ADVERTISEMENT

ದಾಳಿಂಬೆ, ಪಪ್ಪಾಯಿ ಬೆಳೆಗೆ ಹಾನಿ

​ಪ್ರಜಾವಾಣಿ ವಾರ್ತೆ
Published 8 ಮೇ 2017, 6:49 IST
Last Updated 8 ಮೇ 2017, 6:49 IST

ಕೊಟ್ಟೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ಗುಡುಗು ಮಿಂಚಿನಿಂದ ಕೂಡಿದ ಭಾರಿ ಆಲಿಕಲ್ಲು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

ಸಮೀಪದ ಹರಾಳು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಾಳಿಂಬೆ ಮತ್ತು ಪಪ್ಪಾಯಿ ಬೆಳೆಗಳು ಹಾನಿಗೊಳಗಾಗಿವೆ. ಉತ್ತಂಗಿ ಕೊಟ್ರಗೌಡರಿಗೆ ಸೇರಿದ 6 ಎಕರೆ, ಎಚ್.ಎನ್.ಮಂಗಳಮ್ಮ 6 ಎಕರೆ, ಎಚ್.ಎಂ.ಕೊಟ್ರಯ್ಯ 3 ಎಕರೆ, ಉಪ್ಪಾರ ರಾಮಣ್ಣ 6 ಎಕರೆ, ಗೋನಾಳ್ ಬಸವರಾಜ 6 ಎಕರೆ, ನೆಲ್ಕುದುರೆ ಲೋಕಪ್ಪ 5 ಎಕರೆ ಜಮೀನುಗಳಲ್ಲಿ ಬೆಳೆದ ಹಣ್ಣಿನ ಬೆಳೆ ಸಂಪೂರ್ಣ ಹಾಳಾಗಿವೆ. ಒಟ್ಟು ₹ 40 ಲಕ್ಷಕ್ಕೂ ಅಧಿಕ ಮೌಲ್ಯದ ದಾಳಿಂಬೆ ಹಣ್ಣಿನ ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಇದೇ ಗ್ರಾಮದ ಎಸ್. ಸರೋಜಮ್ಮ ಮತ್ತು ರುದ್ರಮ್ಮ ಇವರುಗಳಿಗೆ ಸೇರಿದ ಒಟ್ಟು 15 ಎಕರೆಯಲ್ಲಿ ಬೆಳೆದ ಪಪ್ಪಾಯಿ ಕೂಡ ಹಾನಿ ಉಂಟಾಗಿದೆ. ಇದರ ಮೌಲ್ಯ ಅಂದಾಜು ಹತ್ತು ಲಕ್ಷ ರೂಪಾಯಿ  ಎಂದು ತಿಳಿದು ಬಂದಿದೆ.

ADVERTISEMENT

ಪಟ್ಟಣದಲ್ಲಿಯೂ ಸಹ ಬಿರುಗಾಳಿಗೆ ಕೆಲವು ಕಡೆ ಮರಗಳು ಉರುಳಿ ಬಿದ್ದರೂ ಯಾವುದೇ ರೀತಿಯ ತೊಂದರೆ ಉಂಟಾಗಿರುವುದಿಲ್ಲ. ರಸ್ತೆಯಲ್ಲಿ ಬಿದ್ದ ಮರಗಳನ್ನು ಕೂಡಲೇ ತೆರವುಗೊಳಿಸಿದ ಪರಿಣಾಮ ಸುಗಮ ಸಂಚಾರಕ್ಕೆ ಅನುಕೂಲವಾಯಿತು.

‘ರಾತ್ರಿ ಸುರಿದ ಆಲಿಕಲ್ಲು ಮಳೆಯಿಂದ ನಮ್ಮ ಹಾಗೂ ಇತರೆ ರೈತರ ಹೊಲಗಳಲ್ಲಿ ಬೆಳೆದಿದ್ದ ದಾಳಿಂಬೆ ಹಾಗೂ ಪಪ್ಪಾಯಿ ಹಣ್ಣಿನ ಬೆಳೆ ನೆಲ ಕಚ್ಚಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ’ ಎಂದು ರೈತ ಶಾನುಭೋಗರ ಗುರುಮೂರ್ತಿ ಹಾಗೂ ಇತರೇ ರೈತರು ತಮ್ಮ ಅಳಲು ತೋಡಿಕೊಂಡು ಕೂಡಲೇ ಸರ್ಕಾರ ಪರಿಹಾರ ನೀಡಲು ಮುಂದಾಗ ಬೇಕೆಂದು ಆಗ್ರಹಿಸಿದ್ದಾರೆ.

ತಾಲ್ಲೂಕಿನ ವಿವಿಧೆಡೆ ಮಳೆ
ಸಂಡೂರು: ತಾಲ್ಲೂಕಿನ ಬೊಮ್ಮಾಗಟ್ಟ, ಬಂಡ್ರಿ, ಚೋರುನೂರು,  ಯಶವಂತ ನಗರ, ಸಂಡೂರು, ಬನ್ನಿಹಟ್ಟಿ, ತಾಳೂರು, ನಾಗಲಾಪುರ ಸೇರಿದಂತೆ ವಿವಿದೆಡೆ ಶನಿವಾರ ಕೆಲ ಸಮಯ ಮಳೆಯಾಗಿದೆ. ಕೆಲವೆಡೆ ಹಸಿ ಮಳೆಯಾಗಿದ್ದರೆ, ಕೆಲವೆಡೆ ತುಂತುರು ಮಳೆಯಾಗಿದೆ.

ಸಂಡೂರು ಮಳೆ ಮಾಪನ ಕೇಂದ್ರದಲ್ಲಿ ಭಾನುವಾರ 9 ಮಿ.ಮೀ, ಚೋರುನೂರು ಮಳೆ ಮಾಪನ ಕೇಂದ್ರದಲ್ಲಿ 6.3 ಹಾಗೂ ಕುರೆಕುಪ್ಪ ಮಳೆ ಮಾಪನ ಕೇಂದ್ರದಲ್ಲಿ 8 ಮಿ.ಮೀ ಮಳೆ ದಾಖಲಾಗಿದೆ.

ಹೊಸಪೇಟೆ: ಭಾರಿ  ಬಿರುಗಾಳಿ- ಮಳೆ
ಹೊಸಪೇಟೆ: ನಗರ ಸೇರಿ ತಾಲ್ಲೂಕಿನ ಹಲವು ಭಾಗಗಳಲ್ಲಿ ಭಾನುವಾರ ಸಂಜೆ ಕೆಲಕಾಲ ಬಿರುಸಿನ ಮಳೆಯಾಗಿದೆ.ಸಂಜೆ 7.45ರ ಸುಮಾರಿಗೆ ಆರಂಭ ವಾದ ಮಳೆ 8ರವರೆಗೆ ಬಿರುಸಾಗಿತ್ತು. ಬಳಿಕ ತುಂತುರು ಮಳೆ ಬೀಳುತ್ತಿತ್ತು. ಸಂಜೆ ಆರು ಗಂಟೆಯಿಂದ ಭಾರಿ ಗಾಳಿ ಬೀಸುತ್ತಿತ್ತು. ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು.

ಶನಿವಾರ ಸಂಜೆಯೂ ಸುಮಾರು ಅರ್ಧಗಂಟೆಯ ವರೆಗೆ ಮಳೆಯಾಗಿತ್ತು. ಸತತ ಎರಡು ದಿನ ಮಳೆ ಸುರಿದ ಕಾರಣ ವಾತಾವರಣ ಸ್ವಲ್ಪ ತಂಪಾಗಿದೆ. ಬಿಸಿಲಿನಿಂದ ಕಂಗೆಟ್ಟಿ ಹೋಗಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಾಲ್ಲೂಕಿನ ಹಂಪಿ, ಕಮಲಾಪುರ, ವೆಂಕಟಾಪುರ, ಮಲಪನಗುಡಿ, ಕಡ್ಡಿರಾಂಪುರ, ಹೊಸೂರು, ನಾಗೇನಹಳ್ಳಿ, ಸೀತಾರಾಮ ತಾಂಡಾ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಯಾವುದೇ ಆಸ್ತಿ ಅಥವಾ ಪ್ರಾಣ ಹಾನಿಯಾಗಿರುವುದು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.