ADVERTISEMENT

ನಗರಸಭೆ: ನೀಗದ ಸಿಬ್ಬಂದಿ ಕೊರತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಮೇ 2017, 10:20 IST
Last Updated 24 ಮೇ 2017, 10:20 IST
ಹೊಸಪೇಟೆ ನಗರಸಭೆ ಕಚೇರಿ
ಹೊಸಪೇಟೆ ನಗರಸಭೆ ಕಚೇರಿ   

ಹೊಸಪೇಟೆ: ಸುಮಾರು ಒಂದೂವರೆ ತಿಂಗಳಾದರೂ ಇಲ್ಲಿನ ನಗರಸಭೆ ಕಂದಾಯ ವಿಭಾಗದಲ್ಲಿ ಸಿಬ್ಬಂದಿ ಕೊರತೆ ನೀಗಿಲ್ಲ. ಕಾನೂನುಬಾಹಿರವಾಗಿ ಖಾತಾ ಬದಲಾವಣೆ ಮಾಡಿಕೊಟ್ಟಿರುವ ಕಾರಣ ಏ. 3ರಂದು ಜಿಲ್ಲಾಧಿಕಾರಿ ರಾಮಪ್ರಸಾದ ಮನೋಹರ್‌ ಅವರು ನಗರಸಭೆಯ ಪೌರಾಯುಕ್ತ ಎಂ.ಪಿ.ನಾಗಣ್ಣ ಹಾಗೂ ಕಂದಾಯ ವಿಭಾಗದ 14 ಜನ ಸಿಬ್ಬಂದಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಬೇರೆ ಕಡೆ ವರ್ಗಾವಣೆ ಮಾಡಿದ್ದರು. ಅದಾದ ಒಂದು ತಿಂಗಳ ವರೆಗೆ ವರ್ಗಾವಣೆಗೊಂಡ ಸಿಬ್ಬಂದಿ ಸ್ಥಳದಲ್ಲಿ ಬೇರೊಬ್ಬರ ನಿಯೋಜನೆ ಮಾಡಿರಲಿಲ್ಲ.

ಇದರಿಂದ ಇಡೀ ಕಂದಾಯ ವಿಭಾಗ ಸಂಪೂರ್ಣ ನಿಷ್ಕ್ರಿಯಗೊಂಡಿತು. ಫಾರಂ ನಂ. 3, ಮ್ಯುಟೇಶನ್‌, ಕಟ್ಟಡ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಯಾವುದೇ ಕೆಲಸ ನಡೆಯಲಿಲ್ಲ. ಮನೆ ಕಟ್ಟಬೇಕೆಂದು ಆಸೆ ಹೊಂದಿದವರು ನಗರಸಭೆ ಕಚೇರಿಗೆ ಅಲೆದು ಅಲೆದು ಸುಸ್ತಾದರು. ನಗರಸಭೆ ಅಧ್ಯಕ್ಷ ಅಬ್ದುಲ್‌ ಖದೀರ್‌ ನೇತೃತ್ವದಲ್ಲಿ ಸದಸ್ಯರ ನಿಯೋಗವೊಂದು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಅದಕ್ಕೆ ಸ್ಪಂದಿಸಿದ ಡಿ.ಸಿ. ಇತ್ತೀಚೆಗೆ ಕಂದಾಯ ವಿಭಾಗಕ್ಕೆ ಆರು ಜನ ಸಿಬ್ಬಂದಿಯನ್ನು ಕೊಟ್ಟಿದ್ದಾರೆ. ಆದರೆ, ಇನ್ನೂ ಎಂಟು ಜನ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಈಗಲೂ ಜನರ ಕೆಲಸಗಳು ಆಗುತ್ತಿಲ್ಲ. ಕಂದಾಯ ವಿಭಾಗ ಇದ್ದೂ ಇಲ್ಲದಂತಾಗಿದೆ. ಅಷ್ಟೇ ಅಲ್ಲ, ಉಪವಿಭಾಗಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ಹೆಗಲಿಗೆ ಪೌರಾಯುಕ್ತರ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಇತರ ಕೆಲಸಗಳ ಜತೆಗೇ ಪೌರಾಯುಕ್ತರ ಹೊಣೆಯನ್ನು ನಿಭಾಯಿ ಸಬೇಕಾಗಿ ಬಂದಿರುವುದರಿಂದ ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ.

ADVERTISEMENT

ಇದ ರಿಂದಾಗಿ ಒಟ್ಟಾರೆ ನಗರಸಭೆ ವ್ಯಾಪ್ತಿ ಯಲ್ಲಿ ಕೆಲಸಗಳು ಮಂದಗತಿಯಲ್ಲಿ ಸಾಗಿವೆ. ‘ಫಾರಂ ನಂ. 3 ಕೊಡದ ಕಾರಣ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ನಗರಸಭೆಗೆ ಬರಬೇಕಾದ ಬಹುಮುಖ್ಯ ಹಾಗೂ ದೊಡ್ಡ ಆದಾಯಕ್ಕೆ ಪೆಟ್ಟು ಬೀಳುತ್ತಿದೆ’ ಎಂದು ಅಬ್ದುಲ್‌ ಖದೀರ್‌ ಹೇಳಿದರು.

‘ಜಿಲ್ಲಾಧಿಕಾರಿ ಅವರು ಕೈಗೊಂಡ ಕ್ರಮದಿಂದ ಭೂಮಾಫಿಯಾ, ಮಧ್ಯ ವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಈ ಕೆಲಸ ಬಹಳ ಹಿಂದೆಯೇ ಆಗಬೇಕಿತ್ತು. ನಮ್ಮ ಮನವಿ ಮೇರೆಗೆ ಕಂದಾಯ ವಿಭಾಗಕ್ಕೆ ಆರು ಜನ ಸಿಬ್ಬಂದಿ ಕೊಟ್ಟಿದ್ದಾರೆ. ಎಷ್ಟು ಜನ ವರ್ಗಾವಣೆ ಮಾಡಿದ್ದಾರೋ ಅಷ್ಟೂ ಜನರನ್ನು ಕೊಡಬೇಕು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆ ಕಟ್ಟಲು ಎಲ್ಲ ಸಿದ್ಧತೆ ಮಾಡಿ ಕೊಂಡಿದ್ದೆ. ಅಷ್ಟರೊಳಗೆ ಜಿಲ್ಲಾಧಿಕಾರಿ ಕಂದಾಯ ವಿಭಾಗದ ಎಲ್ಲ ಸಿಬ್ಬಂದಿ ಯನ್ನು ವರ್ಗಾವಣೆಗೊಳಿಸಿದರು. ಇವತ್ತಲ್ಲ, ನಾಳೆ ಹೊಸ ಸಿಬ್ಬಂದಿ ಬರಬ ಹುದು. ಮನೆ ನಿರ್ಮಿಸುವುದಕ್ಕೆ ಅನು ಮತಿ ಸಿಗಬಹುದು ಅಂದು ಕೊಂಡಿದ್ದೆ. ಆದರೆ, ಒಂದೂವರೆ ತಿಂಗಳಾದರೂ ಅನುಮತಿ ಸಿಕ್ಕಿಲ್ಲ. ಏನು ಮಾಡಬೇಕು ತಿಳಿಯುತ್ತಿಲ್ಲ’ ಎಂದು ನಗರದ ಬಸವೇ ಶ್ವರ ಬಡಾವಣೆ ನಿವಾಸಿ ಯೂಸುಫ್‌ ಪಟೇಲ್‌ ಗೋಳು ತೋಡಿಕೊಂಡರು.

* * 

ನಗರಸಭೆಯಲ್ಲಿ ಹೆಚ್ಚು ಕೆಲಸಗಳಿರುತ್ತವೆ. ಶೀಘ್ರ ಪೌರಾಯುಕ್ತರ ಹುದ್ದೆ ಹಾಗೂ ಕಂದಾಯ ವಿಭಾಗದಲ್ಲಿ ಸಿಬ್ಬಂದಿ ಕೊರತೆ ನೀಗಿಸಬೇಕು
ಅಬ್ದುಲ್‌ ಖದೀರ್‌, ಅಧ್ಯಕ್ಷ, ನಗರಸಭೆ

* * 

ಕಂದಾಯ ವಿಭಾಗಕ್ಕೆ ಎಂಟು ಸಿಬ್ಬಂದಿ ಕೊಡುವಂತೆ ಜಿಲ್ಲಾಧಿಕಾರಿಗೆ ಕೇಳಲಾಗಿದೆ. ಶೀಘ್ರ ಸಿಬ್ಬಂದಿ ನಿಯೋಜನೆ ಮಾಡುವ ಭರವಸೆ ಸಿಕ್ಕಿದೆ.
ಪ್ರಶಾಂತ್‌ ಕುಮಾರ್‌ ಮಿಶ್ರಾ, ಉಪವಿಭಾಗಾಧಿಕಾರಿ, ಪ್ರಭಾರ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.