ADVERTISEMENT

ಪಿಡಿಒಗಳು ಕೇಂದ್ರಸ್ಥಾ ನದಲ್ಲಿ ಇರಲು ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:21 IST
Last Updated 25 ಏಪ್ರಿಲ್ 2017, 6:21 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಕುಡಿ­ಯುವ ನೀರಿನ ಸಮಸ್ಯೆ ತೀವ್ರ­ಗೊಂಡಿದ್ದು ಗ್ರಾಮ ಪಂಚಾಯಿತಿ ಅಭಿ­ವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನ­ದ­ಲ್ಲಿದ್ದು ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಸ್‌.ಭೀಮಾನಾಯ್ಕ ಸೂಚಿಸಿದರು.ತಾಲ್ಲೂಕು ಪಂಚಾಯಿತಿ ಸಭಾಂಗ­ಣ­ದಲ್ಲಿ ಸೋಮವಾರ ನಡೆದ ತ್ರೈಮಾ­ಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಿಗಳು, ಜನಪ್ರತಿನಿಧಿಗಳು ರಾಜಕೀಯ ಮಾಡದೆ ಕುಡಿಯುವ ನೀರಿಗಾಗಿ 14ನೇ ಹಣಕಾಸು ಯೋಜ­ನೆಯ ಅನುದಾನವನ್ನು ಬಳಕೆ ಮಾಡ­ಬೇಕು ಎಂದರು. ನಂದಿಪುರದಲ್ಲಿ ಕೊಳ­ವೆ­ಬಾವಿಗಳು ವಿಫಲವಾಗಿದ್ದು, ಖಾಸಗಿ ಬಾವಿಗಳು ಲಭ್ಯವಿಲ್ಲ, ಯಡ್ರಮ್ಮನಹಳ್ಳಿ­ಯಿಂದ ಪೈಪ್‌ಲೈನ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಪ್ರಭಾಕರ ಶೆಟ್ಟಿ ಹೇಳಿದರು. ಟ್ಯಾಂಕರ್‌ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಒದಗಿಸುವಂತೆ ಇಒ ಬಿ.ಮಲ್ಲಾನಾಯ್ಕ ಪಿಡಿಒ ಮಂಜುನಾಥಗೆ ಸೂಚಿಸಿದರು.

ಮೊಬೈಲ್‌ ತಪಾಸಣೆಗೆ ಸೂಚನೆ ಸಭೆಯಲ್ಲಿ ಶಾಸಕರು ತಾಲ್ಲೂಕಿನ 22ಗ್ರಾಮ ಪಂಚಾಯಿತಿಗಳ ಎಲ್ಲ ಪಿಡಿಒಗಳ ಮೊಬೈಲ್‌ಗಳನ್ನು ಪಡೆದು ಒಂದೆಡೆ ಸಂಗ್ರಹಿಸಿದರು. ಪಿಡಿಒಗಳು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಇಲಾಖೆ ಒದಗಿಸಿದ  ಸಿಮ್‌ಗಳಿಗೆ ಕರೆ ಮಾಡಿ ಮೊಬೈಲ್ ಕರೆ ಸ್ವೀಕರಿಸುತ್ತಿರುವ ಕುರಿತು ತಪಾಸಣೆ ನಡೆಸುವಂತೆ ಇಒ ಮಲ್ಲಾನಾಯ್ಕಗೆ ಸೂಚಿಸಿದರು.

ADVERTISEMENT

₹ 17.50ಕೋಟಿ ಅನುದಾನ  ಹೈದರಾಬಾದ್ ಕರ್ನಾಟಕ 371ಜೆ ವಿಶೇಷ ಅನುದಾನದಲ್ಲಿ 2017–18ನೇ ಸಾಲಿನಲ್ಲಿ ಉದ್ಯಾನವನ, ಸಿಮೆಂಟ್ ಕಾಂಕ್ರಿಟ್‌ ರಸ್ತೆ, ಬಸ್‌ ನಿಲ್ದಾಣ, ಸ್ಮಾರ್ಟ್ ಕ್ಲಾಸ್‌ ಕೊಠಡಿಗಳ  ಅಭಿವೃದ್ಧಿ ಕಾಮ­ಗಾರಿಗಳನ್ನು ಕೈಗೆತ್ತಿಕೊಳ್ಳಲಾಗು­ವುದು. ₹ 17.50 ಕೋಟಿ ವಿಶೇಷ ಅನುದಾನ­ದಡಿ ಒಟ್ಟು ₹ 35.85 ಲಕ್ಷ ಅಂದಾಜು ಮೊತ್ತದಲ್ಲಿ ತಾಲ್ಲೂಕಿನ ಮಾಲವಿ ಗ್ರಾಮದಲ್ಲಿ ಉದ್ಯಾನವನ ನಿರ್ಮಿಸಲಾ­ಗುವುದು. ಬ್ಯಾಸಿಗಿದೇರಿ, ದಶಮಾಪುರ, ರಾಯರಾಳು ತಾಂಡಾ ಸೇರಿ 34 ಗ್ರಾಮಗಳಲ್ಲಿ ತಲಾ ₹ 8ಲಕ್ಷ ಅಂದಾಜು ಮೊತ್ತದಲ್ಲಿ ಶಾಲಾ ಕೊಠಡಿ ನಿರ್ಮಿಸ­ಲಾಗುವುದು. ತಲಾ ₹ 4.5ಲಕ್ಷ ಅಂದಾಜು ಮೊತ್ತದ 13ಬಸ್‌ನಿಲ್ದಾಣ ನಿರ್ಮಿಸಲಾಗುವುದು. ರಾಯರಾಳು ತಾಂಡಾ, ಅಂಬಳಿ, ಮಾಲವಿ ಗ್ರಾಮಗಳ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಆರಂಭಿಸ­ಲಾಗು­ವುದು. ಕೋಗಳಿ ಮತ್ತು ಹನಸಿ ಆಸ್ಪತ್ರೆಗಳಿಗೆ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕುಡಿಯುವ ನೀರು ಒದಗಿಸುತ್ತಿರುವ ಖಾಸಗಿ ಕೊಳವೆಬಾವಿಗಳ ರೈತರಿಗೆ ಬಾಡಿಗೆ ಮೊತ್ತವನ್ನು ₹ 9ರಿಂದ ₹ 15ಸಾವಿರ ಗಳಿಗೆ ಹೆಚ್ಚಿಸುವಂತೆ ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಕ್ಕಿ ತೋಟೇಶ್ ಒತ್ತಾಯಿಸಿದರು. ಈ ಕುರಿತು ಜಿಲ್ಲಾಧಿಕಾರಿ ಗಮನಸೆಳೆಯಲಾಗಿದೆ, ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆ­ಯಲ್ಲೂ ಚರ್ಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಆನಂದ ತಿಳಿಸಿದರು. ಸಭೆಗೆ ಗೈರು ಹಾಜರಿ­ಯಾಗಿರುವ ಸಣ್ಣ ನೀರಾವರಿ ಇಲಾಖೆಯ ಎಇಇಗೆ ಕಾರಣ ಕೇಳಿ ನೋಟಿಸು ಜಾರಿ ಮಾಡುವಂತೆ ಇಒಗೆ ಶಾಸಕ ಆದೇಶಿಸಿದರು. ತಂಬ್ರಹಳ್ಳಿಯಲ್ಲಿ ಶುದ್ಧ ಕುಡಿವ ನೀರಿನ ಘಟಕಕ್ಕೆ ಯಂತ್ರ ಅಳವಡಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಮ್ಮ ಶೇಖರಪ್ಪ ಒತ್ತಾಯಿಸಿದರು.

ತಾಲ್ಲೂಕಿನಲ್ಲಿರುವ 213 ವಿಫಲ ಕೊಳವೆಬಾವಿ ಮುಚ್ಚಲು ಸಮಿತಿ ರಚಿಸಿ, ಕ್ರಮ ಕೈಗೊಂಡ ಕುರಿತು ಸಮಗ್ರ ಮಾಹಿತಿ ಸಲ್ಲಿಸುವಂತೆ ಶಾಸಕರು ಅಧಿ­ಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಆನಂದಪ್ಪ ನಾಯಕ, ಅಧ್ಯಕ್ಷೆ ಕೆ.ನಾಗಮ್ಮ, ಉಪಾಧ್ಯಕ್ಷೆ ಸುಶೀಲಾ, ನಾಮ­ನಿರ್ದೇಶಿತ ಸದಸ್ಯರಾದ ರವೀಂದ್ರಗೌಡ, ಹನುಮಂತಪ್ಪ, ಗೋಣಿ­ಬಸಪ್ಪ, ಹುಸೇನ್‌ ಸಾಹೇಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.