ADVERTISEMENT

ಬರ ನಿರ್ವಹಣೆಗೆ ₹15 ಕೋಟಿ ಪ್ರಸ್ತಾವ

ಬಳ್ಳಾರಿ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ: ಸಿಇಒ ಡಾ.ಕೆ.ವಿ.ರಾಜೇಂದ್ರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 9:03 IST
Last Updated 23 ಮಾರ್ಚ್ 2018, 9:03 IST

ಬಳ್ಳಾರಿ: ‘ಜಿಲ್ಲೆಯಲ್ಲಿ ಬರಗಾಲ ನಿರ್ವಹಣೆಗೆಂದು ₹15 ಕೋಟಿ ವೆಚ್ಚದ ಕ್ರಿಯಾಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೀರು ಪೂರೈಸುತ್ತಿರುವ ಕೊಳವೆಬಾವಿಗಳ ಮಾಲೀಕರಿಗೆ ಮಾಸಿಕ ಬಾಡಿಗೆಯನ್ನು ₹10 ಸಾವಿರದಿಂದ ₹15 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು.

ADVERTISEMENT

‘ಬೇಸಿಗೆ ಆರಂಭವಾಗಿದ್ದು, ನೀರಿನ ಕೊರತೆಯ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಜು.15ರವರೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು’ ಎಂದರು.

ದುರಸ್ತಿ: ‘ಜಿಲ್ಲೆಯಲ್ಲಿ ಸದ್ಯ ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಾ.25ರ ಒಳಗೆ ದುರಸ್ತಿ ಮಾಡಿಸದಿದ್ದರೆ ಸಂಬಂಧಿಸಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಲಾಗುವುದು. ಜೊತೆಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಘಟಕಗಳು ಕೆಟ್ಟು ನಿಂತ 24 ಗಂಟೆಯೊಳಗೆ ದುರಸ್ತಿ ಮಾಡಬೇಕು. ಅದರ ಬಿಲ್‌ ಅನ್ನು ಜಿಲ್ಲಾ ಪಂಚಾಯ್ತಿಗೆ ಸಲ್ಲಿಸಬೇಕು. ಕುಡಿಯುವ ನೀರಿನ ಉದ್ದೇಶಕ್ಕೆ ದುಡ್ಡು ಖರ್ಚು ಮಾಡದೇ ಇರುವುದು ಸರಿಯಲ್ಲ’ ಎಂದರು.

ಕೆರೆಗಳ ಹೂಳು ತೆರವು ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆರೆ ಬಳಕೆದಾರರ ಸಂಘ ರಚಿಸಬೇಕು.
ಗಾದಿಗನೂರಿನಲ್ಲಿ ರಸ್ತೆ ವಿಸ್ತರಣೆಯಿಂದ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳು ನೆಲಸಮಗೊಳ್ಳುತ್ತಿದ್ದು, ಪರ್ಯಾಯ ಜಾಗ ಗುರುತಿಸುವಂತೆ ಸೂಚಿಸಿದರು.

2018–19ನೇ ಸಾಲಿನಲ್ಲಿ ಜಿಲ್ಲೆಯ 200 ಗ್ರಾಮ ಪಂಚಾಯ್ತಿಗಳಲ್ಲಿ ಉದ್ಯೋಗಖಾತ್ರಿ ಅಡಿ ಕಾರ್ಮಿಕರಿಗೆ ವಿತರಿಸಬೇಕಾದ ಅನುದಾನಕ್ಕೆ ಸಂಬಂಧಿಸಿದ ಮುಂಗಡ ಆಯ–ವ್ಯಯಕ್ಕೂ ಸಭೆ ಅನುಮೋದನೆ ನೀಡಿತು.

‘ಈ ಅವಧಿಯಲ್ಲಿ 45.95 ಲಕ್ಷ ಮಾನವ ದಿನಗಳನ್ನು ಸೃಜಿಸುವ ಗುರಿ ಇದೆ, ಕಾರ್ಮಿಕರಿಂದ ಬೇಡಿಕೆ ಬಂದಲ್ಲಿ ಹೆಚ್ಚಿಸಲಾಗುವುದು’ ಎಂದರು.

ಅಧ್ಯಕ್ಷೆ ಸಿ.ಭಾರತಿ ರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಇದ್ದರು.
**
‘ಭಯ ಬಿತ್ತುವ ಖಾಸಗಿ ಆಸ್ಪತ್ರೆಗಳು’
ಬಳ್ಳಾರಿ: ‘ಡೆಂಗಿ ರೋಗದ ಕುರಿತು ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಜನರಲ್ಲಿ ಭಯ ಹುಟ್ಟಿಸಿ ಶುಲ್ಕದ ರೂಪದಲ್ಲಿ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿವೆ’ ಎಂದು ಡಾ.ರಾಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಡೆಂಗಿ ಪ್ರಕರಣಗಳು ಕಂಡುಬಂದ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿಯನ್ನು ನೀಡಬೇಕು. ನೀಡದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸಿರಿಗೇರಿಯಲ್ಲಿ ಡೆಂಗಿಯಿಂದ ಒಬ್ಬರು ಸಾವನ್ನಪ್ಪಿದ್ದಾರೆ’ ಎಂಬ ಸದಸ್ಯರೊಬ್ಬರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.