದಾರೆ. ವಿದ್ಯುತ್ ಮಗ್ಗ ಹಾಗೂ ಕೈಮಗ್ಗಗಳನ್ನು ಬೇರೆ ಬೇರೆಯಾಗಿ ವಿಂಗಡಿಸಬೇಕು. ಎರಡೂ ಉತ್ಪನ್ನಗಳನ್ನು ಒಂದೇ ಕಡೆ ಸೇರಿಸುವುದು ಒಳಿತಲ್ಲ’ ಎಂದರು.

ADVERTISEMENT

ಕಾಯಕ ಜೀವಿಗಳ ಸಮಾವೇಶ: ಜ.30 ರಂದು ವಿಜಯಪುರ ಜಿಲ್ಲೇ ಬಸವನ ಬಾಗೇವಾಡಿ ತಾಲ್ಲೂಕಿನ ಕೋಡೇಕಲ್ಲಿನಲ್ಲಿ ವಿವಿಧ ಕಾಯಕಗಳಲ್ಲಿ ತೊಡಗಿಸಿಕೊಂಡಿರುವವರನ್ನು ಒಗ್ಗೂಡಿಸಿ, ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಹಿಂದೆ ಬಸವಣ್ಣವನರು ಸರ್ವರ ಕಾಯಕವನ್ನು ಗುರುತಿಸಿ ಎಲ್ಲರೂ ಒಂದೇ ಎಂದು ಲಿಂಗದೀಕ್ಷೆ ನೀಡಿ ಸಮಾನತೆ ಸಾರಿದಂತೆ ಶ್ರಮಜೀವಿಗಳದ್ದೇ ನಿಜವಾದ ಧರ್ಮ, ಕಾಯಕವೇ ಕೈಲಾಸ, ದುಡಿದುಣ್ಣುವವನದೇ ನಿಜವಾದ ಧರ್ಮ ಎಂಬುದನ್ನು ಅರ್ಥೈಸಿಕೊಳ್ಳುವ ಸಮಾವೇಶ ಜರುಗಲಿದೆ. ಇಳಕಲ್ಲಿನ ಡಾ.ಮಹಾಂತ ಶಿವಯೋಗಿಗಳು, ಗುರುಮಹಾಂತಶ್ರೀಗಳನ್ನೂ ಆಹ್ವಾನಿಸಲಾಗಿದೆ, ವಿವಿಧ ಮಠಾಧೀಶರೂ ಪಾಲ್ಗೂಳ್ಳಲಿದ್ದು ಈ ಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುಬೇಕೆಂದು ಮನವಿ ಮಾಡಿಕೊಂಡರು.

ಜಯಶ್ರೀ ನೇಕಾರ ಸಹಕಾರ ಸಂಘದ ಅಧ್ಯಕ್ಷ ಪ್ರಭು ತೆಗ್ಗಿನಮನಿ, ಮಲ್ಲೇಶಪ್ಪ ಹೊದ್ಲೂರ ಮಾತಾನಾಡಿದರು. ಸಾಮಾಜಿಕ ಕಾರ್ಯಕರ್ತರಾದ ಜಾಹ್ನವಿ, ದಿನೇಶ, ಗಿರೀಶ, ಕೆಂಚರೆಡ್ಡಿ, ನಿವೃತ್ತ ಶಿಕ್ಷಕ ಎಸ್.ಎನ್.ಶಾಂತಗೇರಿ ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಅರಬಿ ಸ್ವಾಗತಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.