ADVERTISEMENT

ಅಂಬಿಗರು ನಂಬಿಗಸ್ಥ ಜನ: ಶಾಸಕ ಮೇಟಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 8:54 IST
Last Updated 22 ಜನವರಿ 2018, 8:54 IST
ಬಾಗಲಕೋಟೆಯಲ್ಲಿ ಭಾನುವಾರ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಚೌಡಯ್ಯನವರ ಭಾವಚಿತ್ರ ಮೆರವಣಿಗೆ ಕಲಾ ತಂಡಗಳ ಸಂಭ್ರಮದೊಂದಿಗೆ ನೆರವೇರಿತು
ಬಾಗಲಕೋಟೆಯಲ್ಲಿ ಭಾನುವಾರ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಚೌಡಯ್ಯನವರ ಭಾವಚಿತ್ರ ಮೆರವಣಿಗೆ ಕಲಾ ತಂಡಗಳ ಸಂಭ್ರಮದೊಂದಿಗೆ ನೆರವೇರಿತು   

ಬಾಗಲಕೋಟೆ: ಹಿಂದೆ ರಸ್ತೆ, ಸೇತುವುಗಳಿಲ್ಲದೇ ಊರಿಂದೂರಿಗೆ ಸಂಪರ್ಕಕ್ಕಾಗಿ ಜನ ನಾವೆ, ಹರಿಗೋಲು ಅವಲಂಬಿಸಿದ್ದರು. ಹಲವು ತುರ್ತು ಸಂದರ್ಭದಲ್ಲಿ ನದಿಯ ಈ ದಡದಿಂದ ಆ ದಡಕ್ಕೆ ತಮ್ಮ ಪ್ರಾಣ ಪಣಕ್ಕಿಟ್ಟು ಜನರನ್ನು ಅಂಬಿಗರು ದಡ ತಲುಪಿಸುತ್ತಿದ್ದರು ಎಂದು ಶಾಸಕ ಎಚ್.ವೈ.ಮೇಟಿ ಸ್ಮರಿಸಿದರು.

ಇಲ್ಲಿನ ನವನಗರದ ಕಲಾಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸದಾ ಜನರ ನೆರವಿಗೆ ನಿಲ್ಲುತ್ತಿದ್ದ ಅಂಬಿಗರು ಅದೇ ಕಾರಣಕ್ಕೆ ಎಲ್ಲಾ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಕಾಯಕದ ಮೇಲೆ ಜಾತಿಗಳಿರುವದನ್ನು ಗಮನಿಸಿದ ಬಸವಣ್ಣ ಎಲ್ಲರನ್ನು ಒಗ್ಗೂಡಿಸಿ ಕ್ರಾಂತಿ ಮಾಡಿದರು. ಅಂತಹ ಶರಣರ ಸಾಲಿನ ಅಂಬಿಗರ ಚೌಡಯ್ಯ ತನ್ನ ಹರಿತವಾದ ವಚನ ಸಾಹಿತ್ಯದೊಂದಿಗೆ ಸಮಾಜಕ್ಕೆ ಬೆಳಕಾಗಿದ್ದರು ಎಂದರು.

ADVERTISEMENT

ಅಂಬಿಗರ ಸಮಾಜದ ಅಭಿವೃದ್ದಿಗೆ ನವನಗರದಲ್ಲಿ ಜಾಗೆ ನೀಡಲಾಗಿದೆ. ಸಮಾಜದ ಮುಖಂಡರು ಆ ಸ್ಥಳ ನಮಗೆ ಬೇಡ. ಬೇರೆಡೆ ಕೊಡಿ ಎಂದು ಮನವಿ ಮಾಡಿದ್ದಾರೆ. ಬಿಟಿಡಿಎ ಜೊತೆ ಚರ್ಚಿಸಿ ಆ ಕಾರ್ಯ ಮಾಡಿಕೊಡುವುದಾಗಿ ತಿಳಿಸಿದರು.

ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ, ‘ಅಂಬಿಗರ ಸಮಾಜ ಚಿಕ್ಕದಾಗಿದ್ದರೂ ಯಾವ ದೊಡ್ಡ ಸಮಾಜಕ್ಕೂ ಕಡಿಮೆ ಇಲ್ಲ. ಅಂಬಿಗರು ಕಾಯಕ ಜೀವಿಗಳಾಗಿದ್ದಾರೆ. ಅವರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾಗಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ ಮಾತನಾಡಿ, ‘ನಾನು ನಿನಗೆ ನೀನು ನನಗೆ, ನಾವು ನಿಮಗೆ ನೀವು ನಮಗೆ ಎಂಬ ತತ್ವದ ಮೇಲೆ ಅಂದಿನ ಶರಣರು ಬದುಕುತ್ತಿದ್ದರು. ಅದು ಸದಾ ಅನುಕರಣೀಯ’ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪರಮರಾಮಾರೂಢ ಶ್ರೀಗಳು ಮಾತನಾಡಿ, ‘ಬಿಜ್ಜಳನ ದುರಾಡಳಿತಕ್ಕೆ ಬೇಸತ್ತ ಬಸವಣ್ಣ ಕ್ರಾಂತಿಮಾಡುವ ಸಮಯದಲ್ಲಿ ಅವನಿಗೆ ಬೆಂಗಾವಲಾಗಿ ನಿಂತ ಶರಣರೆಂದರೆ ಮಡಿವಾಳ ಮಾಚಿದೇವ ಹಾಗೂ ಅಂಬಿಗರ ಚೌಡಯ್ಯ ಎಂದರು. ಬಸವಣ್ಣನವರು ಚೌಡಯ್ಯನನ್ನು ನಿಜಶರಣ ಅಂಬಿಗರ ಚೌಡಯ್ಯ ಎಂದು ಕರೆದರು. ಅಂಬಿಗರ ಚೌಡಯ್ಯ ಬಡವಾನಿದ್ದರೂ, ಅಶಕ್ತನಾಗಿದ್ದರೂ ತನ್ನ ವಚನದ ನೇರ ನುಡಿಯಿಂದಾಗಿ ದಿಟ್ಟ ಶರಣರಾಗಿದ್ದರು’ ಎಂದರು.

ರಕ್ತದಾನ ಮಾಡಿದ ಅಂಬಿಗರ ಸಮಾಜದ ಯುವಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ, ಸಮಾಜದ ಮುಖಂಡರಾದ ಮರಿಯಪ್ಪ ಕಟ್ಟಿಮನಿ, ಹಣಮಂತ ಅಂಬಿಗೇರ, ಯಲ್ಲಪ್ಪ ಅಂಬಿಗೇರ, ಸಂಗಪ್ಪ ತಿಮ್ಮನ್ನವರ, ರಾಮಣ್ಣ ನಂದವಾಡಗಿ, ರಾಮಣ್ಣ ಕಟ್ಟಿಮನಿ, ಯಲ್ಲಪ್ಪ ಯಡಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ವಿ.ಎಸ್.ಹಿರೇಮಠ ಸ್ವಾಗತಿಸಿದರು. ಎಂ.ಬಿ.ಗುಡೂರ ವಂದಿಸಿದರು.

* * 

ನಿಜ ಶರಣರ ಆಕರ್ಷಕ ಮೆರವಣಿಗೆ

ಮುಂಜಾನೆ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ನವನಗರದ ಬಸ್ ನಿಲ್ದಾಣ, ಎಲ್ಐಸಿ ಸರ್ಕಲ್, ಎಸ್.ಬಿ.ಐ ಬ್ಯಾಂಕ್ ಮೂಲಕ ಕಲಾಭವನಕ್ಕೆ ಬಂದು ತಲುಪಿತು.

ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಶಾಸಕ ಎಚ್.ವೈ.ಮೇಟಿ, ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.