ADVERTISEMENT

ಪಕ್ಷಿಗಳ ಮಾರಣಹೋಮ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2014, 6:51 IST
Last Updated 31 ಮೇ 2014, 6:51 IST

ಬಳ್ಳಾರಿ: ‘ತೋಟಗಾರಿಕೆ ಬೆಳೆಯ ರಕ್ಷಣೆಯ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಮೀನುಗಳಲ್ಲಿ ಅಳವಡಿಸ­ಲಾಗುತ್ತಿರುವ ಬಲೆ­ಗಳಿಂದಾಗಿ, ಮನುಷ್ಯರಂತೆಯೇ ಬದುಕುವ ಹಕ್ಕನ್ನು ಹೊಂದಿರುವ ವಿವಿಧ ಪಕ್ಷಿಗಳ ಮಾರಣಹೋಮ ನಡೆಯುತ್ತಿದ್ದು, ಪಕ್ಷಿವಿರೋಧಿ ಬಲೆಗಳನ್ನು ನಿಷೇಧಿಸಿ, ನಶಿಸಿ ಹೋಗುತ್ತಿರುವ ಪಕ್ಷಿ ಸಂಕುಲ ರಕ್ಷಿಸಬೇಕು’ ಎಂದು ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ಸಂಘದ ಅಧ್ಯಕ್ಷ ಸಮದ್ ಕೊಟ್ಟೂರು ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಪರೂಪದ, ಅಳಿವಿನ ಅಂಚಿನಲ್ಲಿರುವ ಸ್ಥಳೀಯ ಹಾಗೂ ವಲಸೆ ಪಕ್ಷಿಗಳು ಹಣ್ಣು, ಹಂಪಲು ತಿನ್ನದೆ ಕೀಟ, ಗೆದ್ದಲು ಭಕ್ಷಿಸುತ್ತ ರೈತನ ಮಿತ್ರನಂತೆ ಕೆಲಸ ಮಾಡುತ್ತಿದ್ದು, ಪರಿಸರ ಸಮತೋಲನ ಕಾಪಾಡಲು ಕಾರಣವಾಗಿವೆ. ಆದರೂ ತೋಟಗಾರಿಕೆ ಬೆಳೆ ರಕ್ಷಿಸಲು ಬಲೆಗಳನ್ನು ಹಾಕುವ ಮೂಲಕ ಆಹಾರ ಅರಸಿ ಬರುವ ಪಕ್ಷಿಗಳ ಸಾವಿಗೆ ರೈತರು ಕಾರಣವಾಗುತ್ತಿದ್ದಾರೆ ಎಂದರು.

ಮೊದಲು ಸಾಂಪ್ರದಾಯಿಕ ಕೃಷಿ ಪದ್ಧತಿ ಅಡಿ ಬೆಳೆಯುತ್ತಿದ್ದ ರೈತರು ಪಕ್ಷಿಗಳನ್ನು ಸಾಯಿಸದೆ ಫಸಲು ರಕ್ಷಿಸುವ ಸುಸ್ಥಿರ ವಿಧಾನ ಅನುಸರಿಸು­ತ್ತಿದ್ದರು.

ಆದರೆ, ಆಧುನಿಕ ಕೃಷಿ ಹಾಗೂ ತೋಟಗಾರಿಕೆ ಪದ್ಧತಿಯು ಪಕ್ಷಿ ಸಂಕುಲಕ್ಕೆ ಮಾರಕವಾಗಿವೆ. ತೆಳುವಾದ ಮೀನಿನ ಬಲೆಗಳನ್ನು ಮರಗಳ ಮೇಲೆ, ಬಳ್ಳಿಗಳ ಮೇಲೆ ಅಳವಡಿಸುವುದರಿಂದ ಹಣ್ಣು ತಿನ್ನುವ ಪಕ್ಷಿಗಳಷ್ಟೇ ಅಲ್ಲದೆ, ಹುಳು ಮತ್ತಿತರ ವಸ್ತುಗಳನ್ನು ತಿನ್ನುವ ಪಕ್ಷಿಗಳು ಸಾಯುತ್ತಿವೆ. ವನ್ಯಜೀವಿ ರಕ್ಷಣೆಗಾಗಿ ಕಾಯ್ದೆ ರೂಪಿಸುವ ಸರ್ಕಾರ ಬಲೆಗಳನ್ನು ಕಟ್ಟಿಕೊಳ್ಳಲು ತೋಟಗಾರಿಕೆ ರೈತರಿಗೆ ಸಹಾಯಧನ ಸೌಲಭ್ಯದಡಿ ಹಣಕಾಸಿನ ನೆರವು ನೀಡುತ್ತಿರುವುದು ಪಕ್ಷಿ ಸಂಕುಲಕ್ಕೆ ಮಾರಕವಾಗಿದೆ ಎಂದು ಅವರು ಹೇಳಿದರು.

ಬೆಳೆ ರಕ್ಷಣೆ ವೇಳೆ ಪಕ್ಷಿಗಳಿಗೆ ಅಪಾಯ ಎದುರಾಗದಂತೆ ಹಲವು ವಿಧಾನಗಳನ್ನು ಅನುಸರಿಸಬಹು­ದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಪಕ್ಷಿ ರಕ್ಷಣೆಗೆ ಕ್ರಮ ಕೈಗೊಂಡು, ಅಪರೂಪದ ಪಕ್ಷಿ ಸಂಕುಲ ರಕ್ಷಿಸಲು ಮುಂದಾಗಬೇಕು. ತೋಟಗಳಲ್ಲಿ ಪಕ್ಷಿ ವಿರೋಧಿ ಬಲೆ ಅಳವಡಿಸುವುದನ್ನು ನಿಷೇಧಿಸಬೇಕು. ರೈತರು ಪಕ್ಷಿ ಪ್ರೀತಿ ತೋರುವ ಮೂಲಕ ಅವುಗಳ ರಕ್ಷಣೆಗೆ ಪಣ ತೊಡಬೇಕು. ಸೊಳ್ಳೆ ಪರದೆ ಅಥವಾ ದಪ್ಪನೆಯ ದಾರದ ಸುರಕ್ಷಿತ ಬಲೆಗಳನ್ನು ಹಾಕಿಕೊಳ್ಳುವ ಮೂಲಕ ಹಕ್ಕಿಗಳ ಅಪಾಯ ತಪ್ಪಿಸಬೇಕು ಎಂದು ಅವರು ಮನವಿ  ಮಾಡಿದರು.

ಈ ಭಾಗದ ಹಗರಿ ಬೊಮ್ಮನಹಳ್ಳಿ, ಕೂಡ್ಲಿಗಿ, ಕುಷ್ಟಗಿ, ಕೊಪ್ಪಳ, ವಿಜಾಪುರ, ಬಾಗಲಕೋಟೆ ಮತ್ತಿತರ ಕಡೆ ದ್ರಾಕ್ಷಿ, ದಾಳಿಂಬೆ ಬೆಳೆಯುವ ರೈತರು ಪಕ್ಷಿಗಳನ್ನು ನಿಯಂತ್ರಿಸಲು ಬಲೆ ಹಾಕುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಸಂಘದ ವಿಜಯ್‌ ಇಟಗಿ ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.