ADVERTISEMENT

‘ನಿಯಮ ಬಾಹಿರ ವಂತಿಗೆಗೆ ಕ್ರಮ’

ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರ ಸಭೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 7:32 IST
Last Updated 22 ಏಪ್ರಿಲ್ 2017, 7:32 IST
ಹೂವಿನಹಡಗಲಿ:  ‘ತಾಲ್ಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ವಂತಿಗೆ ವಸೂಲಿ ಮಾಡಿದರೆ ಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್ ಕೆ.ರಾಘವೇಂದ್ರ ರಾವ್ ಎಚ್ಚರಿಕೆ ನೀಡಿದರು.
 
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪಿಯುಸಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರು ಮತ್ತು ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು.
 
ಅಧಿಕ ಶುಲ್ಕ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದು ನಿಲ್ಲಿಸದಿದ್ದರೆ ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಶುಲ್ಕ ಪಾವತಿಸದ ಮಕ್ಕಳನ್ನು ಶಾಲೆಯಿಂದ ಹೊರಹಾಕಿ, ಮಾನಸಿಕ ಹಿಂಸೆ ನೀಡಿದರೆ ಕಾನೂನು ರೀತ್ಯಾ ಕ್ರಮ ಜರುಗಿಸುವುದಾಗಿ ಹೇಳಿದರು.
 
ಖಾಸಗಿ ಸಂಸ್ಥೆಗಳು ಶೇ 5ರಷ್ಟು ಕಡು ಬಡತನದ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಸಾಮಾಜಿಕ ಕಳಕಳಿ ಮೆರೆಯಬೇಕು. ಸೇವೆ ಸಲ್ಲಿಸುವ ಶಿಕ್ಷಕರಿಗೆ ಕನಿಷ್ಠ ವೇತನ, ಭವಿಷ್ಯ ನಿಧಿ ನೀಡಬೇಕು. ಅಗತ್ಯ ಮೂಲಸೌಕರ್ಯಗಳೊಂದಿಗೆ ಉತ್ತಮ ಕಲಿಕಾ ವಾತಾವರಣ ರೂಪಿಸಬೇಕು ಎಂದು ಸಲಹೆ ನೀಡಿದರು.
 
ಸಿಪಿಐ ಸುಧೀರ್ ಕುಮಾರ್ ಬೆಂಕಿ ಮಾತನಾಡಿ, ಪೋಸ್ಕೊ ಕಾಯ್ದೆ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು. ಮಕ್ಕಳನ್ನು ಕರೆತರುವ ಖಾಸಗಿ ವಾಹನಗಳ ಮೇಲೆ ನಿಗಾ ಇರಿಸಬೇಕು. ಅನುಭವಿ ಚಾಲಕರ ನೇಮಿಸುವ ವೇಳೆ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿರಬೇಕು ಎಂದು ತಿಳಿಸಿದರು.
 
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಕೊಟ್ರೇಶ್ ಮಾತನಾಡಿ,  ಎಲ್ಲ ಶಾಲೆಗಳ ಮುಖ್ಯಸ್ಥರು ಶುಲ್ಕದ ಅನುಮೋದನೆ ಪಡೆದು ಪ್ರಕಟಿಸಬೇಕು. ಸಿ.ಸಿ.ಕ್ಯಾಮೆರಾ ಅಳವಡಿಕೆ, ಶೌಚಾಲಯ ವ್ಯವಸ್ಥೆ, ಶಿಕ್ಷಕರ ಸೇವಾ ಭದ್ರತೆ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು.
 
ಶಾಲೆಗಳಲ್ಲಿ ನೋಟ್‌ ಪುಸ್ತಕ, ಸಾಕ್ಸ್‌, ಟೈ, ಬೆಲ್ಟ್ ಇತರೆ ಸಾಮಗ್ರಿ ಮಾರಾಟ ನಿರ್ಬಂಧಿಸಿದೆ. ಮಾನ್ಯತೆ ಕ್ರಮಬದ್ಧವಾಗಿ ನವೀಕರಣಗೊಳಿಸಬೇಕು. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. 
ಶಿಕ್ಷಣ ಸಂಯೋಜಕ ನಿಂಗಪ್ಪ ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.