ADVERTISEMENT

ಕೆಂಡದ ಬಿಸಿಲಿಗೆ ಜನಜೀವನ ಸ್ತಬ್ಧ, ಕಂಗಾಲು

ಮಧ್ಯಾಹ್ನದ ನಂತರ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ: ಅನಿವಾರ್ಯವಾಗಿ ಮಳಿಗೆಗಳಿಗೆ ಬಾಗಿಲು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಮಾರ್ಚ್ 2017, 11:43 IST
Last Updated 6 ಮಾರ್ಚ್ 2017, 11:43 IST
ಹೊಸಪೇಟೆ: ಮಧ್ಯಾಹ್ನ ಹನ್ನೆರಡು ಗಂಟೆಯಾಗುತ್ತಿದ್ದಂತೆಯೇ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗುತ್ತದೆ. ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧಗೊಳ್ಳುತ್ತದೆ. ಮಳಿಗೆ ಗಳು ಅನಿವಾರ್ಯವಾಗಿ ಬಾಗಿಲು ಮುಚ್ಚುತ್ತವೆ. ಸಂಜೆ ಆರರ ವರೆಗೆ ಒಂದು ರೀತಿಯಲ್ಲಿ ಅಘೋಷಿತ ಬಂದ್‌ ವಾತಾವರಣ ಸೃಷ್ಟಿಯಾಗುತ್ತದೆ!
 
ಕೆಲವು ದಿನಗಳಿಂದ ನಗರ ಸೇರಿ ದಂತೆ ಇಡೀ ಬಳ್ಳಾರಿ ಜಿಲ್ಲೆಯಾದ್ಯಂತ ಕೆಂಡದಂತಹ ಬಿಸಿಲು ಇರುತ್ತಿದೆ. ಫೆಬ್ರುವರಿ ಮಧ್ಯದಿಂದ ಅಂತ್ಯದವರೆಗೆ 32ರಿಂದ 35 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಬಿಸಿಲು, ಈಗ 38ರಿಂದ 40ರ ಆಸು ಪಾಸಿನಲ್ಲಿದೆ. ಈ ಪರಿಯ ಸುಡುವ ಬಿಸಿಲಿಗೆ ಜನ ಮನೆಯಿಂದ ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಇದು ವ್ಯಾಪಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದೆ.
 
ನೆತ್ತರು ಸುಡುವಂತಹ ಬಿಸಿಲಿಗೆ ಹೆದರಿ, ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಏನೇ ಕೆಲಸಗಳಿದ್ದರೂ ಮಧ್ಯಾಹ್ನ 12 ಗಂಟೆಯ ಒಳಗೆ ಮುಗಿಸಿಕೊಂಡು ಮನೆ ಸೇರುತ್ತಿದ್ದಾರೆ. ಮಧ್ಯಾಹ್ನ ಮನೆ ಸೇರಿದ ವರೂ ಮತ್ತೆ ಹೊರಗೆ ಕಾಣಿಸಿಕೊಳ್ಳುವುದು ಸಂಜೆ ಆರರ ನಂತರವೇ. ತುರ್ತು ಕೆಲಸವಿದ್ದವರೂ ಮಾತ್ರ ಸರ್ಕಾರಿ ಕಚೇರಿಗಳಿಗೆ ಎಡ ತಾಕುತ್ತಿದ್ದಾರೆ. ಕಚೇರಿಗಳಿಗೂ ಜನ ಬರುವುದು ಕಡಿಮೆಯಾಗಿರುವ ಕಾರಣ ನೌಕರರು ಹಳೆಯ ಕಡತಗಳನ್ನು ಕೈಗೆತ್ತಿ ಕೊಂಡು ಕೆಲಸ ಪೂರ್ಣ ಗೊಳಿಸುತ್ತಿದ್ದಾರೆ.
 
ಜನರ ಓಡಾಟ ಕಡಿಮೆಯಾಗಿರುವ ಕಾರಣ ಹೋಟೆಲ್‌ಗಳಲ್ಲಿ ವ್ಯಾಪಾರ ಕುಸಿದಿದೆ. ಖರೀದಿಗೆ ಜನ ಬಾರದ ಕಾರಣ ಮಳಿಗೆಗಳಿಗೆ ಮಧ್ಯಾಹ್ನದ ನಂತರ ಬೀಗ ಬೀಳುತ್ತಿದೆ. ಹೋಟೆಲ್‌, ಮಳಿಗೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಮಾತ್ರ ಜನ ಕಾಣಿಸಿಕೊಳ್ಳುತ್ತಿದ್ದಾರೆ. 
 
‘ತಲೆ ಸುಡುವಂತಹ ಬಿಸಿಲಿನಿಂ ದಾಗಿ ಜನರ ಓಡಾಟ ಬಹಳ ಕಡಿಮೆ ಯಾಗಿದೆ. ಖರೀದಿಗೆ ಜನ ಬರುತ್ತಿಲ್ಲ. ಸಂಜೆಯಾದ ನಂತರ ಆಗೊಬ್ಬರು, ಈಗೊಬ್ಬರು ಬರುತ್ತಿದ್ದಾರೆ. ಇದರಿಂದ ನಷ್ಟ ಉಂಟಾಗುತ್ತಿದೆ’ ಎಂದು ಮೇನ್‌ ಬಜಾರ್‌ನಲ್ಲಿರುವ ಕಿರಾಣಿ ಸಗಟು ವ್ಯಾಪಾರಿ ಪ್ರೇಮ್‌ ಚಂದ್‌ ತಿಳಿಸಿದರು.
‘ನಿತ್ಯ ಏನಿಲ್ಲವೆಂದರೂ ₹ 70ರಿಂದ 80 ಸಾವಿರ ವಹಿವಾಟು ಆಗುತ್ತಿತ್ತು. ಈಗ ₹ 20ರಿಂದ ₹ 30 ಸಾವಿರವಾದರೆ ಹೆಚ್ಚು ಎನ್ನುವಂತಾಗಿದೆ. ಬೇಸಿಗೆ ಆರಂಭದಲ್ಲೇ ಇಂತಹ ಪರಿಸ್ಥಿತಿಯಿದ್ದರೆ ಏಪ್ರಿಲ್‌, ಮೇನಲ್ಲಿ ಹೇಗಿರಬಹುದು?’ ಎಂದರು.
 
ಇದೇ ವೇಳೆ ಹಣ್ಣಿನ ರಸ, ಕಬ್ಬಿನ ರಸ, ಐಸ್‌ಕ್ರೀಂ, ಎಳನೀರು ಹಾಗೂ ಕಲ್ಲಂಗಡಿ ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ. ಈ ವ್ಯಾಪಾರದಲ್ಲಿ ತೊಡಗಿಸಿಕೊಂಡವರು ಈಗ ಕೈತುಂಬ ಹಣ ಗಳಿಸುತ್ತಿದ್ದಾರೆ. ಮಣ್ಣಿನ ಮಡಿಕೆ ಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ನಗರದ ಮೇನ್‌ ಬಜಾರ್‌, ಹಳೆ ಬಸ್‌ ನಿಲ್ದಾಣ ರಸ್ತೆಗಳಲ್ಲಿ  ಮಡಿಕೆಗಳನ್ನು ಮಾರಾಟಕ್ಕೆ ಇಡಲಾಗಿದೆ.
 
‘ಬಿಸಿಲು ಹೆಚ್ಚಾದ ನಂತರ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ದಿನಕ್ಕೆ ನಾಲ್ಕರಿಂದ ಐದು ಸಾವಿರ ವ್ಯಾಪಾರ ಆಗುತ್ತಿದೆ. ಬಹುತೇಕ ಜನ ರಸ ಇಲ್ಲೇ ಕುಡಿಯುವುದಲ್ಲದೇ ಮನೆಗೂ ಕೊಂಡೊಯ್ಯುತ್ತಿರುವ ಕಾರಣ ವ್ಯಾಪಾರ ದುಪ್ಪಟ್ಟಾಗಿದೆ’ ಎಂದು ನಗರದ ಕಾಲೇಜು ರಸ್ತೆಯಲ್ಲಿ ಕಬ್ಬಿನ ರಸ ಮಾರಾಟ ಮಾಡುವ ರಸೂಲ್‌ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.
 
ಈ ಹಿಂದೆ ಬೆಳಿಗ್ಗೆ 9–10ಗಂಟೆಯ ಆಸುಪಾಸಿನಲ್ಲಿ ವ್ಯಾಪಾರ ಶುರು ಮಾಡುತ್ತಿದ್ದೆ. ಈಗ ಬೆಳಿಗ್ಗೆ ಏಳು ಗಂಟೆಗೆ ಆರಂಭಿಸುತ್ತಿದ್ದೇನೆ. ಅಷ್ಟಾರಲ್ಲಾಗಲ್ಲೇ ಜನ ಬಂದು ರಸ ಕುಡಿಯುತ್ತಿದ್ದಾರೆ. ಈ ಹಿಂದೆ ನಾನು ಮತ್ತು ನನ್ನ ಮಗ ಎಲ್ಲ ಕೆಲಸ ಮಾಡುತ್ತಿದ್ದೇವು. ಈಗ ಜನ ಬರುವುದು ಹೆಚ್ಚಾಗಿರುವ ಕಾರಣ ಇಬ್ಬರು ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದೇವೆ. ಇಷ್ಟಾದರೂ ಕೆಲಸ ಹೆಚ್ಚಾಗಿದೆ’ ಎಂದು ಹೇಳಿದರು. ಸೂರ್ಯನ ಪ್ರತಾಪದಿಂದ ಕೆಲವರಿಗೆ ಅನುಕೂಲವಾದರೆ, ಮತ್ತೆ ಕೆಲವರಿಗೆ ಅನಾನುಕೂಲವಾಗಿದೆ. 
 
* ಸರ್ಕಾರ ಏಪ್ರಿಲ್‌, ಮೇ ತಿಂಗಳಿನಿಂದ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲು ಮಾಡುತ್ತದೆ. ಅದನ್ನು ಮಾರ್ಚ್‌ ತಿಂಗಳಿ ನಿಂದಲೇ ಆರಂಭಿಸಿದರೆ ಅನುಕೂಲ
ರಾಮಕೃಷ್ಣ, ಹಿರಿಯ ನಾಗರಿಕರು,  ಅಮರಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.