ADVERTISEMENT

‘ಕ್ಷಾತ್ರವೀರ ಛತ್ರಪತಿ ಶಿವಾಜಿ ಮಹಾರಾಜ’

ವಿವಿಧೆಡೆ ಸಂಘಟನೆಗಳ ನೇತೃತ್ವದಲ್ಲಿ ಜಯಂತಿ: ಸಂಭ್ರಮದ ಮೆರವಣಿಗೆ, ಗಮನ ಸೆಳೆದ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:57 IST
Last Updated 20 ಫೆಬ್ರುವರಿ 2017, 6:57 IST

ಬಳ್ಳಾರಿ: ಅಪ್ರತಿಮ ವೀರಯೋಧ ಮತ್ತು ಯಶಸ್ವಿ ಸೇನಾನಿ ಛತ್ರಪತಿ ಶಿವಾಜಿ ಮಹಾರಾಜರಿಗೆ ನಗರವು ಭಾನುವಾರ ಸಂಜೆ ಅದ್ಧೂರಿ ಮೆರವಣಿಗೆ ಮೂಲಕ ನಮನ ಸಲ್ಲಿಸಿತು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ ಕಮ್ಮಿಂಗ್ ರಸ್ತೆಯಲ್ಲಿರುವ ಪಾಂಡುರಂಗ ದೇವಾಲಯದ ಬಳಿ ಶಿವಾಜಿ ಭಾವಚಿತ್ರ ಮೆರವಣಿಗೆಗೆ ಮೇಯರ್ ಜಿ.ಜಯಲಲಿತ ಚಾಲನೆ ನೀಡಿದರು.

ಉಪಮೇಯರ್ ಬೆಣಕಲ್ ಬಸವ ರಾಜ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ದರು. ಶಿವಾಜಿ ಮಹಾರಾಜರು ವೀರ ಯೋಧರೂ ಮಾತ್ರವಲ್ಲದೆ, ಅನಕ್ಷರ ಸ್ಥರಿಗೆ ಜ್ಞಾನ ಬೋಧನೆಯನ್ನೂ ಮಾಡುವ ದೊರೆಯಾಗಿದ್ದರು ಎಂದು ಅಭಿಪ್ರಾಯಪಟ್ಟರು.

ಬಳಿಕ ದೇವಾಲಯದಿಂದ ಕಾಳಮ್ಮ ಬೀದಿ, ಬೆಂಗಳೂರು ರಸ್ತೆ, ಬ್ರೂಸ್‌ಪೇಟೆ ಠಾಣೆಯ ರಸ್ತೆ, ತೇರುಬೀದಿ ರಸ್ತೆ, ಜೈನ್‌ ಮಾರುಕಟ್ಟೆ ರಸ್ತೆ, ಎಚ್‌.ಆರ್‌.ಗವಿಯಪ್ಪ ರಸ್ತೆಯ ಮಾರ್ಗವಾಗಿ ಡಾ.ಜೋಳದ ರಾಶಿ ದೊಡ್ಡನಗೌಡ ರಂಗಮಂದಿರ ದವರೆಗೆ ಭಾವಚಿತ್ರ ಮೆರವಣಿಗೆಯನ್ನು ನಡೆಸಲಾಯಿತು. ಮೆರವಣಿಗೆಯುದ್ಧಕ್ಕೂ ತಾಷಾ ರಾಂಡೋಲ, ನಂದಿಕೋಲು ಕುಣಿತ, ವೀರಗಾಸೆ, ಡೊಳ್ಳುಕುಣಿತ, ಕಹಳೆ ವಾದ್ಯಮೇಳದ ಮೆರುಗು ವಿಶೇಷ ಆಕರ್ಷಣೆ ಆಗಿದ್ದವು.

ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ ಸೇರಿದಂತೆ ಸಮಾಜ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮ: ನಂತರ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಿಕ್ಷಕ ಅಮಾತಿ ಬಸವರಾಜ ವಿಶೇಷ ಉಪನ್ಯಾಸ ನೀಡಿದರು. ಡಿಆರ್‌ಕೆ ರಂಗ ಸಿರಿ ಟ್ರಸ್ಟ್ ವತಿಯಿಂದ ‘ಮಹಾರಾಜ್ ಶಿವಾಜಿ’ ನಾಟಕ ಪ್ರದರ್ಶನವು ನೋಡು ಗರ ವಿಶೇಷ ಗಮನ ಸೆಳೆಯಿತು.
ಭಾವ ಸಾರ ಕ್ಷತ್ರಿಯ ಸಮಾಜ: ನಗರದ ಕೌಲ್‌ ಬಜಾರ್‌ ಪ್ರದೇಶ ವ್ಯಾಪ್ತಿಯ ಶಿವಾಜಿ ನಗರದಲ್ಲಿರುವ ಸಮಾಜದ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರಕ್ಕೆ ಮುಖಂಡ ರಮೇಶ ಪುಷ್ಪನಮನ ಸಲ್ಲಿಸಿದರು.

ಪಾಲಿಕೆ ಸದಸ್ಯ ಎಂ.ಗೋವಿಂದ ರಾಜಲು, ಮುಖಂಡರಾದ ವಿ.ನಾಗರಾಜ ರೆಡ್ಡಿ, ಬಸವರಾಜ, ನಾಗಲಕೆರೆ ಗೋವಿಂದ, ವೆಂಕಟೇಶ, ಶಿವಪ್ಪ, ರಮೇಶ, ಎಸ್.ರಾಜೇಶರಾವ್, ಮಲ್ಲಿಕಾ ರ್ಜುನ, ಡಿ.ರಾಜೇಶ, ಪಾಂಡುರಂಗ, ಮಂಜುನಾಥ, ಗಣೇಶ, ಅರುಣ, ವಿನೋದ, ಹರ್ಷಿತಾ, ಸಮರ್ಥ, ಚೇತನ ತುಕರಾಮ ಇದ್ದರು.

ಮೆರವಣಿಗೆ
ಹಗರಿಬೊಮ್ಮನಹಳ್ಳಿ:
ಛತ್ರಪತಿ ಶಿವಾಜಿ ಜಯಂತ್ಯುತ್ಸವ ಪಟ್ಟಣದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು. ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳದ ನೇತೃತ್ವದಲ್ಲಿ ನಡೆದ ಶಿವಾಜಿ ಭಾವಚಿತ್ರದ ಮೆರವಣಿಗೆಗೆ ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ಚಾಲನೆ ನೀಡಿದರು.

ಪಟ್ಟಣದ ಹಳೇ ಊರಿನ ಅಂಬಾ ಭವಾನಿ ದೇವಸ್ಥಾನದಿಂದ ರಾಮ ನಗರದ ಪಾದಗಟ್ಟಿ ಆಂಜನೇಯ ದೇವ ಸ್ಥಾನದವರೆಗೂ ಅದ್ಧೂರಿ ಮೆರವಣಿಗೆ ನಡೆಯಿತು. ವಾದ್ಯಗೋಷ್ಠಿ ಮೆರವಣಿಗೆಗೆ ಮೆರುಗು ನೀಡಿತು. ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ವಿಎಚ್‌ಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಾಥ, ಭಜರಂಗ ದಳ ಅಧ್ಯಕ್ಷ ವಸಂತ ಜಿತೂರಿ, ಉಪಾ ಧ್ಯಕ್ಷ ಸಂತೋಷ್ ಪೂಜಾರ್, ನಾಗರಾಜ, ಕೊಟ್ರೇಶ್, ಬಿಜೆಪಿ ನಗರ ಘಟಕ ಅಧ್ಯಕ್ಷ ಸಂದೀಪ್, ಎಸ್‌ಎಸ್‌ಕೆ ಸಮಾಜದ ಮುಖಂಡ ದೀಪಕ್ ಸಾ ಕಠಾರೆ, ಭಾವ ಸಾರ ಕ್ಷತ್ರಿಯ ಸಮಾಜದ  ತಾಲ್ಲೂಕು ಘಟಕದ ಅಧ್ಯಕ್ಷ ಸತ್ಯನಾರಾಯಣ ರಾವ್, ಕಾರ್ಯದರ್ಶಿ ಪೆಟಿಗಿ ಹನು ಮಂತರಾವ್, ನೀಳೋಬರಾವ್ ಇತರರು ಇದ್ದರು.

‘ಸಹಿಷ್ಣು ದೊರೆ’
ಹೊಸಪೇಟೆ:
ತಾಲ್ಲೂಕು ಆಡಳಿತದಿಂದ ಭಾನುವಾರ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ ಅವರು ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾ ರ್ಪಣೆ ಮಾಡಿ ಚಾಲನೆ ನೀಡಿದರು.

ಬಳಿಕ ಉಪನ್ಯಾಸ ನೀಡಿದ ಶಿಕ್ಷಕ ನಾಗರಾಜ, ‘ಛತ್ರಪತಿ ಶಿವಾಜಿ ಮಹಾ ರಾಜ ಎಲ್ಲರನ್ನೂ ಸಮಾನವಾಗಿ ಕಂಡಿದ್ದ. ಈ ಕಾರಣಕ್ಕಾಗಿಯೇ ಸಹಿಷ್ಣು ರಾಜ ಎಂದು ಕರೆಯಿಸಿಕೊಳ್ಳುತ್ತಾನೆ’ ಎಂದು ಹೇಳಿದರು.

ತನ್ನ ಸಾಮ್ರಾಜ್ಯದಲ್ಲಿ ಎಲ್ಲ ಪ್ರಜೆ ಗಳನ್ನು ಸಮಾನವಾಗಿ ಕಾಣುತ್ತಿದ್ದ. ಎಲ್ಲರಿಗೂ ಒಂದೇ ನ್ಯಾಯ ಕೊಡುತ್ತಿದ್ದ. ಇದರಿಂದ ಎಲ್ಲರಿಗೂ ಅಚ್ಚುಮೆಚ್ಚಿನ ರಾಜನಾಗಿದ್ದ ಎಂದು ತಿಳಿಸಿದರು.

ಶಿವಾಜಿಗೆ ಆತನ ತಾಯಿ ಜೀಜಾ ಬಾಯಿಯೇ ಸ್ಫೂರ್ತಿಯ ಚಿಲುಮೆಯಾಗಿ ದ್ದಳು. ಶೌರ್ಯ, ಬುದ್ಧಿಮತ್ತೆ, ದಿಟ್ಟತನ ಎಲ್ಲವನ್ನೂ ತಾಯಿಯೇ ಕಲಿಸಿದ್ದಳು. ಧೈರ್ಯ, ಸಾಹಸ ಮತ್ತು ಚಾಣಾಕ್ಷಮತಿ ಯಾಗಿದ್ದ ಶಿವಾಜಿ ವೈರಿಗಳನ್ನು ಸುಲಭ ವಾಗಿ ಸದೆ ಬಡಿಯುತ್ತಿದ್ದ ಎಂದರು. ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಅಧ್ಯಕ್ಷತೆ ವಹಿಸಿದ್ದರು.

ತಹಶೀಲ್ದಾರ್ ಎಚ್.ವಿಶ್ವನಾಥ್‌, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾ ಹಕ ಅಧಿಕಾರಿ ಕೆ.ವಿ.ಭಾಸ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ, ನಗರಸಭೆ ಪರಿಸರ ಎಂಜಿನಿಯರ್ ಶಿಲ್ಪಾಶ್ರೀ, ಮರಾಠ ಸಮುದಾಯದ ಅಧ್ಯಕ್ಷ ಪ್ರಹ್ಲಾದ್‌ ರಾವ್ ಸಿಂಧಿ, ಮರಾಠ ಸಮಾಜದ ಮುಖಂಡ ರಾದ ನಾಗರಾಜ ರಾವ್ ಜಾಧವ್, ಈಶ್ವರ ಚವಾಣ್ ಉಪಸ್ಥಿತರಿದ್ದರು.

‘ರಾಷ್ಟ್ರ ನಿರ್ಮಾತೃ’
ಸಿರುಗುಪ್ಪ:
ಇಲ್ಲಿಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಛತ್ರಪತಿ ಶಿವಾಜಿ ಮಹರಾಜರ 390ನೇ ಜಯಂತ್ಯುತ್ಸವವನ್ನು ಭಾನುವಾರ ಆಚರಿ ಸಲಾಯಿತು.

ತಹಶೀಲ್ದಾರ್‌ ಎಂ.ಸುನಿತಾ ಛತ್ರಪತಿ ಶಿವಾಜಿ ಮಹಾರಾಜರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಮಹಾನ್‌ ದೇಶಭಕ್ತರಾಗಿದ್ದ ಶಿವಾಜಿ ಯವರು ಹಿಂದು ಸಾಮ್ರಾಜ್ಯ ನಿರ್ಮಾಣ ಕ್ಕಾಗಿ ಹಾಗೂ ಪರಕೀಯರ ದಾಳಿಯನ್ನು ಸಮರ್ಥವಾಗಿ ತಡೆದರು ಎಂದು ನೆನೆದರು.

ಶಿವಾಜಿ ಮಹಾರಾಜರ ಕುರಿತು ವಿಶೇಷ ಉಪನ್ಯಾಸವನ್ನು ಹರೀಶ್ ನೀಡಿ ದರು. ನಗರಸಭೆ ಅಧ್ಯಕ್ಷೆ ಬಿ.ಪಾರಿ ಜಾತಮ್ಮ, ತಾ.ಪಂ.ಅಧ್ಯಕ್ಷೆ ಲಕ್ಷ್ಮಿ ನಾಗೇಶಪ್ಪ, ಮುಖಂಡರಾದ ಮುತ್ಯಾಲ ಶೆಟ್ಟಿ, ಧರಪ್ಪನಾಯಕ, ಬಿ.ಸಿ.ಎಂ. ಅಧಿಕಾರಿ ಪಂಪಾಪತಿ,  ಸಮಾಜದ ಮುಖಂಡರಾದ ವೆಂಕಣ್ಣ, ವೀರೇಶ, ಪ್ರಕಾಶ್, ಗುಂಡುರಾವ್  ಇದ್ದರು. ಇಲ್ಲಿಯ ಪ್ರೌಢಶಾಲೆ ಮೈದಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಶಿವಾಜಿ ಮಹಾರಾಜ ಭಾವಚಿತ್ರದ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.