ADVERTISEMENT

‘ನೋಟು ರದ್ದತಿಯಿಂದ ರೈತರಿಗೆ ಸಂಕಷ್ಟ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 7:21 IST
Last Updated 4 ಮಾರ್ಚ್ 2017, 7:21 IST

ಕೂಡ್ಲಿಗಿ: ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ರದ್ದತಿಯ ವಿರುದ್ಧ ಕೂಡ್ಲಿಗಿ ಮತ್ತು ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಪಟ್ಟಣ ಪಂಚಾಯ್ತಿ ಸಮುದಾಯ ಭವನದಲ್ಲಿ ಗುರುವಾರ ಜನ ವೇದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಗಳಿ ಮಂಜುನಾಥ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನೋಟು ರದ್ದತಿ ನಂತರ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ತಿಂಗಳುಗಟ್ಟಲೆ ಕೈಯಲ್ಲಿ ಹಣವಿಲ್ಲದೆ ಪರದಾಡುವಂತಾಗಿದೆ ಎಂದರು.

ಡಿಸಿಸಿ ಸದಸ್ಯ ಹಿರೇಕುಂಬಳಗುಂಟೆ ಉಮೇಶ್ ಮಾತನಾಡಿ, ನೋಟು ರದ್ದು ಮಾಡಿದ ನಂತರ ದೇಶದ ಆರ್ಥಿಕ ಸ್ಥಿತಿಯೇ ಹದಗೆಟ್ಟಿದೆ. ಆದರೂ ಕೇಂದ್ರ ಸರ್ಕಾರ ಏನು ಅಗಿಲ್ಲ ಎನ್ನುವಂತೆ ವರ್ತಿಸುತ್ತ, ಪೊಳ್ಳು ಭರವಸೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ತಮ್ಮ ಹಣ ತಾವು ಪಡೆಯಲು ಸರದಿ ಸಾಲಿನಲ್ಲಿ ನಿಂತ ಜನರು ತಮ್ಮ ಪ್ರಾಣವನ್ನು ಬೀಡಬೇಕಾಗಿ ಬಂದಿದ್ದು ಈ ದೇಶದ ದುರಂತವೇ ಸರಿ ಎಂದು ಕಿಡಿಕಾರಿದರು.

ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರೇಶ್ ಬಾಬು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸಿದ್ಧನಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಎಂ. ಶಶಿಧರ, ಎಪಿಎಂಸಿ ಉಪಾಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ತಾಲ್ಲೂಕು ಪಂಚಾಯ್ತಿ ಸದಸ್ಯ ರಾಘವೇಂದ್ರ, ಪಟ್ಟಣ ಪಂಚಾಯ್ತಿ ಸದಸ್ಯ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.