ADVERTISEMENT

ದೇವದಾಸಿಯರ ಹಾಡಿಗೆ ತಲೆದೂಗಿದ ಪ್ರೇಕ್ಷಕರು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2016, 5:29 IST
Last Updated 24 ಡಿಸೆಂಬರ್ 2016, 5:29 IST
ಹಗರಿಬೊಮ್ಮನಹಳ್ಳಿ: ‘ಶಿವನ ಮಗಳೇ ಗಾಳಿ ತರಬೇಡ ಮಹಲು ಮೇಲೆ’ ಹಾಡಿನ ಮೂಲಕ ನೆರೆದಿದ್ದ ನೂರಾರು ಜನರನ್ನು ರಂಜಿಸಿದವರು ತಾಲ್ಲೂಕಿನ 65ವರ್ಷ ವಯಸ್ಸಿನ ಹಾದಿಮನಿ ಯಮುನವ್ವ ಮತ್ತು ಸಂಗಡಿಗರು.
 
ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ ಪುರಸ್ಕೃತೆ ಗುಡಿ ಹಿಂದಲ ಪಕ್ಕೀರವ್ವ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಭೂದಾನಿ ಬಾಚಿಗೊಂಡನಹಳ್ಳಿಯ ಹುಲಿಗೆಮ್ಮ ಇವರ ಸ್ಮರಣಾರ್ಥ ಕರ್ ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ದೇವದಾಸಿ ಮಹಿಳೆಯರಿಂದ ಹಮ್ಮಿಕೊಂಡಿದ್ದ ‘ಹೊಲ–ಮನೆಯ ಪದಗಳ ಗಾಯನ’ ದಲ್ಲಿ 20ಕ್ಕೂ ಹೆಚ್ಚು ಜಾನಪದ ಶೈಲಿಯ ಹಾಡುಗಳು 2 ಗಂಟೆ ಕಾಲ ಜನಮನ ಸೂರೆಗೊಂಡವು.
 
ತಾಲ್ಲೂಕಿನ ಅಂಕಸಮುದ್ರದ ಮಟ್ಟಿ ಮರಿಯವ್ವ– ಸಂಗಡಿಗರು, ಮುತ್ಕೂರಿನ ಕೆ.ಅಂಜಿನಮ್ಮ– ಸಂಗಡಿಗರು, ಹಂಪ ಸಾಗರದ ಹುಚ್ಚಿಂಗೆಮ್ಮ– ಸಂಗಡಿಗರು, ಬನ್ನಿಕಲ್ಲು ಗ್ರಾಮದ ಮಲಿಯಕ್ಕ ಮತ್ತು ಸಂಗಡಿಗರು, ಬನ್ನಿಕಲ್ಲು ಗ್ರಾಮದ ಚಂಚಿ ಮಾಯವ್ವ ಸಂಗಡಿಗರು ಸೇರಿ 35ಕ್ಕೂ ಹೆಚ್ಚು ದೇವದಾಸಿ ಮಹಿಳೆಯರು ವೈಚಾ ರಿಕತೆಯನ್ನು, ಗ್ರಾಮೀಣ ಸೊಗಡನ್ನು ತಮ್ಮ ಹಾಡುಗಳಲ್ಲಿ ಕಟ್ಟಿಕೊಟ್ಟರು. ವಿಶೇಷವೆಂದರೆ ಹಾಡುಗಳನ್ನು ಹಾಡಿದ ವರಲ್ಲಿ ಬಹುತೇಕರು 60ವರ್ಷ ವಯಸ್ಸಿನ ಆಸುಪಾಸಿನವರು. 
 
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಹುರಕಡ್ಲಿ ಶಿವಕುಮಾರ್‌, ಸ್ವಾತಂತ್ರ್ಯ ಬಂದು 70 ರ್ಷಗಳಾದರೂ ಇನ್ನೂ ದೇವದಾಸಿ ಮತ್ತು ಅಸ್ಪೃಶ್ಯತೆ ಪದ್ದತಿ ಜೀವಂತ ಇರುವುದು ದುರಂತ ಎಂದು ಕಳವಳ ವ್ಯಕ್ತಪಡಿಸಿದರು. 
 
ಶಿಕ್ಷಣಕ್ಕಾಗಿ ತನ್ನ 12 ಎಕರೆ ಭೂಮಿ ದಾನ ಮಾಡಿದ ಬಾಚಿಗೊಂಡನಹಳ್ಳಿಯ ಹುಲಿಗೆಮ್ಮ, ಸಾವಿರಾರಾರು ಹಾಡು ಗಳನ್ನು ಹಾಡುವ ಮೂಲಕ ಜಾನಪದ ಲೋಕವನ್ನು ಶ್ರೀಮತಂತ ಗೊಳಿಸಿದ ಗುಡಿಹಿಂದಲ ಪಕ್ಕೀರಮ್ಮ ಅವರನ್ನು ಸ್ಮರಿಸಿದರು. ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಪ್ರೊ. ಮಲ್ಲಿಕಾರ್ಜುನ ಮಾನ್ಪಡೆ, ಜಾನಪದ ಅಕಾಡೆಮಿ ಸದಸ್ಯ ಕೆ.ರಾಮು, ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಜಗನ್ನಾಥ ಮಾತನಾಡಿದರು. 
 
ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ.ಮಾಳಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಮೇಟಿ ಕೊಟ್ರಪ್ಪ, ಪ್ರಾಂತ ರೈತ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಬಸವರಾಜ, ಸಮಾಜ ಕಲ್ಯಾಣ ಇಲಾಖೆಯ ಸಹಾ ಯಕ ನಿರ್ದೇಶಕ ಎಂ.ದ್ಯಾಮಪ್ಪ, ಸಂಶೋಧಕಿ ರಾಧಾ ಇದ್ದರು. ಗಾಯನ ದಲ್ಲಿ ಪಾಲ್ಗೊಂಡ ಎಲ್ಲ ದೇವದಾಸಿ ಮಹಿಳೆಯರನ್ನು ಸನ್ಮಾನಿಸಲಾಯಿತು.
 
**
ಪ್ರತಿಭೆಗೆ ವೇದಿಕೆ
ದೇವದಾಸಿ ಮಹಿಳೆಯರು ತಮ್ಮ ಪ್ರತಿಭೆಯನ್ನು ಹೊರಹಾಕಲು ಇಂಥಹ ವೇದಿಕೆಗಳು ಸಹಕಾರಿಯಾಗಿವೆ. ತಾಲ್ಲೂಕಿನ 50ಕ್ಕೂ ಹೆಚ್ಚು ದೇವದಾಸಿ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಹಾಡುಗಳನ್ನು ದಾಖಲಿಸಲಾಗಿದೆ ಎಂದು ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಬಿ. ಮಾಳಮ್ಮ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.