ADVERTISEMENT

ಆಮೆಗತಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 10:23 IST
Last Updated 14 ಜುಲೈ 2017, 10:23 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಗದ್ದಿಕೇರಿ ಗ್ರಾಮ ಪಂಚಾಯತಿ ಕಚೇರಿಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಎರಡು ವರ್ಷದ ಬಳಿಕ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ₹15ಲಕ್ಷ ಅಂದಾಜು ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ್ದರು. ನಿರ್ಮಾಣದ ಹೊಣೆಯನ್ನು ಕೆಆರ್‌ಐಡಿಎಲ್‌ಗೆ ವಹಿಸಲಾಗಿತ್ತು. ಭೂಮಿ ಪೂಜೆ ಎರಡು ವರ್ಷಗಳ ಕಾಲ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಹಾಕಲಾಗಿದ್ದ ನಾಮಫಲಕ ಕೂಡ ಅಳಿಸಿಹೋಗಿತ್ತು.

ಗ್ರಾಮದಲ್ಲಿ ನೂತನವಾಗಿ ಗ್ರಾಮ ಪಂಚಾಯ್ತಿ ಅಸ್ತಿತ್ವಕ್ಕೆ ಬಂದಿದ್ದು ಕೋಡಿಹಳ್ಳಿಯ ಐದು ಜನ ಮತ್ತು ಗದ್ದಿಕೇರಿಯ ಏಳು ಜನ ಸದಸ್ಯರಿದ್ದಾರೆ. ಆರಂಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ ಆಡಳಿತ ಕಚೇರಿ ಚುನಾವಣೆ ಬಳಿಕ ಸರ್ಕಾರಿ ಪ್ರೌಢಶಾಲೆಯ ಕಟ್ಟಡದ ಕೊಠಡಿ ಒಂದಕ್ಕೆ ಸ್ಥಳಾಂತರಗೊಂಡಿದೆ.

ADVERTISEMENT

‘ಶಾಲೆಯ ಕಟ್ಟಡದಲ್ಲೇ ಪಂಚಾಯ್ತಿ ಆಡಳಿತ ಕಾರ್ಯನಿರ್ವಹಿಸುತ್ತಿರುವುದರಿಂದ ಕಚೇರಿಗೆ ನಿರಂತರವಾಗಿ ಸಾರ್ವಜನಿಕರ ಅಲೆದಾಟದಿಂದಾಗಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದೆ’ ಎಂದು ಗ್ರಾಮದ ರಮೇಶ್‌  ಹೇಳುತ್ತಾರೆ.

‘ಗ್ರಾಮ ಪಂಚಾಯ್ತಿ ಕಚೇರಿಯ ನೂತನ ಕಟ್ಟಡ ನಿರ್ಮಾಣಗೊಂಡಲ್ಲಿ ಆಡಳಿತ ನಿರ್ವಹಣೆ ಚುರುಕಾಗಿ ನಡೆಯುತ್ತದೆ. ಈಗಿರುವ ಶಾಲೆಯ ಕಟ್ಟಡದಲ್ಲಿ ಸಭೆಗಳನ್ನು ನಡೆಸಲು ಸಾಧ್ಯವಾಗಿಲ್ಲ. ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.