ADVERTISEMENT

ಚಿರತೆ ಹಂಪಿಯಿಂದ ಕಾಡಿಗೆ

ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:55 IST
Last Updated 20 ಫೆಬ್ರುವರಿ 2017, 6:55 IST

ಹೊಸಪೇಟೆ: ತಾಲ್ಲೂಕಿನ ಹಂಪಿ–ಕಡ್ಡಿ ರಾಂಪುರ ಬಳಿಯ ಷಣ್ಮುಖಪ್ಪನ ಗದ್ದೆ ಬಳಿಯ ಬೆಟ್ಟದ ಮೇಲೆ ಬೀಡು ಬಿಟ್ಟಿದ್ದ ಎರಡು ಚಿರತೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶ ಕಂಡಿದೆ.

ಬಳ್ಳಾರಿಯ ಉಪ ಅರಣ್ಯ ಸಂರಕ್ಷ ಣಾಧಿಕಾರಿ ರಾಣಾ ತಕತ್‌ ಸಿಂಗ್‌, ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಂ. ನಾಗರಾಜ್‌ ನೇತೃತ್ವದ ತಂಡ ಶನಿವಾರ ತಡರಾತ್ರಿವರೆಗೆ ಕೂಂಬಿಂಗ್‌ ನಡೆಸಿ, ಎರಡೂ ಚಿರತೆಗಳನ್ನು ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದೆ.

ಇದೇ15ರಂದು ಸಂಜೆ ಬೆಟ್ಟದ ಮೇಲೆ ಎರಡು ಚಿರತೆಗಳು ಒಟ್ಟಿಗೆ ಕಾಣಿಸಿಕೊಂಡಿದ್ದವು. ಮರುದಿನ ಬೆಳಿಗ್ಗೆ ಹಾಗೂ ಸಂಜೆ ಕೂಡ ಅದೇ ಜಾಗದಲ್ಲಿ ಬೀಡು ಬಿಟ್ಟಿದ್ದವು. ಆದರೆ, ಅವುಗಳಿಂದ ಜನ–ಜಾನುವಾರುಗಳಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಸ್ಥಳೀಯ ರೈತರು ಹಾಗೂ ಪ್ರವಾಸಿಗರು ಮಾತ್ರ ಆತಂಕಕ್ಕೆ ಒಳಗಾಗಿದ್ದರು. ಈ ವಿಷಯ ತಿಳಿದ ಹವ್ಯಾಸಿ ಹಾಗೂ ವನ್ಯಜೀವಿ ಛಾಯಾಗ್ರಾಹಕರ ದಂಡೇ ಹಂಪಿಗೆ ಬಂದಿತ್ತು. ಚಿರತೆಗಳು ಬೀಡು ಬಿಟ್ಟಿದ್ದ ಬೆಟ್ಟದ ವಿರುದ್ಧ ದಿಕ್ಕಿನ ಬೆಟ್ಟದಿಂದ ಅವುಗಳ ಚಿತ್ರವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದರು.

‘ಬೆಟ್ಟ ಗುಡ್ಡ ಹಾಗೂ ಕುರುಚಲು ಪ್ರದೇಶ ಚಿರತೆಗಳಿಗೆ ಹೇಳಿ ಮಾಡಿಸಿದ ತಾಣ. ಹಂಪಿ ಸುತ್ತಮುತ್ತಲಿನ ಪ್ರದೇಶ ಅವುಗಳಿಗೆ ಪ್ರಶಸ್ತವಾದ ಸ್ಥಳ. ಆಗಾಗ ಅವು ಇಲ್ಲಿ ಕಾಣಿಸಿಕೊಳ್ಳುತ್ತವೆ.  ಆದರೆ, ಇಲ್ಲಿಯವರೆಗೆ ಅವುಗಳಿಂದ ಯಾರಿಗೂ ಹಾನಿಯಾಗಿಲ್ಲ. ಆದರೂ ಜನರ ಆತಂಕ ದೂರ ಮಾಡಲು ಚಿರತೆ ಗಳನ್ನು ಕಾಡಿಗೆ ಅಟ್ಟಿದ್ದೇವೆ’ ಎಂದು ನಾಗರಾಜ್‌ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.