ADVERTISEMENT

ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿಲ್ಲ!

ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಯುವ ನಗರದ ಏಕೈಕ ಕೇಂದ್ರ

ಕೆ.ನರಸಿಂಹ ಮೂರ್ತಿ
Published 12 ಜುಲೈ 2017, 6:45 IST
Last Updated 12 ಜುಲೈ 2017, 6:45 IST
ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿಲ್ಲ!
ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿಲ್ಲ!   

ಬಳ್ಳಾರಿ: ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಗೆ ಒಳಗಾಗುವ ಮಹಿಳೆಯರಿಗೆ ಸರ್ಕಾರ ಪ್ರೋತ್ಸಾಹಧನವನ್ನು ನೀಡು ತ್ತದೆ. ಆದರೆ ಅದಕ್ಕೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿ ಅವರ ಸಂಬಂಧಿಕರು ನೂರಾರು ರೂಪಾಯಿ ಕೊಟ್ಟು ಕುಡಿಯುವ ನೀರನ್ನು ಖರೀದಿಸಿ ತರಬೇಕು!

ಇದು ನಗರದ ಗಾಂಧಿನಗರ ಮುಖ್ಯ ರಸ್ತೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಸ್ಥಿತಿ. ನಗರದ ವಿಮ್ಸ್‌ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯನ್ನು ಹೊರತುಪಡಿಸಿದರೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಯುವ ನಗರದ ಏಕೈಕ ಕೇಂದ್ರ ಇದು. ನಗರದವರೊಂದಿಗೆ ಗ್ರಾಮೀಣ ಪ್ರದೇಶದ ಜನರೂ ಈ ಕೇಂದ್ರವನ್ನೇ ಅವಲಂಬಿಸಿರುವುದು ವಿಶೇಷ.

ಶಸ್ತ್ರಚಿಕಿತ್ಸೆಗೆ ಮತ್ತು ಚಿಕಿತ್ಸೆಗೆ ಒಳಗಾದ ಮಹಿಳೆಯರ ದಿನ ಬಳಕೆಗೆ ಬೇಕಾಗುವ ನೀರಿನ ಸೌಕರ್ಯ ಇಲ್ಲಿದೆ. ಆದರೆ ಕುಡಿಯುವ ನೀರಿಲ್ಲ. ಹೀಗಾಗಿ ಪ್ರತಿ ಮಂಗಳವಾರ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸಗೆ ದಾಖಲಾಗುವ ಮಹಿಳೆಯರು ಮತ್ತು ಅವರ ಸಂಬಂಧಿಕರು ಪರದಾಡುತ್ತಿದ್ದಾರೆ.

ADVERTISEMENT

22 ಹಾಸಿಗೆ: ಕೇಂದ್ರದಲ್ಲಿ 22 ಹಾಸಿಗೆಗಳಿದ್ದು ಪ್ರತಿ ಮಂಗಳವಾರ ಶಸ್ತ್ರಚಿಕಿತ್ಸೆ ನಡೆಯುತ್ತದೆ. ಅದಕ್ಕೆ ಮುಂಚೆ ಸೋಮವಾರವೇ ಮಹಿಳೆಯರು ದಾಖಲಾಗುತ್ತಾರೆ. ಅವರೊಂದಿಗೆ ಬರುವ ಕುಟುಂಬದ ಸದಸ್ಯರು ಕೇಂದ್ರದ ಹೊರಗೆ ಪಡಸಾಲೆಯಲ್ಲಿ ರಾತ್ರಿ ಕಳೆಯುತ್ತಾರೆ.

ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಠ ಐದು ದಿನ ಕೇಂದ್ರದಲ್ಲಿ ಆರೈಕೆ ಮಾಡಿ ಆರನೇ ದಿನ ಮನೆಗೆ ಕಳಿಸಲಾಗುತ್ತದೆ. ಅಲ್ಲೀವರೆಗೂ ಮಹಿಳೆಯರು ಮತ್ತು ಸಂಬಂಧಿಕರು ಕುಡಿಯುವ ನೀರನ್ನು ಖರೀದಿಸುತ್ತಲೇ ಇರುತ್ತಾರೆ. ಸೋಮವಾರ ರಾತ್ರಿ ಕೇಂದ್ರಕ್ಕೆ ‘ಪ್ರಜಾವಾಣಿ’ ಭೇಟಿ ನೀಡಿದ ಸಂದರ್ಭದಲ್ಲಿ ಹಲವರು ಅಂಗಡಿಗಳಿಂದ ನೀರಿನ ಬಾಟಲ್‌ಗಳನ್ನು ಖರೀದಿಸಿ ತರುತ್ತಿದ್ದುದು ಕಂಡುಬಂತು.

‘ಇಲ್ಲಿ ಕುಡಿಯುವ ನೀರಿಲ್ಲ. ಹೀಗಾಗಿ ಅಂಗಡಿಯಿಂದ ಖರೀದಿಸಿ ತರುತ್ತೇವೆ.ದೂರದ ಹಳ್ಳಿಯಿಂದ ಬಂದಿರುವುದರಿಂದ ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ರಾತ್ರಿಯನ್ನು ಕೇಂದ್ರದ ಹೊರ ಆವರಣದಲ್ಲಿ ಕಳೆಯುತ್ತೇವೆ’ ಎಂದು ಗ್ರಾಮಸ್ಥರೊಬ್ಬರು ತಿಳಿಸಿದರು.

ಆರ್‌.ಓ ಅಗತ್ಯ: ‘ನೀರಿನ ಕೊರತೆಯ ಕುರಿತು ಪ್ರತಿಕ್ರಿಯಿಸಿದ ಕೇಂದ್ರದ ಆರೋಗ್ಯಾಧಿಕಾರಿ ಡಾ.ಕಾಶಿನಾಥ್‌, ಕುಡಿಯುವ ನೀರು ಪೂರೈಸಬೇಕೆಂದರೆ ಶುದ್ಧ ನೀರಿನ ಘಟಕವನ್ನು ಅಳವಡಿಸಬೇಕು. ಅದಕ್ಕೆ ಹೆಚ್ಚುವರಿ ಅನುದಾನ ಅಗತ್ಯ. ಅವಕಾಶವಿದ್ದರೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದರು.

ಆರೋಗ್ಯ ಕೇಂದ್ರವು ನಗರದಲ್ಲಿ ಇದ್ದರೂ, ಅದರ ಸೌಲಭ್ಯವನ್ನು ನಗರದ ಮಂದಿಗಿಂತಲೂ ಸುತ್ತಲಿನ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಪಡೆಯುತ್ತಿದ್ದಾರೆ. ನೆರೆಯ ಆಂಧ್ರಪ್ರದೇಶಕ್ಕೆ ಅಂಟಿಕೊಂಡಿರುವ ಗ್ರಾಮಗಳಿಂದಲೂ ಮಹಿಳೆಯರು ಬರುತ್ತಾರೆ. ಪ್ರತಿವಾರ ನಡೆಯುವ ಶಸ್ತ್ರಚಿಕಿತ್ಸೆಗಳ ಪೈಕಿ 10ರಷ್ಟನ್ನು ಗ್ರಾಮೀಣ ಮಹಿಳೆಯರಿಗೇ ನೀಡಲಾಗುವುದು ಎಂದರು.

***

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು
ಡಾ.ಕಾಶಿನಾಥ್‌, ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.