ADVERTISEMENT

ಕರೂರಿನಿಂದ ಪಾದಯಾತ್ರೆ 25ರಿಂದ

ತುಂಗಭದ್ರಾ ಬಲದಂಡೆ ಕಾಲುವೆಗೆ ಏ.15ರ ವರೆಗೆ ನೀರು ಹರಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 9:05 IST
Last Updated 23 ಮಾರ್ಚ್ 2018, 9:05 IST

ಬಳ್ಳಾರಿ: ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ(ಎಲ್‌ಎಲ್‌ಸಿ) ಏ.15ರ ವರೆಗೆ ನೀರು ಹರಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣಾ ಹೊರಾಟ ಸಮಿತಿ ಜಂಟಿಯಾಗಿ ಇದೇ 25ರಿಂದ ಸಿರುಗುಪ್ಪ ತಾಲ್ಲೂಕಿನ ಕರೂರಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಎರಡು ದಿನ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ.

‘ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಿರುಗುಪ್ಪ, ಹೊಸಪೇಟೆ ಹಾಗೂ ಬಳ್ಳಾರಿ ತಾಲ್ಲೂಕಿನ 1 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗಿದೆ. ಅದಕ್ಕಾಗಿ ರೈತರು ಅಂದಾಜು ₹ 630 ಕೋಟಿ ಖರ್ಚು ಮಾಡಿದ್ದಾರೆ, ಸಮರ್ಪಕವಾಗಿ ನೀರು ಹರಿಸದಿದ್ದರೆ ಶೇ 80 ರಷ್ಟು ಬೆಳೆ ನಾಶವಾಗಲಿದೆ’ ಎಂದು ಎಂದು ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘26 ಹಳ್ಳಿಗಳ ಮೂಲಕ ಸುಮಾರು 58 ಕಿ.ಮೀ ಉದ್ದಕ್ಕೂ ನಡೆಯುವ ಪಾದಯಾತ್ರೆಯಲ್ಲಿ 2 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೊದಲ ದಿನ ರಾತ್ರಿ ಪಾದಯಾತ್ರಿಗಳು ಗೋಟೂರು ಗ್ರಾಮದಲ್ಲಿ ವಾಸ್ತವ್ಯ ಹೂಡುತ್ತಾರೆ. ರೈತ ಹೋರಾಟಗಾರರಾದ ಗುಡುದೂರು
ಸುಲೋಚನಮ್ಮ, ವೆಂಕಟರೆಡ್ಡಿ, ಕವಿತಾ ಕೆ.ಸಿ.ರೆಡ್ಡಿ, ಟಿ.ಜಿ.ವಿಠ್ಠಲ್, ಗುರುಸಿದ್ಧಮೂರ್ತಿ ಭಾಗವಹಿಸಲಿದ್ದಾರೆ’ ಎಂದರು.

ADVERTISEMENT

ಸಾಲ ಮನ್ನಾ: ‘ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ಸಾಲ ಮನ್ನಾಕ್ಕೆ ಆಗ್ರಹಿಸಿ ರೈತರಿಂದ ಸುಮಾರು 30 ಸಾವಿರ ಅರ್ಜಿಗಳನ್ನು ಸಂಘ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಿತ್ತು. ಸುಮಾರು ₹ 4,300 ಕೋಟಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಲಾಗಿತ್ತು. ಸರ್ಕಾರ ಇಲ್ಲಿವರೆಗೂ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ ಕಾರ್ಖಾನೆಗಳು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸುಮಾರು 35 ಸಾವಿರ ಕೋಟಿ ಸಾಲವನ್ನು ಪಾವತಿಸಿಲ್ಲ. ಇದೇ ವೇಳೆ ರೈತರ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ’ ಎಂದು ದೂರಿದರು.

ಸೇರ್ಪಡೆ ಬೇಡ: ನಗರದ ಸರಳದೇವಿ ಸತೀಶ್‌ಚಂದ್ರ ಅಗರವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ವಾಧೀನಕ್ಕೆ ಪಡೆಯಬಾರದು ಎಂಬ ಹೋರಾಟಕ್ಕೆ ಸಂಘದ ಬೆಂಬಲವಿದೆ’ ಎಂದು ಹೇಳಿದರು.

ಮುಖಂಡರಾದ ಬಸವರಾಜರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಹುಲಗಯ್ಯ, ನಾಗರಾಜ, ಕೆ.ವೀರಾರೆಡ್ಡಿ, ಮಂಜುನಾಥ, ಕೆ.ವಿರೂಪಾಕ್ಷ ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.