ADVERTISEMENT

ದಾಸರಹಳ್ಳಿ ತಾಂಡಾ: ಕುಡಿವ ನೀರಿನ ಬವಣೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 6:17 IST
Last Updated 28 ಜೂನ್ 2017, 6:17 IST

ಹೂವಿನಹಡಗಲಿ: ತಾಲ್ಲೂಕಿನ ದಾಸರ ಹಳ್ಳಿ ತಾಂಡಾದಲ್ಲಿ ಕುಡಿವ ನೀರಿನ ಅಭಾವ ತಲೆದೋರಿದ್ದು, ಜನರು ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ರೈತರ ಪಂಪ್‌ಸೆಟ್‌ಗಳಿಗೆ ಅಲೆಯುತ್ತಿ ದ್ದಾರೆ. ಬೇಸಿಗೆಯನ್ನು ಹೇಗೋ ನಿಭಾ ಯಿಸಿದ್ದ ಜನರು ಮಳೆಗಾಲ ಆರಂಭ ವಾದರೂ ನೀರಿನ ಸಮಸ್ಯೆ ಬಗೆಹರಿ ಯದ ಕಾರಣ ರೋಸಿ ಹೋಗಿದ್ದಾರೆ.

ತಾಂಡಾದಲ್ಲಿನ ಐದು ಕೊಳವೆ ಬಾವಿಗಳ ಪೈಕಿ ಒಂದರಲ್ಲಿ ನೀರು ಬರಿದಾಗಿದೆ. ಮೂರು ಕೊಳವೆ ಬಾವಿಗಳು ವಾರದ ಹಿಂದೆ ದುರಸ್ತಿಗೀಡಾಗಿದ್ದು, ರಿಪೇರಿ ವಿಳಂಬವಾಗಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ.

ಗ್ರಾಮ ಪಂಚಾಯ್ತಿಯವರ ಅಸಮರ್ಪಕ ನಿರ್ವಹಣೆಯಿಂದ ತಾಂಡಾದಲ್ಲಿ ನೀರಿನ ಸಮಸ್ಯೆ ಜಟಿಲವಾಗಿದೆ. ಮೋಟರ್‌ಗಳು ಸುಟ್ಟಿರುವ ಕಾರಣ ಒಂದು ವಾರದಿಂದ ಸಮಸ್ಯೆ ತೀವ್ರಗೊಂಡಿದ್ದರೂ ಯಾರೂ ಸ್ಪಂದಿಸುತ್ತಿಲ್ಲ ಎಂದು ತಾಂಡಾ ಜನರು ದೂರಿದ್ದಾರೆ.

ADVERTISEMENT

ಸ್ಥಳೀಯವಾಗಿ ನೀರಿನ ಅಭಾವ ತಲೆದೋರಿರುವ ಕಾರಣ ಜನರು ದೂರದ ಪಂಪ್‌ಸೆಟ್‌ಗಳಿಗೆ ಅಲೆಯುತ್ತಿದ್ದಾರೆ. ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಾಟಾಏಸ್‌ಗಳಲ್ಲಿ ದೊಡ್ಡ ಬ್ಯಾರೆಲ್, ಪಾತ್ರೆ, ಕೊಡಗಳನ್ನು ಕೊಂಡೊಯ್ದು ನೀರು ಸಂಗ್ರಹಿಸುತ್ತಿದ್ದಾರೆ.

ಎರಡು ದಶಕದ ಹಿಂದೆ ಅನುಷ್ಠಾನ ಗೊಂಡ ತಾಲ್ಲೂಕಿನ ಮೊದಲ ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಗೆ ದಾಸರಹಳ್ಳಿ ತಾಂಡಾ ಸೇರಿದ್ದರೂ ಇಂದಿಗೂ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಈ ಯೋಜನೆ ದುರಸ್ತಿಯ ಹೆಸರಲ್ಲಿ ಪ್ರತಿ ವರ್ಷ ಲಕ್ಷಾಂತರ ಹಣ ನೀರಿನಂತೆ ಖರ್ಚು ಮಾಡುತ್ತಿದ್ದರೂ ತಾಂಡಾಕ್ಕೆ ನೀರು ಪೂರೈಕೆ ಆಗುತ್ತಿಲ್ಲ.

ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷೆ ದೀನಾ ಮಂಜುನಾಥ ಈಚೆಗೆ ತಾಂಡಾಕ್ಕೆ ಖುದ್ದು ಭೇಟಿ ನೀಡಿ ನೀರಿನ ಸಮಸ್ಯೆ ಅವಲೋಕಿಸಿದ್ದರು. ‘ಆಗ ಕೆಲ ದಿನಗಳ ಮಟ್ಟಿಗೆ ಬಗೆಹರಿದಿದ್ದ ಸಮಸ್ಯೆ ನಂತರ ಯಥಾಸ್ಥಿತಿ ಮುಂದು ವರಿದಿದೆ’ ಎಂದು ಜನರು ದೂರುತ್ತಿದ್ದಾರೆ.

ಕುಡಿವ ನೀರಿನ ವಿಚಾರದಲ್ಲಿ ಮುಖಂಡರು ರಾಜಕೀಯ ಕೆಸರೆರಚಾಟ ನಡೆಸುವುದನ್ನು ಬಿಟ್ಟು ಸಮರ್ಪಕ ನೀರು ಪೂರೈಕೆ ಮಾಡಬೇಕು. ತಾಂಡಾದಲ್ಲಿ ದುರಸ್ತಿಗೀಡಾಗಿರುವ ಮೋಟರುಗಳನ್ನು ರಿಪೇರಿ ಮಾಡಿ ನೀರು ಸರಬರಾಜು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.