ADVERTISEMENT

‘ಕಾರ್ಮಿಕರ ಸ್ವಂತ ಮನೆ ನನಸು, ಕನಸು’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 8:40 IST
Last Updated 20 ಫೆಬ್ರುವರಿ 2018, 8:40 IST

ಬಾಗಲಕೋಟೆ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೌರ ಕಾರ್ಮಿಕರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಅವರಿಗೆ ಗೃಹಭಾಗ್ಯ ಯೋಜನೆ ಜಾರಿಗೊಳಿಸಿದ್ದು, ಅವರ ಸ್ವಂತ ಮನೆ ನನಸಾದಂತಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಹೇಳಿದರು.

ಇಲ್ಲಿನ ವಾರ್ಡ್ ನಂ.17ರಲ್ಲಿ ನಗರಸಭೆಯ ಎಸ್ಎಫ್‌ಸಿ ಯೋಜನೆಯಡಿ ₹13.50 ಲಕ್ಷ ವೆಚ್ಚದಲ್ಲಿ ಶಿಕ್ಕಲಗಾರ ಸಮುದಾಯ ಭವನ ಹಾಗೂ ತಲಾ ₹7.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 4 ಮನೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಸಕ ಎಚ್.ವೈ. ಮೇಟಿ ಮಾತನಾಡಿ, ‘ವಾರ್ಡ್‌ನ ಬಡವರಿಗೆ ಎಲ್‌ಪಿಜಿ ಗ್ಯಾಸ್, ಅಂಗವಿಕರಲಿಗೆ ತ್ರಿಚಕ್ರ ವಾಹನ, ರಸ್ತೆಗಳ ಸುಧಾರಣೆಗೆ ₹1.50 ಕೋಟಿ ಅನುದಾನ ಒದಗಿಸಲಾಗಿದೆ. ಮನೆ ಮನೆಗೂ ಕುಡಿಯುವ ನೀರಿನ ನಲ್ಲಿ ಸಂಪರ್ಕ ಒದಗಿಸಲಾಗಿದೆ’ ಎಂದರು.

ADVERTISEMENT

ಮಾಜಿ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ಹನಮಂತ ರಾಕುಂಪಿ ಪ್ರತಿಯೊಂದು ಇಲಾಖೆ, ಸಂಸ್ಥೆಯಿಂದ ಅನುದಾನ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಬಿಟಿಡಿಎ ಅಧ್ಯಕ್ಷ ಎ.ಡಿ. ಮೊಕಾಶಿ, ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಯಕುಂಪಿ, ಉಪಾಧ್ಯಕ್ಷೆ ಭಾರತಿ ಕೂಡಗಿ, ಸಭಾಪತಿ ಬಸವರಾಜ ನಾಶಿ, ಸದಸ್ಯರಾದ ಹನಮಂತ ರಾಕುಂಪಿ, ತಿಪ್ಪಣ್ಣ ನೀಲನಾಯಕ, ಹಾಜಿಸಾಬ್‌ ದಂಡಿನ, ಮಹಾಂತೇಶ ಹಿರೇಮಠ, ಯಲ್ಲಪ್ಪ ಬೆಂಡಿಗೇರಿ, ಪ್ರೇಮನಾಥ ಗರಸಂಗಿ, ಪೌರಾಯುಕ್ತ ಗಣಪತಿ ಪಾಟೀಲ, ಪರಿಸರ ಎಂಜಿನಿಯರ್ ಹನುಮಂತ ವಿ. ಕಲಾದಗಿ ನವೀದ್ ಖಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.