ADVERTISEMENT

ಗುಳೆ ಕಾರ್ಮಿಕರ ಗೋಳು ಕೇಳವವರಾರು ?

ಭೀಕರ ಬರ; ಮಳೆ– ಬೆಳೆ ಕೊರತೆ ಕೂಲಿ ಸಿಗದೇ ಕಾರ್ಮಿಕರು ತತ್ತರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 7:04 IST
Last Updated 19 ಜನವರಿ 2017, 7:04 IST
ಕುರುಗೋಡು ಭಾಗಕ್ಕೆ ಕೂಲಿ ಅರಸಿ ವಲಸೆ ಬಂದ ಕೃಷಿ ಕಾರ್ಮಿಕರು
ಕುರುಗೋಡು ಭಾಗಕ್ಕೆ ಕೂಲಿ ಅರಸಿ ವಲಸೆ ಬಂದ ಕೃಷಿ ಕಾರ್ಮಿಕರು   

ಕುರುಗೋಡು: ‘ನಮ್ ಕಡೀಗೆ ಈ ವರ್ಸ ಮಳಿಬೆಳಿ ಇಲ್ದೆ ಸಣ್ ಮಕ್ಳನ್ನ ಮನ್ಯಾಗ ಬುಟ್ಟು ವನವಾಸಕ್ಕ ಹೊಂಟಂಗಾಗೈತಿ ನಮ್ಮ ಬಾಳೇವು. ದೇವ್ರು ಇದೆಲ್ಲ ನೋಡ್ಲಿ ಅಂತ ನಮ್ಮ ಕಣ್ಣು ಮುಚ್ಚುವಲ್ಲ. ನಾಡು ಹೋಗಂತೈತಿ– ಕಾಡು ಬಾ ಅಂತೈತಿ. ಆದ್ರು ನಾವು ಕೂಲಿ ದುಡ್ಯಾಕ ಹೊಂಟೀವಿ’ ಎಂದು 70ರ ಆಸುಪಾಸಿನ ವೃದ್ಧೆ ಒಂದೆಡೆ ಕಣ್ಣೀರು ಸುರಿಸುತ್ತಿದ್ದರೆ ಮತ್ತೊಂದೆಡೆ ಬರದ ಭೀಕರತೆಯ ಚಿತ್ರಣ ಕರುಳು ಕಿತ್ತುಬರುವಂತಿತ್ತು.

ತೀವ್ರ ಬರಗಾಲಕ್ಕೆ ಸಿಲುಕಿ ಜಮೀನಿನಲ್ಲಿ ಬೆಳೆ ಇಲ್ಲದೆ, ಸ್ಥಳೀಯವಾಗಿ ದುಡಿಯಲು ಉದ್ಯೋಗವೂ ದೊರೆಯದೆ ಕುರುಗೋಡು ಭಾಗಕ್ಕೆ ಕೂಲಿ ಅರಸಿ ಗುಳೆ ಬಂದಿರುವ ಕೊಪ್ಪಳ ಜಿಲ್ಲೆ ಇಳಕಲ್‌ಗಡ ಗ್ರಾಮದ ಶಿವಮ್ಮನ ನೋವಿನ ನುಡಿಗಳಿವು.

ಮಾತು ಮುಂದುವರಿಸಿ ಅವರು... ‘ದುಡ್ಯಾಕ ಕೂಲಿ ಕೆಲ್ಸ ಇಲ್ಲ. ಸೊಸೈಟ್ಯಾಗ ಅಕ್ಕಿ, ಗೋಧಿ ಕೊಡುವಲ್ರು. ಊರಾಗಳ ಸಾವುಕಾರನ್ನ ರೊಕ್ಕ ಸಾಲ ಕೇಳಿದ್ರೆ, ಹೊಲದಾಗ ಬೆಳಿ ಇಲ್ಲ, ಮನ್ಯಾಗ ಕಾಳಿಲ್ಲ, ಹ್ಯಾಂಗ್ ಕೊಡ್ಲಿ ಬೇ ರೊಕ್ಕ ಅಂತ ಕೇಳತಾರ. ನೋಟ್ ಬಂದ್ ಆಗಿ ಇನ್ನೂ ತ್ರಾಸ ಹೆಚ್ಚಾಗೈತ್ರಿ ನಮ್ಮ ಕಷ್ಟಾ ಯಾರ ಕೇಳ್ತಾರು ?’ ಎಂದು ಕಣ್ಣೀರಿಟ್ಟರು.

ಈ ಭೀಕರ ಪರಿಸ್ಥಿತಿ ಶಿವಮ್ಮನಿಗೆ ಮಾತ್ರ ಸೀಮಿತವಾಗಿಲ್ಲ. ಈ ಭಾಗದ ಮಳೆಯಾಶ್ರಿತ ಪ್ರದೇಶದ ಕೂಲಿ ಕಾರ್ಮಿಕರೆಲ್ಲ ಈ ಕಷ್ಟ ಅನುಭವಿಸುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಇಳಕಲ್‌ಗಡ, ಕನಕಗಿರಿ, ಚಿಕ್ಕ ಯಡೇವು, ಹುಲಿಹೈದರ್ ಮತ್ತು   ಬುತ್ನಪೆನ್ನ ಗ್ರಾಮಗಳಲ್ಲಿ ಒಂದು ಅಥವಾ ಎರಡು ಎಕರೆ ಮಳೆಯಾಶ್ರಿತ ಭೂಮಿ ಹೊಂದಿರುವ ಸಣ್ಣ ಇಡುವಳಿದಾರರ ಸಂಖ್ಯೆ ಹೆಚ್ಚು.

ಸುಗ್ಗಿಯವರೆಗೆ ಆಯಾ ಗ್ರಾಮಗಳಲ್ಲಿಯೇ ಅವರ ಜಮೀನುಗಳಲ್ಲಿ ಮಳೆಯಾಶ್ರಿತ ಬೆಳೆ ಬೆಳೆಯುವ ಜತೆ ಸ್ಥಳೀಯವಾಗಿ ದೊರೆಯುವ ಕೃಷಿ ಕೂಲಿ ಚಟುವಟಿಕೆಯಗಳಲ್ಲಿ ತೊಡಗಿಸಿಕೊಂಡು ಜೀವನದ ಬಂಡಿ ಸಾಗಿಸುತ್ತಾರೆ. ನಂತರ ಬೇಸಿಗೆಯಲ್ಲಿ ಉದ್ಯೋಗ ಅರಸಿ ಬಳ್ಳಾರಿ, ಬೆಂಗಳೂರು, ಮಂಗಳೂರು, ತೇರದಾಳ, ಮಹಾರಾಷ್ಟ್ರದ ರತ್ನಗಿರಿ ಅಲ್ಲದೇ ಕೇರಳ ಕೆಲವು ಊರುಗಳಿಗೆ ತೆರಳಿ ಕೂಲಿ ಮಾಡಿ ಹಣ ಉಳಿತಾಯ ಮಾಡಿಕೊಂಡು ಗ್ರಾಮಗಳಿಗೆ ಮರಳುವುದು ಇವರ ಕಾಯಕ.

ಆದರೆ, ಈ ವರ್ಷದ ಸ್ಥಿತಿಯೇ ಬೇರೆಯೇ ಆಗಿದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಭೀಕರ ಬರಗಾಲ ಆವರಿಸಿರುವುದರಿಂದ ವಲಸೆ ಹೋಗಿ ಉದ್ಯೋಗ ಪಡೆದುಕೊಳ್ಳುವುದೂ ಕಷ್ಟ ಸಾಧ್ಯವಾಗಿದೆ.

ಕುರುಗೋಡು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಲುವೆ ನೀರಾವರಿ ಹೊಂದಿದ ರೈತರು ಪ್ರತಿ ವರ್ಷ ಮೆಣಸಿನಕಾಯಿ ಮತ್ತು ಹತ್ತಿ ಹೆಚ್ಚಾಗಿ ಬೆಳೆಯುತ್ತಾರೆ. ವಲಸೆ ಬಂದ ಕಾರ್ಮಿಕರಿಗೆ ಜನವರಿಯಿಂದ ಏಪ್ರಿಲ್ ವರೆಗೆ ನಾಲ್ಕು ತಿಂಗಳು ಕೈತುಂಬ ಕೆಲಸ ದೊರೆಯುತ್ತಿತ್ತು. ಆದರೆ ಈ ವರ್ಷದ ಪರಿಸ್ಥಿತಿಯೇ ಬೇರಾಗಿದೆ.

ಪ್ರಾರಂಭದಿಂದಲೂ ಸಮರ್ಪಕ ಮಳೆ ಆಗಿಲ್ಲ. ಮಳೆಯ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹವಾಗದೆ ಮುಂಗಾರು ಬೆಳೆಗೂ ಸಮರ್ಪಕ ನೀರು ದೊರೆಯದೆ ಬೆಳೆ ಫಲ ನೀಡುವ ಮೊದಲು ಒಣಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿ ನಿರ್ಮಾಣವಾಗಿದೆ.

ಅಳಿದುಳಿದ ಬೆಳೆಯ ಒಕ್ಕಣೆ ಕಾರ್ಯಕ್ಕೆ ಸ್ಥಳೀಯವಾಗಿಯೇ ದೊರೆಯುವ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ. ವಲಸೆ ಬಂದ ಕಾರ್ಮಿಕರಿಗೆ ಪ್ರತಿ ವರ್ಷ ದೊರೆಯುತ್ತಿದ್ದಷ್ಟು ಉದ್ಯೋಗ ದೊರೆಯುತ್ತಿಲ್ಲ, ಎನ್ನುವ ಕೊರಗು ಕಾಡುತ್ತಿದೆ.

ಕಾರ್ಮಿಕರು ಉದ್ಯೋಗ ಅರಸಿ ನಗರ ಪ್ರದೇಶಗಳತ್ತ ಮುಖ ಮಾಡುವುದನ್ನು ತಪ್ಪಿಸಲು ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ  ತಂದಿದ್ದರೂ ಪ್ರಯೋಜನವಾಗಿಲ್ಲ. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ವಲಸೆ ಮುಂದುವರಿದಿದೆ.
–ವಾಗೀಶ ಕುರುಗೋಡು

ಕುಡ್ಯಾಕ ನೀರಿಲ್ಲ, ಉಣ್ಣಾಕ ಅನ್ನ ಇಲ್ಲ
‘ನಮ್ಮೂರಾಗ ಮಳಿ– ಬೆಳಿ ಇಲ್ಲ. ಕುಡ್ಯಾಕ ನೀರಿಲ್ಲ. ಊಟಕ್ಕ ಅನ್ನನೂ ಇಲ್ಲದಾಂಗ ಆಗೈತಿ. ಮಕ್ಳು ಮರಿ ಬದುಕಿಸಬೇಕು ಎಂಬ ಆಸೇ ಹೊತ್ತ ಊರುಬಿಟ್ಟು ಹೊರಗ ಹೋಗಿ ಕೂಲಿ– ನಾಲಿ ಮಾಡಬೇಕಾಗೈತಿ’ ಎಂಬುದು ಇಳಕಲ್‌ಗಡದ ಕೃಷಿ ಕಾರ್ಮಿಕ ಮಹಿಳೆ ಲಕ್ಷ್ಮಮ್ಮ ಅವರ ಅಳಲು.

*ಉದ್ಯೋಗ ಅರಸಿ ನಗರಗಳತ್ತ ಕಾರ್ಮಿಕರು  * ದುಡಿಮೆಗೆ ಮುಂದಾದ ವೃದ್ಧರು * ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡಿಗೆ ಗುಳೆ ಹೋಗುವ ಪರಿಸ್ಥಿತಿ

ADVERTISEMENT

ಬದುಕಿಗಿದು ಅನಿವಾರ್ಯ
*₹ 100 ಕೊಪ್ಪಳ ಜಿಲ್ಲೆಯಲ್ಲಿ ಸಿಗುವ ದಿನದ ಸರಾಸರಿ ಕೂಲಿ.
*ಹೆಚ್ಚಿನ ಕೂಲಿಗಾಗಿ ಗುಳೆ ತಮ್ಮ ಊರಿನಲ್ಲಿ ದೊರೆಯುವ ಕೂಲಿ ಹಣಕ್ಕಿಂತ ಹೆಚ್ಚಿನ ಕೂಲಿ ಹಣ ಪಡೆಯಲು ಕಾರ್ಮಿಕರ ಗುಳೆ
*₹ 200ಕುರಗೋಡು ಭಾಗದಲ್ಲಿ ಸಿಗುವ ದಿನದ ಸರಾಸರಿ ಕೂಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.