ADVERTISEMENT

ಅಧಿಕ ಶುಲ್ಕ ಪಡೆದರೆ ಕ್ರಮ: ಡಿಡಿಪಿಐ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 10:00 IST
Last Updated 20 ಏಪ್ರಿಲ್ 2017, 10:00 IST

ಬಳ್ಳಾರಿ: ಅನುದಾನ ರಹಿತ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಒಂದು ಬಾರಿ ಮಾತ್ರ ಬೋಧನಾ ಶುಲ್ಕವನ್ನು ವಸೂಲಿ ಮಾಡಬೇಕು. ಹೆಚ್ಚಿಗೆ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಶ್ರೀಧರನ್ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಕಟ್ಟಡ ನಿರ್ಮಿಸುತ್ತಿದ್ದರೆ, ಕಂಪ್ಯೂಟರ್‌ ಖರೀದಿ,  ಪ್ರಯೋಗಾಲಯ ಉಪಕರಣಗಳ ಅಳವಡಿಕೆ ಮಾಡಿದರೆ ಶುಲ್ಕವನ್ನು ಹೊಸ ವಿದ್ಯಾರ್ಥಿಗಳಿಂದ ಮಾತ್ರ ವಸೂಲಿ ಮಾಡಬೇಕು. ಉಳಿದ ಯಾವುದೇ ವಂತಿಗೆಯನ್ನು ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕಟಿಸಿ: ಹೆಚ್ಚಿನ ಶುಲ್ಕ ನೀಡಲು ಒತ್ತಾಯಿಸಿದರೆ, ವಂತಿಗೆಯನ್ನು ವಸೂಲಿ ಮಾಡಿದರೆ ಶಿಕ್ಷಣ ಸಂಸ್ಥೆಗಳ ವಿರುದ್ಧ ಐ.ಪಿ.ಸಿ.418 ಹಾಗೂ 420 ರ ಅನ್ವಯ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಮಾನ್ಯತೆಯನ್ನು ರದ್ದುಪಡಿಸಲಾಗುವುದು ಎಂದಿದ್ದಾರೆ.

ಸರ್ಕಾರ ನಿಗದಿ ಪಡಿಸಿದ ಶುಲ್ಕವನ್ನು ಮಾತ್ರ ವಸೂಲು ಮಾಡುವುದಾಗಿ ಘೋಷಿಸಿ, ಶುಲ್ಕದ ವಿವರನ್ನು ಶಾಲೆಯ ಆವರಣದಲ್ಲಿ ಎದ್ದುಕಾಣುವಂತೆ ಪ್ರಕಟಿಸಬೇಕು. ವಿವರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಬೇಕು. ಶಾಲೆಗಳಲ್ಲಿ ಬ್ಯಾಗ್, ನೋಟ್ ಪುಸ್ತಕ, ಸಮವಸ್ತ್ರ, ಟೈ, ಶೂ ಮತ್ತು ಕಾಲು ಚೀಲ ಮಾರಾಟ ಮಾಡುವಂತಿಲ್ಲ.  ಆ ಬಗ್ಗೆ ದೂರು ಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ADVERTISEMENT

ಖರೀದಿ ಒತ್ತಾಯ ಸಲ್ಲದು: ಕರ್ನಾಟಕ ಶಿಕ್ಷಣ ಕಾಯ್ದೆ 1983ರ ನಿಯಮ-1995 ರ ಕಂಡಿಕೆ 11(3)ರ ಪ್ರಕಾರ, ನಿರ್ದಿಷ್ಟಪಡಿಸಿದ ಅಂಗಡಿಯಲ್ಲಿಯೇ ನೋಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನು ಖರೀದಿಸಬೇಕೆಂದು ಪೋಷಕರಿಗೆ ಒತ್ತಾಯ ಮಾಡಬಾರದು ಎಂದು ಡಿಡಿಪಿಐ ಹೇಳಿದ್ದಾರೆ.  ಖಾಸಗಿ ಪೂರ್ವಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮಾತ್ರ ಪ್ರಾರಂಭಿಸಬೇಕು. ರಾಜ್ಯ ಪಠ್ಯಕ್ರಮ ಅಳವಡಿಸಿರುವ ಶಾಲೆಗಳಲ್ಲಿ ಇಲಾಖೆಯಿಂದ ಪಡೆದ ಪಠ್ಯ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಬೇಕು. ಮಕ್ಕಳಿಗೆ ದೈಹಿಕ, ಮಾನಸಿಕ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯದಂತೆ ಶಾಲೆ ಮುಖ್ಯಸ್ಥರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸ್ಪಷ್ಡಪಡಿಸಿದ್ದಾರೆ.

ಶಾಲೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಮತ್ತು ಶಾಲಾ ವಾಹನದ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗಾಗಿ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಪ್ರಕಟಿಸಬೇಕು. ಶಾಲಾ ವ್ಯಾಪ್ತಿಯ ಪ್ರದೇಶದ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು, ಯಾವುದೇ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಿಲ್ಲ. ಮಕ್ಕಳ ದಾಖಲಾತಿಯಲ್ಲಿ ಮೀಸಲಾತಿಯನ್ನು ಅನುಸರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.