ADVERTISEMENT

ಎರಡು ವರ್ಷದಿಂದ ಶುದ್ಧ ನೀರಿಲ್ಲದ ಘಟಕ!

ಕೆ.ನರಸಿಂಹ ಮೂರ್ತಿ
Published 15 ಏಪ್ರಿಲ್ 2017, 8:36 IST
Last Updated 15 ಏಪ್ರಿಲ್ 2017, 8:36 IST
ಬಳ್ಳಾರಿ ತಾಲ್ಲೂಕಿನ ಎತ್ತಿನಬೂದಿಹಾಳ್‌ ಪಂಚಾಯಿತಿಗೆ ಸೇರಿದ ಬುರ್ರನಾಯಕನಹಳ್ಳಿಯಲ್ಲಿ ನೀರು ಪೂರೈಕೆಯಾಗದ ಶುದ್ಧ ಕುಡಿಯುವ ನೀರಿನ ಘಟಕದ ಸಾಮಗ್ರಿಗಳು ವ್ಯರ್ಥವಾಗಿರುವುದನ್ನು ಯುವಕ ಸತೀಶ ತೋರಿಸಿದರು
ಬಳ್ಳಾರಿ ತಾಲ್ಲೂಕಿನ ಎತ್ತಿನಬೂದಿಹಾಳ್‌ ಪಂಚಾಯಿತಿಗೆ ಸೇರಿದ ಬುರ್ರನಾಯಕನಹಳ್ಳಿಯಲ್ಲಿ ನೀರು ಪೂರೈಕೆಯಾಗದ ಶುದ್ಧ ಕುಡಿಯುವ ನೀರಿನ ಘಟಕದ ಸಾಮಗ್ರಿಗಳು ವ್ಯರ್ಥವಾಗಿರುವುದನ್ನು ಯುವಕ ಸತೀಶ ತೋರಿಸಿದರು   

ಬಳ್ಳಾರಿ: ಈ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿದೆ. ಆದರೆ ಇದುವರೆಗೂ ಒಂದು ಕೊಡ ನೀರು ಕೊಟ್ಟಿಲ್ಲ. ಇರುವ ಒಂದು ಕೊಳವೆಬಾವಿಯ ನೀರನ್ನೇ ಕೆಲವು ವರ್ಷಗಳಿಂದ ಬಳಸುತ್ತಿರುವ ಗ್ರಾಮಸ್ಥರಿಗೆ ಕೀಲು–ಮೂಳೆ ನೋವು ಬಾಧಿಸುತ್ತಿದೆ.

ಆಂಧ್ರಕ್ಕೆ ಕೂಗಳತೆ ದೂರದಲ್ಲಿರುವ, ತಾಲ್ಲೂಕಿನ ಎತ್ತಿನಬೂದಿಹಾಳ್‌ ಗ್ರಾಮ ಪಂಚಾಯಿತಿಗೆ ಸೇರಿದ ಬುರ್ರನಾಯಕನಹಳ್ಳಿಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆಯಾದ ಶಿವಲಿಂಗಮ್ಮ ಅವರೂ ವಾಸವಿದ್ದಾರೆ.ವಿಪರ್ಯಾಸವೆಂದರೆ, ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಅಧ್ಯಕ್ಷ ಎಸ್‌.ಎಂ.ಶಾಂತಮೂರ್ತಿ ಗ್ರಾಮಕ್ಕೆ ಭೇಟಿಯನ್ನೇ ನೀಡಿಲ್ಲ. ‘ಪಕ್ಷ ರಾಜಕಾರಣದಲ್ಲಿ ನಿರತರಾಗಿ ಅಭಿವೃದ್ಧಿ ಕಾರ್ಯಕ್ಕೆ ಸದಸ್ಯರು ಸ್ಪಂದಿಸದೇ ಇರುವ’ ಕಾರಣ ನೀಡಿ ಅಭಿವೃದ್ಧಿ ಅಧಿಕಾರಿ ಆರ್‌.ಕೆ.ಬಸವರಾಜ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದಾರೆ!

ಕಾರ್ಡ್‌ ಪಡೆದಿಲ್ಲ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯೋಜನೆಗಳ ಭೌತಿಕ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಸಭೆ ನಡೆಸಿದ ವೇಳೆ, ಗ್ರಾಮದ ಜನ ನೀರಿನ ಕಾರ್ಡ್‌ ಪಡೆಯಲು ಮುಂದೆ ಬಾರದೇ ಇರುವುದರಿಂದ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮುಖ್ಯ ಲೆಕ್ಕಾಧಿಕಾರಿ ಎ.ಚೆನ್ನಪ್ಪ ತಿಳಿಸಿದ್ದರು.

ADVERTISEMENT

ವಾಸ್ತವ ಪರಿಸ್ಥಿತಿಯನ್ನು ಅರಿಯುವ ಸಲುವಾಗಿ ‘ಪ್ರಜಾವಾಣಿ’ ಪ್ರತಿನಿಧಿಯು ಶುಕ್ರವಾರ, ಜಿಲ್ಲಾ ಕೇಂದ್ರದಿಂದ 10 ಕಿಮೀ ದೂರದಲ್ಲಿರುವ ಗ್ರಾಮಕ್ಕೆ ಭೇಟಿ ನೀಡಿದ ವೇಳೆ, ಅಧಿಕಾರಿಗಳ ಮಾತಿಗಿಂತ ಭಿನ್ನವಾದ ಸನ್ನಿವೇಶ ಕಂಡುಬಂತು. ಗ್ರಾಮದ ಮಾರಮ್ಮ ಗುಡಿಯ ಆವರಣದಲ್ಲಿ ಸ್ಥಾಪಿಸಲಾಗಿರುವ ಘಟಕಕ್ಕೆ ಕಾವಲುಗಾರರು ಇಲ್ಲದ ಕಾರಣ, ಬಾಗಿಲ ಗಾಜುಗಳನ್ನು ಒಡೆಯಲಾಗಿದೆ. ಒಳಗಿರುವ ಸಾಮಗ್ರಿಗಳಲ್ಲಿ ಕೆಲವು ನಾಪತ್ತೆಯಾಗಿವೆ. ಉಳಿದವು ಧೂಳು ಹಿಡಿದಿವೆ.

‘ಘಟಕವನ್ನು ಸ್ಥಾಪಿಸಿದ ಬಳಿಕ ಕೆಲವರಿಗೆ ಕಾರ್ಡ್‌ಗಳನ್ನು ಕೊಟ್ಟರು. ಒಮ್ಮೆ ಘಟಕದ ತಪಾಸಣೆ ನಡೆಸಿದರು. ನಂತರ ನೀರೇ ಕೊಡಲಿಲ್ಲ. ಹೀಗಾಗಿ ಕೊಳವೆಬಾವಿ ನೀರನ್ನೇ ಬಳಸುತ್ತಿದ್ದೇವೆ. ಅದರಿಂದ ಕೈಕಾಲು ನೋವು ಬಾಧಿಸುತ್ತಿದೆ’ ಎಂದು ಯುವಕ ಸತೀಶ ತಿಳಿಸಿದ.

‘ಘಟಕವನ್ನು ಆರಂಭಿಸಬೇಕು ಎಂದು ಪಂಚಾಯಿತಿಗೆ ದುಂಬಾಲು ಬಿದ್ದರೂ ಪ್ರಯೋಜನವಾಗಿಲ್ಲ. ನೀರನ್ನು ಕೊಡದ ಕಾರಣ ಕಾರ್ಡ್‌ಗಳನ್ನು ಜನ ಪಂಚಾಯಿತಿಗೆ ವಾಪಸು ನೀಡಿದ್ದಾರೆ’ ಎಂದು ಶಿವಲಿಂಗಮ್ಮ ಅವರ ಮಗ ಹೊನ್ನೂರುಸ್ವಾಮಿ ತಿಳಿಸಿದರು.

ರಾಜಕಾರಣವೇ ಅಡ್ಡಿ:  ಅಧ್ಯಕ್ಷ, ಉಪಾಧ್ಯಕ್ಷೆ ಹಾಗೂ ಅಭಿವೃದ್ಧಿ ಅಧಿಕಾರಿಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಬಳಿಕ, ಘಟಕ ಆರಂಭವಾಗದಿರಲು ಪಕ್ಷ ರಾಜಕಾರಣವೇ ಕಾರಣ ಎಂಬ ಅಂಶವೂ ಬೆಳಕಿಗೆ ಬಂತು.

‘ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಿದೆ ಎಂಬ ಕಾರಣಕ್ಕೆ ಪಂಚಾಯಿತಿಯಲ್ಲಿ ಬಹುಮತವುಳ್ಳ ಬಿಜೆಪಿಯ ಹಲವು ಸದಸ್ಯರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲಾಗಿದ್ದಾರೆ. ಒಮ್ಮೆ ಹಲ್ಲೆ ನಡೆದಿದ್ದರಿಂದ, ಹಳ್ಳಿಗೆ ಹೋಗುವುದನ್ನು ಬಿಟ್ಟೆ’ ಎಂದು ಶಾಂತಮೂರ್ತಿ ಹೇಳಿದರು. ‘ಅಧ್ಯಕ್ಷರು ಗ್ರಾಮದ ಬಗ್ಗೆ ಕಾಳಜಿ ತೋರುವುದಿಲ್ಲ’ ಎಂದು ಶಿವಲಿಂಗಮ್ಮ ದೂರಿದರು.

‘ಘಟಕವನ್ನು ಸ್ಥಳೀಯವಾಗಿ ಯಾರು ನಿರ್ವಹಿಸಬೇಕು ಎಂಬ ಬಗ್ಗೆ ಗ್ರಾಮದಲ್ಲಿ ವಿವಾದ ಏರ್ಪಟ್ಟ ಪರಿಣಾಮವಾಗಿ ಘಟಕ ನೆನಗುದಿಗೆ ಬಿದ್ದಿತ್ತು. ಈಗ ವಿವಾದ ಬಗೆಹರಿದಿದೆ. ಶಿವಲಿಂಗಮ್ಮ ಅವರ ಮಗ ಹೊನ್ನೂರುಸ್ವಾಮಿ ಘಟಕವನ್ನು ನಿರ್ವಹಿಸಲಿದ್ದಾರೆ. ಹೊಸ ಸಾಮಗ್ರಿಗಳನ್ನು ಖರೀದಿಸುವ ಪ್ರಕ್ರಿಯೆ ನಡೆದಿದೆ’ ಎಂದು ಅಭಿವೃದ್ಧಿ ಅಧಿಕಾರಿ ಬಸವರಾಜ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.