ADVERTISEMENT

ಪಾರಂಪರಿಕ ಊಟ ಸವಿದ ವಿದೇಶಿಗರು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2017, 5:59 IST
Last Updated 5 ನವೆಂಬರ್ 2017, 5:59 IST
ಹಂಪಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಆಹಾರ ಪ್ರದರ್ಶನದಲ್ಲಿ ಶನಿವಾರ ಪಾರಂಪರಿಕ ಊಟದ ಮನೆಯಲ್ಲಿ ವಿದೇಶಿಗರು ಉತ್ತರ ಕರ್ನಾಟಕದ ಜೋಳದ ರೊಟ್ಟಿ ಸವಿದರು
ಹಂಪಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಆಹಾರ ಪ್ರದರ್ಶನದಲ್ಲಿ ಶನಿವಾರ ಪಾರಂಪರಿಕ ಊಟದ ಮನೆಯಲ್ಲಿ ವಿದೇಶಿಗರು ಉತ್ತರ ಕರ್ನಾಟಕದ ಜೋಳದ ರೊಟ್ಟಿ ಸವಿದರು   

ಹಂಪಿ: ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಎಣ್ಣೆ ಹೋಳಿಗೆ, ಚಪಾತಿ, ಎಣ್ಣೆ ಬದನೆ ಕಾಯಿ ಪಲ್ಯ, ಸೌತೆಕಾಯಿ ಚಟ್ನಿ, ಶೇಂಗಾ ಚಟ್ನಿ ಪುಡಿ ಸೇರಿ ನಾಲ್ಕೈದು ಚಟ್ನಿ ಪುಡಿ ಜೊತೆಗೆ ಚಿತ್ರಾನ್ನ, ಪಾಲಾವ್‌, ರಸಂ, ಸಾಂಬಾರು, ಮಂಡಕ್ಕಿ ಮಿರ್ಚಿ, ಗಿರಿಮಿಟ್‌...

ಇವು ಹಂಪಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಆಹಾರ ಪ್ರದರ್ಶನದಲ್ಲಿ ಶನಿವಾರ ಕಂಡು ಬಂದ ಹತ್ತು ಹಲವು ಭಕ್ಷ್ಯ ಭೋಜನಗಳು ನೋಡುಗರ ಬಾಯಲ್ಲಿ ನೀರುರಿಸುತ್ತಿತ್ತು. ಊಟದ ಜತೆಗೆ ಜಂಕ್‌ಫುಡ್‌ಗಳ 50ಕ್ಕೂ ಹೆಚ್ಚು ಮಳಿಗೆಗಳಲ್ಲಿ ಜನರು ತಮಗೆ ಬೇಕಾದ ಆಹಾರ ಸವಿದು ಖುಷಿ ಪಟ್ಟರು.

ಮಧ್ಯಾಹ್ನದ ಬಿಸಿಲು ಏರುತ್ತಿದ್ದಂತೆ ಹೊಟ್ಟೆ ಚುರುಗುಟ್ಟಿ, ಆಹಾರ ಮಳಿಗೆಗಳತ್ತ ಪ್ರವಾಸಿಗರು ಮುಖ ಮಾಡಿದರು. ಇನ್ನು ಪಾರಂಪರಿಕ ಊಟದ ಮನೆಯಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಹಾಗೂ ಹೋಳಿಗೆಯನ್ನು ಸವಿದು ಸಂಭ್ರಮಿಸಿದರು.

ADVERTISEMENT

ಜೋಳದ ರೊಟ್ಟಿ, ಹೋಳಿಗೆ, ಚಟ್ನಿ ಪುಡಿಗಳು, ಎರಡ್ಮೂರು ತರಹದ ಪಲ್ಯಗಳು, ಚಟ್ನಿಗಳು, ರಸಂ, ಸಾಂಬಾರು, ಮಜ್ಜಿಗೆ , ಮೊಸರು ಸವಿದರು. ವಿದೇಶಿಗರು ಸಹ ಉತ್ತರ ಕರ್ನಾಟಕದ ಊಟಕ್ಕೆ ಮನಸೋತು ಖುಷಿಯಿಂದ ಊಟ ಸವಿದರು.

‘ಭಾರತೀಯ ಆಹಾರ ಪದ್ಧತಿ ವೈವಿಧ್ಯತೆಯಿಂದ ಕೂಡಿದ್ದು, ಹೆಚ್ಚಾಗಿ ಸಸ್ಯಹಾರಿ ಬಳಸುವುದರಿಂದ ತಿನ್ನಲು ಖುಷಿ ನೀಡುತ್ತದೆ. ಆದರೆ ಬೇರೆ ಪ್ರದೇಶಕ್ಕೆ ಹೋಗುತ್ತಿದ್ದಂತೆ ಆಯಾ ಪ್ರದೇಶದ ಆಹಾರ ಪದ್ಧತಿ ಕಂಡು ಬರುತ್ತದೆ. ಆದರೆ ಇಲ್ಲಿನ ಊಟ ಮರೆಯಲಾಗದು ಎಂದು ಪಾರಂಪರಿಕ ಊಟ ಸವಿದ ಜರ್ಮನಿಯ ಲಾರ್ಸ್‌, ಆಸ್ಟ್ರಿಯಾದ ಫೌಲ್‌ ಹಾಗೂ ಇಂಗ್ಲೆಂಡ್‌ನ ಜೆನ್‌ ಅವರು ಪ್ರಜಾವಾಣಿ ಜತೆ ಸಂತಸ ಹಂಚಿಕೊಂಡರು.

ಇನ್ನು ಗ್ರಾಹಕರು ತಮ್ಮ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ಮಂಡಕ್ಕಿ ಮಿರ್ಚಿ, ಪ್ಲೇಟ್‌ ಊಟ, ಚಪಾತಿ, ಪೂರಿ, ಮಂಡಕ್ಕಿ ಒಗ್ಗರಣೆ, ಚುರುಮುರಿ, ಗಿರ್ಮಿಟ್‌, ದಾವಣಗೆರೆ ಬೆಣ್ಣೆ ದೋಸೆ ಸೇರಿ ವಿವಿಧ ಆಹಾರ ಪದಾರ್ಥಗಳಿದ್ದ ಮಳಿಗೆಗಳಲ್ಲಿ ಕಂಡು ಬಂದರು. ನ್ಯೂಡಲ್ಸ್‌, ಫ್ರೈಡ್‌ರೈಸ್‌, ಜೀರಾ ರೈಸ್‌, ಗೋಬಿ, ಗೋಬಿ ರೈಸ್‌ ಸೇವಿಸಲು ಯುವಕರು, ಯುವತಿಯರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.