ADVERTISEMENT

ಪೂರ್ವಭಾವಿ ಸಭೆ ಏ. 10ರಂದು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 6:45 IST
Last Updated 24 ಮಾರ್ಚ್ 2017, 6:45 IST

ಬಳ್ಳಾರಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ನಿಗಮಗಳ ಕಾರ್ಮಿಕರು ಹಾಗೂ ಸಿಬ್ಬಂದಿಯ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರವು ಹಿಂಜರಿದಿದೆ. ಇನ್ನೂ ವಿಳಂಬ ಮಾಡಿದರೆ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್  ಅಂಡ್ ವರ್ಕರ್ಸ್‌ ಫೆಡರೇಷನ್ ರಾಜ್ಯ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್ ತಿಳಿಸಿದರು.

ಪ್ರತಿಭಟನೆ ಕುರಿತು ಚರ್ಚಿಸಲು ಏಪ್ರಿಲ್ ಹತ್ತರಂದು ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ. ರೂಪು ರೇಷೆಗಳ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು  ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾರಿಗೆ ಸಂಸ್ಥೆಯ ಶ್ರೇಯೋಭಿವೃದ್ಧಿಗೆ 1.20 ಲಕ್ಷಕ್ಕೂ ಹೆಚ್ಚು ನೌಕರರು ರಾಜ್ಯವ್ಯಾಪಿ ದುಡಿಯುತ್ತಿದ್ದಾರೆ. ಬೇಡಿಕೆ ಈಡೇರಿಸುವಂತೆ ಕೋರಿ ಕಳೆದ ವರ್ಷ ಜುಲೈ 25 ರಿಂದ 27ರವರೆಗೆ  ಮುಷ್ಕರವನ್ನು ಹಮ್ಮಿಕೊಂಡ ವೇಳೆ, ಮೂಲ ವೇತನವನ್ನು ಶೇ 12.5ರಷ್ಟು ಹೆಚ್ಚಳ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದರು ಎಂದು ಹೇಳಿದರು.

2016ರ ಜನವರಿ ಒಂದರಿಂದ ಮೂಲ ವೇತನ ಹೆಚ್ಚಳ ಅನ್ವಯವಾಗಲಿದೆ ಎಂದು ತಿಳಿಸಿದ್ದರು. ಆದರೆ ಆ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮೂಲ ವೇತನದ ಬಾಕಿ ಮೊತ್ತವನ್ನೇ ಇದುವರೆಗೂ ಪಾವತಿಸಿಲ್ಲ ಎಂದು ಅವರು ದೂರಿದರು.

ನಿಗಮಗಳಲ್ಲಿ ಸ್ವಯಂ ನಿವೃತ್ತಿಯಾದ ನೌಕರರಿಗೆ, ಸೇವಾ ಅವಧಿಯಲ್ಲಿ ಮೃತಪಟ್ಟ ನೌಕರರ ಕುಟುಂಬ ಸದಸ್ಯರಿಗೆ ನೀಡಬೇಕಾದ ಉಪಧನ, ಇತರೆ ಬೇಡಿಕೆಯನ್ನು ಇತ್ಯರ್ಥಪಡಿಸಲು ಸರ್ಕಾರ ಮುಂದಾಗಿಲ್ಲ. ಮೇಲಧಿಕಾರಿಗಳಿಂದ ನೌಕರರಿಗೆ ಆಗುತ್ತಿರುವ ಮಾನಸಿಕ ಹಿಂಸೆ, ಕಿರುಕುಳ ಹಾಗೂ ದಬ್ಬಾಳಿಕೆಯನ್ನು ತಡೆಯುವ ಪ್ರಯತ್ನವೂ ನಡೆದಿಲ್ಲ ಎಂದು ಆರೋಪಿಸಿದರು.

1991ರ ನಿಯಮದ ಪ್ರಕಾರ ನಾಲ್ಕು ನಿಗಮಗಳ ಚುನಾವಣೆ ಚುನಾವಣೆ ಪ್ರಕ್ರಿಯೆ ನಡೆಸಬೇಕೆಂಬ ಆಗ್ರಹಕ್ಕೂ ಸರ್ಕಾರ ಸ್ಪಂದಿಸಿಲ್ಲ ಎಂದು                 ದೂರಿದರು. ರಾಜ್ಯ ಸರ್ಕಾರ ಮಂಡಿಸಿರುವ 2017–18ನೇ ಸಾಲಿನ ಬಜೆಟ್‌ ನಿರಾಶದಾಯಕವಾಗಿದೆ ಎಂದರು.

ಬೆಂಬಲ
ಭದ್ರಾವತಿಯಲ್ಲಿ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆಯ ಅಂದಾಜು 3 ಸಾವಿರ ಕಾರ್ಮಿಕರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕೈಗೊಂಡಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲಾಗುವುದು ಎಂದರು.

ಫೆಡರೇಷನ್‌ನ ಪದಾಧಿಕಾರಿಗಳಾದ ಟಿ.ಎಲ್‌.ರಾಜಗೋಪಾಲ, ಜಿ.ಟಿ. ರಂಗೇಗೌಡ, ಜಿ.ಶ್ರೀನಿವಾಸ, ಸಿದ್ಧಪ್ಪ ಪಾಲ್ಕಿ, ಕಾಂತಯ್ಯ ಗುತ್ತರಗಿ ಮಠ, ಟಿ.ಚೆನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.