ADVERTISEMENT

ಆರಂಭವಾಗದ ‘ಭಾನುವಾರದ ಸಂತೆ ಮಾರುಕಟ್ಟೆ’

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 9:04 IST
Last Updated 17 ನವೆಂಬರ್ 2017, 9:04 IST

ಬಳ್ಳಾರಿ: ಸೆಪ್ಟೆಂಬರ್‌ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದ ಇಲ್ಲಿನ ಎಪಿಎಂಸಿ ಆವರಣದ ಮುಕ್ತ ಹರಾಜು ಕಟ್ಟೆಗಳ ಭವ್ಯ ಕಟ್ಟಡ ’ಭಾನುವಾರದ ಸಂತೆ ಮಾರುಕಟ್ಟೆ’ ಎರಡು ತಿಂಗಳಾದರೂ ರೈತರ ಬಳಕೆಗೆ ದೊರಕಿಲ್ಲ.

2015–16ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಈ ಸೌಕರ್ಯವನ್ನು ಘೋಷಿಸಿದ ಬಳಿಕ, ₨ 2.28 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆದಿದ್ದ ಬಳ್ಳಾರಿ ಅಭಿವೃದ್ಧಿ ಮತ್ತು ಸಾಧನಾ ಸಮಾವೇಶದಲ್ಲಿ ಈ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದರು. ಅದಾದ ಎರಡು ತಿಂಗಳು ಬಳಿಕ ಎಪಿಎಂಸಿ ಈಗ ಪ್ರಕಟಣೆ ನೀಡಿದ್ದು, ಕಟ್ಟೆಗಳ ಬಳಕೆಗೆ ರೈತರು ಹೆಸರು ನೋಂದಾಯಿಸಬಕು ಎಂದು ತಿಳಿಸಿದೆ!

ಆದರೆ ಇಷ್ಟು ತಡವಾಗಿರುವ ಕುರಿತು ಸ್ಪಷ್ಟ ಕಾರಣಗಳು ಮಾತ್ರ ಎಪಿಎಂಸಿ ಬಳಿ ಇಲ್ಲ. ಜೊತೆಗೆ, ಅದನ್ನು ಯಾವತ್ತು ತೆರೆಯಲಾಗುವುದು ಎಂಬ ಬಗ್ಗೆಯೂ ರೈತರಿಗೆ ಖಚಿತಪಡಿಸಿಲ್ಲ. ಎಪಿಎಂಸಿಯ ಮುಖ್ಯ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ಕಟ್ಟಡಕ್ಕೆ ‘ಭಾನುವಾರ ಸಂತೆ ಮಾರುಕಟ್ಟೆ’ ಎಂದು ಹೆಸರಿಡಲಾಗಿದೆ. ಬೆಳಿಗ್ಗೆ 5ರಿಂದ ಸಂಜೆ 5ರವರೆಗೂ ಇಲ್ಲಿ ವ್ಯಾಪಾರ ನಡೆಸಲು ರೈತರಿಗೆ ಅವಕಾಶ ನೀಡಿರುವುದು ವಿಶೇಷ.

ADVERTISEMENT

ನೋಂದಣಿ: ‘ಕಟ್ಟೆಗಳಲ್ಲಿ ವ್ಯಾಪಾರ ನಡೆಸಲು ಬಯಸುವ ರೈತರು ಮೊದಲ ಬಾರಿಗೆ ನೋಂದಣಿಗಾಗಿ ಗ್ರಾಮ ಪಂಚಾಯಿತಿ ಅಥವಾ ತಾಲ್ಲೂಕು ಪಂಚಾಯಿತಿಯಿಂದ ಪಡೆದ ಬೆಳೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕು. ತರಕಾರಿಗಳ ಅನ್‌ಲೋಡಿಂಗ್‌ ವೆಚ್ಚವನ್ನು ತಾವೇ ಭರಿಸಬೇಕು’ ಎಂದು ಎಪಿಎಂಸಿ ಅಧ್ಯಕ್ಷ ಸರಗು ನಾಗರಾಜ್‌ ತಿಳಿಸಿದ್ದಾರೆ.

‘ಕಟ್ಟಡದ ಒಳಗೆ 72 ಕಟ್ಟೆಗಳನ್ನು ನಿರ್ಮಿಸಲಾಗಿದೆ. ಕಟ್ಟೆ ಮೇಲಷ್ಟೇ ಅಲ್ಲದೆ ಕೆಳಗೂ ಕುಳಿತು ಸುಮಾರು 130 ರೈತರು ವ್ಯಾಪಾರ ಮಾಡಬಹುದು’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕಮಿಷನ್‌ ಕೊಡಬೇಕಿಲ್ಲ: ‘ಈ ಕಟ್ಟೆಗಳಲ್ಲಿ ವ್ಯಾಪಾರ ಮಾಡುವುದರಿಂದ ರೈತರು ದಲ್ಲಾಳಿಗಳಿಗ ಯಾವುದೇ ಕಮಿಷನ್‌ ಕೊಡಬೇಕಾಗಿಲ್ಲ. ತರಕಾರಿ ಸಾಗಣೆ ವಾಹನಗಳು ನೇರವಾಗಿ ಕಟ್ಟಡದ ಒಳಗೇ ಪ್ರವೇಶಿಸುವಷ್ಟು ಸ್ಥಳಾವಕಾಶವೂ ಇದೆ. ಇದ ರೈತ ಸ್ನೇಹಿಯಾದ ವ್ಯವಸ್ಥೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕಷ್ಟೇ’ ಎಂದು ಅಭಿಪ್ರಾಯಪಟ್ಟರು. ರೈತರು ಹೆಚ್ಚಿನ ಮಾಹಿತಿಗೆ 08392 250442 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ಇದು ದಲ್ಲಾಳಿ ಮುಕ್ತ...
‘ಇದು ರೈತರ ಅನುಕೂಲಕ್ಕಾಗಿಯೇ ನಿರ್ಮಾಣವಾಗಿರುವ ಕಟ್ಟಡ. ಇದು ದಲ್ಲಾಳಿ ಮುಕ್ತ. ರೈತರಿಂದ ಬಳಕೆದಾರರ ಶುಲ್ಕವನ್ನೂ ಪಡೆಯುವುದಿಲ್ಲ. ಉಚಿತವಾಗಿ ರೈತರು ಬಳಸಬಹುದು’ ಎಂದು ಸರಗು ನಾಗರಾಜ್‌ ತಿಳಿಸಿದರು.

‘ರೈತರು ಮಾರಾಟಕ್ಕೆ ತರಕಾರಿ ತರುವ ಒಂದು ದಿನ ಮುಂಚೆ ಎಪಿಎಂಸಿ ಕಚೇರಿಯಲ್ಲಿ ಹೆಸರು ನೋಂದಾಯಿಸಬೇಕು. ರಜೆ ದಿನಗಳಿದ್ದರೆ, ಅದಕ್ಕೂ ಮುನ್ನವೇ ನೋಂದಾಯಿಸಬೇಕು’ ಎಂದರು.

* * 

ಉದ್ಘಾಟನೆಯಾಗಿ ಎರಡು ತಿಂಗಳಾದರೂ ಕಟ್ಟಡವನ್ನು ರೈತರ ಬಳಕೆಗೆ ನೀಡದೇ ಇರುವುದು ಸರಿಯಲ್ಲ
ಆರ್‌.ಎಸ್‌.ಬಸವರಾಜ್‌,
ಪ್ರಾಂತ ರೈತ ಸಂಘ, ರಾಜ್ಯಸಮಿತಿ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.