ADVERTISEMENT

ಘೋರ್ಪಡೆ ಮನೆತನಕ್ಕೆ ಒಲಿದ ಕ್ಷೇತ್ರ

ಸ್ವಾತಂತ್ರ್ಯಪೂರ್ವದಲ್ಲೂ ಘೋರ್ಪಡೆ ಆಡಳಿತ: 14 ಚುನಾವಣೆಗಳಲ್ಲಿ ಏಳು ಬಾರಿ ಎಂ.ವೈ ಘೋರ್ಪಡೆ ಆಯ್ಕೆ

ಕೆ.ನರಸಿಂಹ ಮೂರ್ತಿ
Published 3 ಏಪ್ರಿಲ್ 2018, 9:48 IST
Last Updated 3 ಏಪ್ರಿಲ್ 2018, 9:48 IST

ಬಳ್ಳಾರಿ: ಅಕ್ರಮ ಗಣಿಗಾರಿಕೆಯಿಂದ ದೇಶದ ಗಮನ ಸೆಳೆದಿದ್ದ ಈ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಸ್ವಾತಂತ್ರಪೂರ್ವದಲ್ಲಿ ಘೋರ್ಪಡೆ ರಾಜವಂಶದ ಆಡಳಿತವನ್ನು ಕಂಡಿದ್ದ ಕ್ಷೇತ್ರ, ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಗಳಲ್ಲೂ ಈ ಕುಟುಂಬವನ್ನೇ ನೆಚ್ಚಿಕೊಂಡಿದ್ದು ಐತಿಹಾಸಿಕ ದಾಖಲೆ. ಕಾಂಗ್ರೆಸ್‌ ಮತ್ತು ಘೋರ್ಪಡೆ ಕುಟುಂಬ ಒಂದೇ ಎಂಬಂತೆ ಇಲ್ಲಿ ಮತದಾರರು ಬೆಂಬಲ ನೀಡಿದ್ದಾರೆ.ಇದುವರೆಗಿನ ಚುನಾವಣೆಗಳಲ್ಲಿ ಬಿಜೆಪಿಗೆ ಒಮ್ಮೆಯೂ ಇಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಒಮ್ಮೆ ಜನತಾಪಕ್ಷ ಮಗುದೊಮ್ಮೆ ಜೆಡಿಎಸ್‌ ಗೆಲುವು ಕಂಡಿತ್ತು.

ಒಂದು ಉಪಚುನಾವಣೆಯೂ ಸೇರಿದಂತೆ ಇಲ್ಲಿ 14 ಚುನಾವಣೆಗಳು ನಡೆದಿದ್ದು, 12 ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಇದು, ಇಲ್ಲಿನ ಮತದಾರರು ಆ ಪಕ್ಷದ ಬಗ್ಗೆ ತಾಳಿರುವ ಸಕಾರಾತ್ಮಕ ಧೋರಣೆಯನ್ನು ಸೂಚಿಸುತ್ತದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ವೈ.ಘೋರ್ಪಡೆ ಏಳು ಬಾರಿ ಗೆಲುವು ಸಾಧಿಸಿದ್ದರು.1957ರಲ್ಲಿ ನಡೆದಿದ್ದ ಮೊದಲ ಚುನಾವಣೆಯಲ್ಲಿ ಘೋರ್ಪಡೆ ಕುಟುಂಬ ಸ್ಪರ್ಧಿಸಿರಲಿಲ್ಲ. ಆಗ ಎಚ್‌.ರಾಯನಗೌಡ ಗೆದ್ದಿದ್ದರು. ನಂತರ 1959ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ರಾಜಮನೆತನ ಘೋರ್ಪಡೆ ಮೊದಲ ಬಾರಿ ಚುನಾವಣೆಯನ್ನು ಎದುರಿಸಿದ್ದರು. 1962, 67, 72ರ ಚುನಾವಣೆಗಳಲ್ಲಿ ಅವರು ಸತತ ಗೆಲುವು ಸಾಧಿಸಿದ್ದರು. 1989, 94 ಮತ್ತು 99ರ ಚುನಾವಣೆಗಳಲ್ಲಿ ಅವರದ್ದು ಹ್ಯಾಟ್ರಿಕ್‌ ಗೆಲುವಾಗಿತ್ತು. ಈಗಲೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಾರಮ್ಯವೇ ಮುಂದುವರಿದಿದೆ.

ಕಾಂಗ್ರೆಸ್‌ ಪಕ್ಷವು ವಿಭಜನೆ ಕಂಡಿದ್ದ ಕಾಲಘಟ್ಟದಲ್ಲಿ ಘೋರ್ಪಡೆ ಚುನಾವಣೆಯಿಂದ ದೂರ ಉಳಿದಿದ್ದರು. ಆದರೂ, 1978ರ ಚುನಾವಣೆಯಲ್ಲಿ ಕಾಂಗ್ರೆಸ್‌ ಐ ಅಭ್ಯರ್ಥಿಯಾಗಿದ್ದ ಸಿ.ರುದ್ರಪ್ಪ ಅವರೇ ಗೆದ್ದಿದ್ದರು. 1985ರ ಚುನಾವಣೆಯಲ್ಲಿ ಘೋರ್ಪಡೆಯವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರಕಿರಲಿಲ್ಲ. ಆಗ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಯು.ಭೂಪತಿ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದರು.

ADVERTISEMENT

ಅಲ್ಲೀವರೆಗಿನ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ಅಭ್ಯರ್ಥಿಯೊಬ್ಬರು ಅದೇ ಮೊದಲ ಬಾರಿಗೆ ಗೆದ್ದಿದ್ದರು ಎಂಬುದು ವಿಶೇಷ. ಭೂಪತಿ ಅವ
ರಿಗೆ ಘೋರ್ಪಡೆ ಬೆಂಬಲವೂ ದೊರಕಿದ್ದುದು ಅದಕ್ಕೆ ಇದ್ದ ಪ್ರಮುಖ ಕಾರಣಗಳಲ್ಲಿ ಒಂದು.2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಜೆಡಿಎಸ್‌ನ ಸಂತೋಷ್‌ಲಾಡ್‌ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಈ ತುಕಾರಂ ಗೆದ್ದರು. ಈ ಅವಧಿಯಲ್ಲಿ ಅವರಿಗೆ ಒಮ್ಮೆ ಬಿಜೆಪಿ, ಮತ್ತೊಮ್ಮೆ ಜೆಡಿಎಸ್‌ ಸಮೀಪ ಸ್ಪರ್ಧೆ ನೀಡಿತ್ತು.

ಅವಿರೋಧ ಆಯ್ಕೆ.. 3 ಬಾರಿ ಸಚಿವ...

ಬಳ್ಳಾರಿ: 1967ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂ.ವೈ.ಘೋರ್ಪಡೆ ಅವಿರೋಧವಾಗಿ ಆಯ್ಕೆಯಾಗಿದ್ದುದು ವಿಶೇಷ. 1985ರ ಚುನಾವಣೆಯಲ್ಲಿ ಸಂಡೂರಿನಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ದೊರಕದ ಸನ್ನಿವೇಶದಲ್ಲೇ 1986ರಲ್ಲಿ ನಡೆದಿದ್ದ ರಾಯಚೂರು ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದರು. ನಂತರ 1989ರಲ್ಲಿ ಮತ್ತೆ ಸಂಡೂರು ಕ್ಷೇತ್ರಕ್ಕೆ ಬಂದು ಸ್ಪರ್ಧಿಸಿದ್ದರು.ಘೋರ್ಪಡೆ ಅವರು ಡಿ.ದೇವರಾಜ ಅರಸು ಸಂಪುಟದಲ್ಲಿ 1972–77ರವರೆಗೂ ಹಣಕಾಸು ಸಚಿವರಾಗಿದ್ದರು. 1990ರಲ್ಲಿ ಬಂಗಾರಪ್ಪ ಸಂಪುಟದಲ್ಲಿ ಹಾಗೂ 1999ರಲ್ಲಿ ಎಸ್‌.ಎಂ.ಕೃಷ್ಣ ಸಂಪುಟದಲ್ಲಿಯೂ ಸಚಿವರಾಗಿದ್ದರು.

ಚೋರನೂರಿನಿಂದ ಕುಡಿತಿನಿವರೆಗೆ..

ಬಳ್ಳಾರಿ: ಕ್ಷೇತ್ರವು ಸಂಡೂರಷ್ಟೇ ಅಲ್ಲದೇ ಬಳ್ಳಾರಿ ತಾಲ್ಲೂಕಿನ ಗ್ರಾಮಗಳನ್ನೂ ಒಳಗೊಂಡಿದೆ. ಸಂಡೂರು ಪುರಸಭೆ, ತಾರಾನಗರ, ದೇವಗಿರಿ, ಯಶವಂತನಗರ, ವಡ್ಡು, ಚೋರನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಗ್ರಾಮಗಳೊಂದಿಗೆ ಬಳ್ಳಾರಿ ತಾಲ್ಲೂಕಿನ ಕುಡಿತಿನಿ, ವೇಣಿವೀರಾಪುರ ಮತ್ತು ಏಳುಬೆಂಚಿ ಗ್ರಾಮವೂ ಇದೇ ಕ್ಷೇತ್ರಕ್ಕೆ ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.