ADVERTISEMENT

ಪರಿಹಾರ ದೊರಕಿಸಲು ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:19 IST
Last Updated 9 ನವೆಂಬರ್ 2017, 5:19 IST

ಬಳ್ಳಾರಿ: ‘ಹಿಂದಿನ ವರ್ಷ ನ.8ರಂದು ನೋಟು ರದ್ದತಿಯಾದ ಬಳಿಕ ದೇಶದಲ್ಲಿ ಸಾವಿಗೀಡಾದ 150 ಮಂದಿಯ ಕುಟುಂಬಗಳಿಗೆ ಪರಿಹಾರ ದೊರಕಿಸಬೇಕು’ ಎಂದು ರಾಷ್ಟ್ರಪತಿಗಳನ್ನು ಆಗ್ರಹಿಸಿ ನಗರ ಜಿಲ್ಲಾ ಯುವ ಕಾಂಗ್ರೆಸ್‌ನ ನೂರಾರು ಮಂದಿ ನಗರದಲ್ಲಿ ಬುಧವಾರ ಧರಣಿ, ಪ್ರತಿಭಟನೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್‌ ಜೇಟ್ಲಿಯವರ ಪ್ರತಿಕೃತಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ‘ನರೇಂದ್ರ ಮೋದಿ ತೊಲಗಲಿ’ ಎಂದು ಘೋಷಣೆ ಕೂಗಿದರು.

‘ನೋಟು ರದ್ದತಿಯಿಂದಾಗಿ ಇಡೀ ದೇಶವೇ ನರಳುವಂತಾಗಿದೆ. ಒಂದು ವರ್ಷವಾದರೂ ಸಣ್ಣಪುಟ್ಟ ಉದ್ಯಮಿಗಳು, ಬಡವರು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನಾದರೂ ಕೇಂದ್ರ ಜನಪರ ನಿರ್ಧಾರಗಳನ್ನು ಕೈಗೊಳ್ಳಬೇಕು. ಇಲ್ಲವೇ ಅಧಿಕಾರ ತ್ಯಜಿಸಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಮಹ್ಮದ್‌ ರಫೀಕ್ ಆಗ್ರಹಿಸಿದರು.

ADVERTISEMENT

‘ನೋಟು ರದ್ದತಿ ಎಂಬುದು ಸರ್ಕಾರವೇ ದೇಶದಲ್ಲಿ ಸೃಷ್ಟಿಸಿದ ವಿಕೋಪದಂತೆ ಜನರ ಬದುಕಿನ ಮೇಲೆ ಮತ್ತು ಆರ್ಥಿಕತೆಯ ಮೇಲೆ ಮಾರಕ ದುಷ್ಪರಿಣಾಮ ಬೀರಿದೆ’ ಎಂದು ದೂರಿದರು.

ಶಾಸಕ ಅನಿಲ್‌ ಲಾಡ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ, ಚಂದ್ರಿಕಾ ಪರಮೇಶ್ವರಿ, ಕಾರ್ಯದರ್ಶಿ ಗುರುಪ್ರಸಾದ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಹನುಮ ಕಿಶೋರ್‌, ಮುಖಂಡರಾದ ನಾಸಿರ್‌ಹುಸೇನ್‌ ವಿ.ಕೆ.ಬಸಪ್ಪ, ಅರುಣಕುಮಾರ್‌, ಹೊನ್ನೂರಪ್ಪ, ರಾಮಪ್ರಸಾದ್‌, ಕಲ್ಲುಕಂಬ ಪಂಪಾಪತಿ, ರವಿಕುಮಾರ್‌, ಅಯಾಜ್‌ ಅಹ್ಮದ್‌, ಬಿ.ಎಂ.ಪಾಟೀಲ್‌, ವೆಂಕಟೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.