ADVERTISEMENT

‘ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಶಿಕ್ಷಣ ದೊರೆಯಲಿ’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:03 IST
Last Updated 9 ಫೆಬ್ರುವರಿ 2018, 9:03 IST

ಕೂಡಲಸಂಗಮ: ಗ್ರಾಮೀಣ ಪ್ರದೇಶದ ಮಕ್ಕಳಿಗೂ ಆಧುನಿಕ ತಂತ್ರಜ್ಞಾನದ ಶಿಕ್ಷಣ ದೊರೆಯಬೇಕು ಎಂದು ಸಿದ್ದಗಂಗಾ ವಸತಿ ಶಾಲೆಯ ಅಧ್ಯಕ್ಷ ಎಸ್.ಆರ್.ನವಲಿ ಹಿರೇಮಠ ಹೇಳಿದರು. ಇಲ್ಲಿನ ಪುನರ್ ವಸತಿ ಕೇಂದ್ರದ ಸಿದ್ಧಗಂಗಾ ವಸತಿ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ಶಾಲೆ ಸಿ.ಬಿ.ಎಸ್‌.ಸಿ ಯಿಂದ ಮಾನ್ಯತೆ ಪಡೆದಿದ್ದು, ಗ್ರಾಮೀಣ ಭಾಗದ ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಬಹುತೇಕ ಸಿ.ಬಿ.ಎಸ್‌.ಸಿ ಶಾಲೆಗಳು ನಗರ ಪ್ರದೇಶದಲ್ಲಿ ಇವೆ. ಸಿ.ಬಿ.ಎಸ್‌.ಸಿ ಗೆ ನುರಿತ ಬೋಧನೆ ಮಾಡುವ ಸಿಬ್ಬಂದಿ ಗ್ರಾಮೀಣ ಪ್ರದೇಶಕ್ಕೆ ಬರಲು ಹಿಂದೇಟು ಹಾಕುವ ಈ ದಿನಗಳಲ್ಲಿ ನಾವು ಉತ್ತಮ ಶಿಕ್ಷಕರನ್ನು ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಕರೆತಂದು ಈ ಭಾಗದ ಮಕ್ಕಳಿಗೆ ಗುಣ್ಣಮಟ್ಟದ ಶಿಕ್ಷಣವನ್ನು ಕೊಡುತ್ತಿದ್ದೇವೆ’ ಎಂದರು.

ಶಿಕ್ಷಣ ತಜ್ಞ ನಿಖಿತ್‌ರಾಜ್ ಮಾತನಾಡಿ, ‘ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಾಮಾನ್ಯ ಜನರಿಗೆ ಬದುಕುವ ಸ್ವಾತಂತ್ರ್ಯ ದೊರಕಿಲ್ಲ. ಈ ಸ್ವಾತಂತ್ರ್ಯವನ್ನು ಶಿಕ್ಷಣದ ಮೂಲಕ ಪಡೆಯುವ ಕಾರ್ಯವನ್ನು ಇಂದಿನ ಯುವ ಜನಾಂಗ ಮಾಡಬೇಕು. ಪಾಲಕರು, ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಕೊಟ್ಟು ಸಂಸ್ಕಾರ ಕೊಡದಿದ್ದರೆ ಉತ್ತಮ ಪ್ರಜೆಗಳು ನಿರ್ಮಾಣವಾಗಲು ಸಾಧ್ಯವಿಲ್ಲ. ಆದ್ದರಿಂದ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವು ಅಷ್ಟೇ ಅವಶ್ಯ’ ಎಂದರು.

ADVERTISEMENT

ಸಮಾರಂಭದಲ್ಲಿ ಡಾ.ನಾರಾಯಣ ವನಕಿ, ಪ್ರಗತಿಪರ ರೈತ ದೇವೇಂದ್ರಪ್ಪ ಬಳೂಟಗಿ, ರೇಖಾ ನವಲಿಹಿರೇಮಠ,ಸಿದ್ದು ನವಲಿಹಿರೇಮಠ, ಆಡಳಿತಾಧಿಕಾರಿ ಎಸ್.ಬಿ.ಕೋಟಿ, ಪ್ರಾಂಶುಪಾಲ ಶಿವಕುಮಾರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.