ADVERTISEMENT

‘ಪರಿಕರಗಳಿಲ್ಲದೆ ಪೌರಕಾರ್ಮಿಕರಿಂದ ಸ್ವಚ್ಛತೆ’

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 6:39 IST
Last Updated 9 ಸೆಪ್ಟೆಂಬರ್ 2017, 6:39 IST

ಬಳ್ಳಾರಿ: ‘ಬೆಳಿಗ್ಗೆ ನಗರದಲ್ಲಿ ರೈಲಿಳಿದು ನಾನು ಪ್ರವಾಸಿ ಮಂದಿರಕ್ಕೆ ತೆರಳುವ ಸಂದರ್ಭದಲ್ಲಿ, ಸುರಕ್ಷತಾ ಪರಿಕರ ಗಳಿಲ್ಲದೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದುದು ಕಂಡುಬಂತು. ಜಿಲ್ಲಾ ಕೇಂದ್ರದಲ್ಲೇ ಇಂಥ ಪರಿಸ್ಥಿತಿ ಇದೆ ’ ಎಂದು  ರಾಷ್ಟ್ರೀಯ ಸಫಾಯಿ ಕರ್ಮ ಚಾರಿಗಳ ಆಯೋಗದ ಸದಸ್ಯ ಸದಸ್ಯ  ಜಗದೀಶ್‌ ಹಿರೇಮನಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಪಾಲಿಕೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಅಲ್ಲಲ್ಲಿ ಭೇಟಿ ನೀಡಿ ತಪಾಸಣೆ ನಡೆಸಲಾಗುತ್ತಿದೆ’ ಎಂದು ಹೇಳಿದ ಪರಿಸರ ಎಂಜಿನಿಯರ್‌ ಮಾತಿಗೆ ಆಕ್ಷೇಪಿಸಿದ ಅವರು, ‘ಎಲ್ಲ ಪೌರ ಕಾರ್ಮಿಕರ ಸ್ಥಿತಿ–ಗತಿಗಳನ್ನೂ ನಿಯಮಿತವಾಗಿ ಪರಿಶೀಲಿಸಬೇಕು’ ಎಂದು ತಾಕೀತು ಮಾಡಿದರು.

‘ಇತ್ತೀಚೆಗೆ ಕರ್ನೂಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಂಡುಬಂದ ಪೌರಕಾರ್ಮಿಕರನ್ನು ಕೇಳಿದಾಗ, ಮಾಸಿಕ ₹4,500 ವೇತನ ಪಡೆಯುತ್ತಿರುವುದಾಗಿ ತಿಳಿಸಿದರು. ಸರ್ಕಾರ ಅವರಿಗೆ ನಿಗದಿ ಮಾಡಿರುವುದು ₹11,000. ಆದರೆ ಗುತ್ತಿಗೆದಾರರು ಅಷ್ಟನ್ನೂ ನೀಡುತ್ತಿರಲಿಲ್ಲ. ಈ ಸಂಬಂಧ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಯಿತು. ಬಳ್ಳಾರಿ ಯಲ್ಲೂ ಇಂಥ ಘಟನೆ ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ವೇತನವೇ ಇಲ್ಲ: ‘ಹತ್ತು ತಿಂಗಳಿಂದ ವೇತನ ನೀಡಿಲ್ಲ’ ಎಂದು ಕಮಲಾಪುರದ ಪೌರಕಾರ್ಮಿಕರೊಬ್ಬರು ಇದೇ ಸಂದ ರ್ಭದಲ್ಲಿ ಸದಸ್ಯರ ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾ ಧಿಕಾರಿ, 2013–14ರ ನಂತರ ಟೆಂಡರ್‌ ಕರೆಯದೇ ಕಾರ್ಮಿಕರ ಸೇವೆ ಬಳಸಿ ಕೊಳ್ಳಲಾಗುತ್ತಿದೆ. ಹೀಗಾಗಿ ವೇತನ ನೀಡಲು ಸಾಧ್ಯವಿಲ್ಲ’ ಎಂದರು.

‘ನಿಯಮಾವಳಿ ಪಾಲಿಸಿ ವೇತನ ವನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಿ’ ಎಂದು ಜಗದೀಶ್‌ ಅವರು ಜಿಲ್ಲಾಧಿಕಾರಿ ಡಾ.ರಾಮ ಪ್ರಸಾದ್‌ ಮನೋಹರ್‌ ಅವರಿಗೆ ಸೂಚಿಸಿದರು.

ಉಪಾಹಾರ ನೀಡಿ: ‘ಜಿಲ್ಲೆಯಲ್ಲಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡ ಬೇಕು. ಉಪಾಹಾರ ಭತ್ಯೆಯನ್ನು ನೀಡಿ ದರೆ ಉದ್ದೇಶ ಈಡೇರುವುದಿಲ್ಲ. ಬೆಳಗಿನ ಜಾವದಿಂದಲೇ ಕೆಲಸ ಮಾಡುವ ಮಂದಿ ಹೊಟ್ಟೆ ತುಂಬ ಉಪಾಹಾರ ಸೇವಿಸ ಬೇಕು ಎಂಬುದೇ ಯೋಜನೆ ಉದ್ದೇಶ’ ಎಂದು ಸ್ಪಷ್ಟಪಡಿಸಿದರು.

ಎಫ್‌ಐಆರ್‌ ಇಲ್ಲ: ‘ಮಲಬಾಚುವ ವೃತ್ತಿ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013ರ ಪ್ರಕಾರ, ಮ್ಯಾನ್‌ ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ನಡೆಸಲು ಅವಕಾಶ ನೀಡುವಂತಿಲ್ಲ. ಅಂಥ ಸನ್ನಿವೇಶಗಳು ಕಂಡುಬಂದರೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿ ಸಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ ಜಿಲ್ಲೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಸಮಾನತೆ ಯೂನಿಯನ್‌ ಕರ್ನಾಟಕ ಸಂಘಟನೆಯ ರಾಮಚಂದ್ರ ದೂರಿದರು.

‘ಮ್ಯಾನ್‌ಹೋಲ್‌ಗೆ ಇಳಿಯುವವರೂ ಮಲಬಾಚುವವರೇ’
ಬಳ್ಳಾರಿ: ‘ಮ್ಯಾನ್‌ಹೋಲ್‌ಗೆ ಇಳಿದು ಸ್ವಚ್ಛತಾ ಕಾರ್ಯ ಮಾಡುವವರನ್ನು ಮಲಬಾಚುವ ವೃತ್ತಿ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013ರ ಅಡಿ ಗುರುತಿಸಿ ಪುನರ್ವಸತಿ ಕಲ್ಪಿಸಲೇಬೇಕು. ಹಾಗೆ ಮಾಡಿದರೆ ಅಧಿಕಾರಿಗಳು ತಪ್ಪಿತಸ್ಥರಾಗು ವುದಿಲ್ಲ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ  ಜಗದೀಶ್‌ ಹಿರೇಮನಿ ಅಭಿಪ್ರಾಯಪಟ್ಟರು.

ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಮಲ ಹೊತ್ತರೆ ಮಾತ್ರ ಮ್ಯಾನುಯಲ್‌ ಸ್ಕ್ಯಾವೆಂಜರ್‌ಗಳಾಗುವುದಿಲ್ಲ. ಮಲವನ್ನು ಕೈಯಿಂದ ಮುಟ್ಟಿ ಸಾಗಿಸುವ, ವಿಲೇವಾರಿ ಮಾಡುವ ಎಲ್ಲ ಕೆಲಸವೂ ಕಾಯ್ದೆ ಅಡಿ ಬರುತ್ತದೆ. ಕಾಯ್ದೆ ಜಾರಿಗೆ ಬಂದ ಬಳಿಕ 525 ಮಂದಿ ಅಂಥ ಕೆಲಸ ಮಾಡುವವರು ಇದ್ದಾರೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿದೆ. ಈಗಲೂ ಅಂಥವರು ಇದ್ದರೆ ಗುರುತಿಸುವುದು ಅಧಿಕಾರಿಗಳ ಜವಾಬ್ದಾರಿ’ ಎಂದರು.

‘ಅಧಿಕಾರಿಗಳು ಒಂದೆಡೆ ಕಾಯ್ದೆ ಉಲ್ಲಂಘನೆಯ ಭಯವನ್ನು ನಟಿಸುತ್ತಾ, ಮತ್ತೊಂದೆಡೆ ಮ್ಯಾನ್‌ಹೋಲ್‌ಗೆ ಇಳಿದು ಕೆಲಸ ಮಾಡುವವವರನ್ನು ತಡೆಯದೇ, ಪುನರ್ವಸತಿ ಕಲ್ಪಿಸದೆ ಕರ್ತವ್ಯ ನಿರ್ಲಕ್ಷ್ಯ ಮಾಡುತ್ತಿರುವುದು ಎಲ್ಲೆಡೆ ಕಂಡು ಬರುವ ವಿದ್ಯಮಾನ. ಇದು ಸರಿಯಲ್ಲ’ ಎಂದರು. 

ಮಲಬಾಚುವವರಿಗೆ ಇನ್ನೂ ಪರಿಹಾರವಿಲ್ಲ!
ಜಿಲ್ಲೆಯಲ್ಲಿ ಮಲಬಾಚುವ ಕೆಲಸ ಮಾಡುವ ಹತ್ತು ಮಂದಿಯನ್ನು 2013ರಲ್ಲೇ ಗುರುತಿಸಲಾಗಿದ್ದರೂ, ಅವರಿಗೆ ಇದುವರೆಗೆ ಪರಿಹಾರ ನೀಡದೇ ಇರುವ ಸಂಗತಿಯೂ ಬೆಳಕಿಗೆ ಬಂತು. ಈ ಬಗ್ಗೆ ಮಾಹಿತಿ ನೀಡಿದ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ , ‘ಕಳೆದ ಆಗಸ್ಟ್‌ನಲ್ಲಿ ಪರಿಹಾರದ ಕುರಿತ ಪ್ರಸ್ತಾವನೆಯನ್ನು ನಿಗಮದ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ’ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ,‘ಹತ್ತು ಮಂದಿಯನ್ನು ಕಚೇರಿಗೆ ಕರೆಸಿ ಸಭೆ ನಡೆಸಲಾಗಿದೆ. ಆ ಕೆಲಸ ಮಾಡದೇ ಇರುವಂತೆ ಸೂಚಿಸಲಾಗಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.