ADVERTISEMENT

ಅವ್ಯವಹಾರಕ್ಕೆ ಬಿಳಿ ದ್ರವ ಬಳಕೆ!

ಕೆ.ನರಸಿಂಹ ಮೂರ್ತಿ
Published 25 ನವೆಂಬರ್ 2017, 6:37 IST
Last Updated 25 ನವೆಂಬರ್ 2017, 6:37 IST
ಯುವಜನ ಮತ್ತು ಕ್ರೀಡಾ ಇಲಾಖೆ ಕಚೇರಿ
ಯುವಜನ ಮತ್ತು ಕ್ರೀಡಾ ಇಲಾಖೆ ಕಚೇರಿ   

ಬಳ್ಳಾರಿ: ಗೃಹರಕ್ಷಕರ ಒಂದು ತಿಂಗಳ ವೇತನ ಎರಡು ಬಾರಿ ಡ್ರಾ, ತಮ್ಮದೊಂದೇ ಸಹಿಯಿಂದ ಇಲಾಖೆಯ ಬ್ಯಾಂಕ್‌ ಖಾತೆಯಲ್ಲಿ ವ್ಯವಹರಿಸಿರುವುದು, ಲೆಕ್ಕ ತಪಾಸಣಾ ಸಮಯದಲ್ಲಿ ರಸೀದಿ ಸಲ್ಲಿಸದೇ ತಡವಾಗಿ ಸಲ್ಲಿಸಿರುವುದು, ಹೊಸಪೇಟೆಯ ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕ ಸಂಘದ ಹೆಸರಿನಲ್ಲಿ ₹50,000 ಮೊತ್ತದ ಬಿಲ್‌ ತಯಾರಿಸಿ, ಸಂಘದ ಮುಖ್ಯಸ್ಥರಿಂದ ಸಹಿ ಪಡೆದ ಬಳಿಕ, ಬಿಳಿ ದ್ರವ ಬಳಸಿ ₹ 5,00,000 ಎಂದು ತಿದ್ದುಪಡಿ ಮಾಡಿ ದೃಢೀಕರಿಸದೆ ಡ್ರಾ
ಮಾಡಿ ಪಾವತಿಸಿರುವುದು, ಲೆಕ್ಕ ಪರಿಶೋಧನೆ ಬಳಿಕ ಹಣ ಜಮಾ ಮಾಡಿರುವುದು...

ಬಂಧಿತರಾಗಿ ನ್ಯಾಯಾಂಗ ವಶದಲ್ಲಿರುವ ಇಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಮಾನತ್ತಾದ ಸಹಾಯಕ ನಿರ್ದೇಶಕ ರಾಜು ಭಾವಿ ಹಳ್ಳಿ ಅವರ ವಿರುದ್ಧ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಚ್‌.ಎ.ಭಜಂತ್ರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿರುವ ಆರೋಪಗಳಿವು.

ಅ.27ರಂದು ಕೌಲ್‌ಬಜಾರ್‌ ಠಾಣೆಯ ಪೊಲೀಸರಿಗೆ ಅವರು ಸಲ್ಲಿಸಿದ್ದ ದೂರಿನ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ದೂರಿನಲ್ಲಿ ಭಜಂತ್ರಿ ಅವರು 11 ಅಂಶಗಳ ವಂಚನೆ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ. ‘ಕರ್ನಾಟಕ ಆರ್ಥಿಕ ಸಂಹಿತೆ 1958 ಹಾಗೂ ಸಾದಿಲ್ವಾರು ವೆಚ್ಚದ ಕೈಪಿಡಿ ನಿಯಮಗಳನ್ನು ಉಲ್ಲಂಘಿಸಿ ಅಧಿಕಾರಿಯು ಹಣ ಡ್ರಾ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

‘ಅಧಿಕಾರಿಗಳು ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಹಣವನ್ನು ಡಿ.ಸಿ. ಬಿಲ್‌(ಸ್ವವಿವರ ಸಾದಿಲ್ವಾರು ಬಿಲ್‌) ಸಲ್ಲಿಸಿ ಪಡೆಯಬೇಕು. ಹಣ ಸ್ವೀಕರಿಸುವವರ ರಸೀದಿ (payees receipt) ಮೂಲಕ ಹಣವನ್ನು ಪಡೆಯುವಂತಿಲ್ಲ. ಆದರೆ ರಾಜು ಭಾವಿಹಳ್ಳಿ ಈ ನಿಮಯಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಲೆಕ್ಕ ಪರಿಶೋಧನೆ ಬಳಿಕ ಹಣ ಜಮಾ: ‘2016ರ ಅಕ್ಟೋಬರ್‌ನಲ್ಲಿ ಅಧಿಕಾರಿಯು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಹೆಸರಿನಲ್ಲಿ 2 ರಸೀದಿ ಮೂಲಕ ₹ 3 ಲಕ್ಷ ಡ್ರಾ ಮಾಡಿದ್ದರು. ಆದರೆ ಅದು ತಮಗೆ ತಲುಪಿಲ್ಲ ಎಂದು ಯೋಜನಾ ನಿರ್ದೇಶಕರು ಅ.16ರಂದು ಪತ್ರ ಬರೆದಿದ್ದರು. ಅದಕ್ಕೆ ಅ.28ರಂದು ಪ್ರತಿಕ್ರಿಯಿಸಿದ್ದ ಅಧಿಕಾರಿಯು, ಹಣ ಸಿಂಡಿಕೇಟ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿದೆ ಎಂದು ದಾಖಲೆ ಸಲ್ಲಿಸಿದ್ದರು.

ಆದರೆ ಹಣವನ್ನು ಅ.18ರಂದು ಜಮಾ ಮಾಡಲಾಗಿತ್ತು. ಲೆಕ್ಕ ಪರಿಶೋಧನೆ ಬಳಿಕ ಖಾತೆಗೆ ಹಣ ಜಮಾ ಮಾಡಿದ ಅಧಿಕಾರಿಯು ಸರ್ಕಾರವನ್ನು ವಂಚಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅಗತ್ಯವಿಲ್ಲದಿದ್ದರೂ ಡ್ರಾ:‘ತಕ್ಷಣದ ಬಟವಾಡೆಗೆ ಬೇಕಾಗದ ಹೊರತು ಹಣವನ್ನು ಖಜಾನೆಯಿಂದ ಪಡೆಯುವಂತಿಲ್ಲ. ಆದರೆ ಅಧಿಕಾರಿಯು ನಿಯಮ ಉಲ್ಲಂಘಿಸಿ ₹12,35,585 ಅನ್ನು ಸ್ವೀಕರಿಸುವವರ ರಸೀದಿ ಬಿಲ್‌ಗಳ ಮೂಲಕ ಪಡೆದಿದ್ದಾರೆ’ ಎಂದು ದೂರಿದ್ದಾರೆ.

₹ 8.61 ಲಕ್ಷ ಜಮಾ: ‘ಒಟ್ಟು 14,35,585 ಹಣದಲ್ಲಿ ₹ 8,61,585 ಅನ್ನು ಆಗಸ್ಟ್‌ನಲ್ಲಿ ಜಿಲ್ಲಾ ಪಂಚಾಯತಿ ನಿಧಿ–2ಕ್ಕೆ ಚಲನ್ ಮೂಲಕ ಜಮಾ ಮಾಡಿದ ಅಧಿಕಾರಿಯು, ಉಳಿದ ₹ 5,74,000ಕ್ಕೆ ಲೆಕ್ಕ ತಪಾಸಣಾ ಸಮಯದಲ್ಲಿ ಮಾಹಿತಿ ನೀಡದೆ, ಸುಮಾರು ಎರಡು ತಿಂಗಳ ಬಳಿಕ ಓಚರ್‌ಗಳನ್ನು ಸಲ್ಲಿಸಿರುವುದು ಸಂಶಯಾಸ್ಪದವಾಗಿದೆ’ ಎಂದು ಭಜಂತ್ರಿ ಅಭಿಪ್ರಾಯಪಟ್ಟಿದ್ದಾರೆ.

’ವೇತನ 2 ಬಾರಿ ಡ್ರಾ: ಇಲಾಖೆಗೆ ನಿಯೋಜಿತರಾದ ಗೃಹರಕ್ಷಕರ ಏಪ್ರಿಲ್‌ ತಿಂಗಳ ವೇತನ ₹29,310 ಅನ್ನು 2016ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಡ್ರಾ ಮಾಡಿ
ದುರ್ಬಳಕೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಗಮನ ಸೆಳೆದಿದ್ದಾರೆ.

‘ಹಣ ಸ್ವೀಕರಿಸಿದವರ 15 ರಸೀದಿಗಳನ್ನು ಸಲ್ಲಿಸಿದ ರಾಜುಭಾವಿ ಹಳ್ಳಿ ಮೇಲಧಿಕಾರಿಯ ರುಜು ಪಡೆಯದೆ ₹ 37,34,821 ಹಾಗೂ 79 ಸಾದಿಲ್ವಾರು ಬಿಲ್‌ಗಳ (ಡಿ.ಸಿ ಬಿಲ್‌) ಮೂಲಕ ₹ 29,48,861 ಅನ್ನು ಜಿಲ್ಲಾ ಖಜಾನೆಯಿಂದ ಡ್ರಾ ಮಾಡಿದ್ದಾರೆ. ಅಧಿಕಾರಿಯ ಖಾತೆಗೆ ಇದೇ ವರ್ಷ ಮೇ 29ರಂದು ₹ 2 ಲಕ್ಷ ಜಮಾ ಮಾಡಲಾಗಿದೆ. ಅದು ನಗರದ ವಿವೇಕಾನಂದ ಯುವಕ ಸಂಘದಿಂದ ವಾಪಸ್‌ ಪಡೆದ ಮೊತ್ತ ಎಂದು ತಿಳಿಸಿದ್ದಾರೆ. ಆದರೆ ಅದು ಅನುದಾನಕ್ಕಿಂತ ಹೆಚ್ಚುವರಿಯಾದ ಹಣ. ಅದರ ಮೂಲದ ಬಗ್ಗೆ ಅಧಿಕಾರಿ ವಿವರ ನೀಡಿಲ್ಲ’ ಎಂದು ಭಜಂತ್ರಿ ತಿಳಿಸಿದ್ದಾರೆ.

* * 

ಉಪಕಾರ್ಯದರ್ಶಿ ದೂರಿನಲ್ಲಿ ಉಲ್ಲೇಖಿಸಿರುವ ಅವ್ಯವಹಾರಗಳ ಕುರಿತ ಕೂಲಂಕಷ ತನಿಖೆ ನಡೆದಿದೆ
 ಕೆ. ಪ್ರಸಾದ್‌ ಗೋಖಲೆ
  ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.