ADVERTISEMENT

ಭರ್ಜರಿ ಮಳೆ: ಚೆಕ್‌ ಡ್ಯಾಂ, ಕೃಷಿ ಹೊಂಡ ಭರ್ತಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:20 IST
Last Updated 6 ಸೆಪ್ಟೆಂಬರ್ 2017, 5:20 IST
ಭಾರಿ ಮಳೆಯಿಂದ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ತಾರಾನಗರದಲ್ಲಿ ಮಂಗಳವಾರ ರಸ್ತೆ ಜಲಾವೃತವಾಗಿತ್ತು
ಭಾರಿ ಮಳೆಯಿಂದ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ತಾರಾನಗರದಲ್ಲಿ ಮಂಗಳವಾರ ರಸ್ತೆ ಜಲಾವೃತವಾಗಿತ್ತು   

ಬಳ್ಳಾರಿ: ಜಿಲ್ಲೆಯಾದ್ಯಂತ ಮಂಗಳವಾರ ಬೆಳಗಿನ ಜಾವದವರೆಗೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ, ಮಂಗಳವಾರ ಬೆಳಿಗ್ಗೆ ಸುರಿದ ಮಳೆಗೆ ಚೆಕ್‌ಡ್ಯಾಂಗಳು ತುಂಬಿದವು. ಜಮೀನುಗಳಲ್ಲಿ ನೀರು ಹರಿಯಿತು.

ಬಳ್ಳಾರಿ ನಗರದಲ್ಲಿ ಬೆಳಗಿನ ಜಾವ ಪ್ರಾರಂಭವಾದ ಮಳೆ ಬಿಟ್ಟು ಬಿಡದೆ 7.30 ವರೆಗೆ ಸುರಿಯಿತು. ಇದರಿಂದ ಕ್ರೀಡಾಂಗಣ ರಸ್ತೆಯ ಕೆಳ ಸೇತುವೆಯಲ್ಲಿ ಮಳೆನೀರು ಸಂಗ್ರಹವಾಗಿ, ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಎಸ್‌.ಎನ್‌. ಪೇಟೆಯ ವೆಂಕಟೇಶ್ವರ ದೇವಸ್ಥಾನ ಮುಂದೆ ಮಳೆ ನೀರು ಸಂಗ್ರಹವಾಗಿತ್ತು. ಭಕ್ತರು ದೇವಸ್ಥಾನಕ್ಕೆ ತೆರಳಲು ಸಮಸ್ಯೆಯಾಯಿತು.

ಸರಳಾ ದೇವಿ ಸತೀಶ್‌ಚಂದ್ರ ಅಗರ ವಾಲ್ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಆವರಣದಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಮಳೆಯ ನೀರಿನಲ್ಲಿ ವಿದ್ಯಾರ್ಥಿನಿಯರು ಕಾಗದ ದೋಣಿ ಹರಿಬಿಟ್ಟು ಖುಷಿಪಟ್ಟರು.

ADVERTISEMENT

ಸತ್ಯನಾರಾಯಣ ಕೆಳ ಸೇತುವೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹ ವಾಗಿತ್ತು. ಅಲ್ಲದೇ, ಕಪ್ಪಗಲ್ ರಸ್ತೆಯಲ್ಲಿ ಮಳೆಯಿಂದ ಚರಂಡಿ ತುಂಬಿ ರಸ್ತೆಗೆ ನೀರು ಹರಿದವು. ಜನರು ಅನಿವಾರ್ಯ ವಾಗಿ ಮಳೆ ನೀರಿನಲ್ಲಿ ಸಂಚರಿಸ ಬೇಕಾಯಿತು.ಕಳೆದ ಎರಡು ದಿನಗಳಿಂದ ಬಿಸಿಲಿನ ಪ್ರಮಾಣ ಅಧಿಕವಾಗಿತ್ತು. ಮಳೆ ಬಂದಿದ್ದರಿಂದ ವಾತಾವರಣ ತಂಪಾಗಿ, ಜನರು ನಿಟ್ಟುಸಿರು ಬಿಟ್ಟರು.

ಹೊಸಪೇಟೆಯಲ್ಲಿ ಉತ್ತಮ ಮಳೆ
ಹೊಸಪೇಟೆ: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಆರು ಗಂಟೆಗೆ ಶುರುವಾದ ಮಳೆ 11 ಗಂಟೆಯವರೆಗೆ ಎಡಬಿಡದೇ ಸುರಿದಿದೆ. ನಿರಂತರವಾಗಿ ಮಳೆ ಬಿದ್ದ ಕಾರಣ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. ನಗರದ ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಅಮರಾವತಿ ಯಲ್ಲಿ ರಸ್ತೆಗಳು ಕೊಚ್ಚೆಯಾಗಿ ಮಾರ್ಪಟ್ಟಿದ್ದವು.

ಬೆಳ್ಳಂಬೆಳಿಗ್ಗೆ ಮಳೆ ಬಂದ ಕಾರಣ ಶಾಲಾ–ಕಾಲೇಜು, ಕಚೇರಿ ಹಾಗೂ ದೈನಂದಿನ ಕೆಲಸಗಳಿಗೆ ಹೋಗುವವರು ತೊಂದರೆ ಎದುರಿಸಬೇಕಾಯಿತು. ಕೆಲ ವರು ಮಳೆಯಲ್ಲೇ ನೆನೆದುಕೊಂಡು ಹೆಜ್ಜೆ ಹಾಕಿದರೆ, ಕೆಲವು ಜನ ಕೊಡೆಗಳನ್ನು ಆಶ್ರಯಿಸಿಕೊಂಡು ನಡೆದಾಡು ತ್ತಿರುವುದು ಕಂಡು ಬಂತು.

ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ಹೊಸೂರು, ನಲ್ಲಾಪುರ, ಚಿನ್ನಾಪುರ, ಮಲಪನಗುಡಿ, ಹೊಸ ಮಲಪನಗುಡಿ, ಕಾಕುಬಾಳು, ಪಾಪಿ ನಾಯಕನಹಳ್ಳಿ, ಧರ್ಮಸಾಗರ, ಬೈಲುವ ದ್ದಿಗೇರಿ, ವೆಂಕಟಾಪುರ, ಮರಿಯಮ್ಮನ ಹಳ್ಳಿ, ಬಸವನದುರ್ಗ, ನಾಗೇನಹಳ್ಳಿ ಯಲ್ಲೂ ಉತ್ತಮ ಮಳೆಯಾಗಿರುವುದು ವರದಿಯಾಗಿದೆ. ಸೋಮವಾರ ತಡ ರಾತ್ರಿ ಕೂಡ ಜಿಟಿಜಿಟಿ ಮಳೆಯಾಗಿತ್ತು.

ಸತತ 3 ಗಂಟೆ ಮಳೆ
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮೋರಿಗೇರಿ, ಗದ್ದಿಕೇರಿ, ಬನ್ನಿಕಲ್ಲು, ತಂಬ್ರಹಳ್ಳಿ, ಮಗಿಮಾವಿನಹಳ್ಳಿ, ಬ್ಯಾಸಿಗಿದೇರಿ, ಚಿಲಗೋಡು, ಹಂಪಾ ಪಟ್ಟಣ, ನಂದಿಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಬೆಳಗಿನ ಜಾವದಿಂದ ಸತತ ಮೂರು ಗಂಟೆಗಳ ಕಾಲ ಉತ್ತಮ ಮಳೆ ಸುರಿಯಿತು. ಇದರಿಂದಾಗಿ ಹತ್ತಾರು ಕೃಷಿಹೊಂಡ ಗಳು, ಚೆಕ್‌ ಡ್ಯಾಂಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇತ್ತೀಚೆಗೆ ಬೊಂಗಾ ಬಿದ್ದು ಬರಿದಾಗಿದ್ದ ಬನ್ನಿಕಲ್ಲು ಕೆರೆಗೆ ನೀರು ಹರಿದು ಬರುತ್ತಿದೆ.

ತಂಬ್ರಹಳ್ಳಿಯಲ್ಲಿ ಗರಿಷ್ಠ 5.3ಸೆಂಟಿ ಮೀಟರ್‌ ಮಳೆಯಾಗಿದೆ, ಕೋಗಳಿಯಲ್ಲಿ 10 ಮಿಲಿ ಮೀಟರ್‌, ಹಂಪಸಾಗರದಲ್ಲಿ 12.6 ಮಿಲಿ ಮೀಟರ್‌ ಮತ್ತು ಪಟ್ಟಣ ದಲ್ಲಿ 4.2ಸೆಂಟಿ ಮೀಟರ್ ಮಳೆಯಾಗಿ ರುವ ಕುರಿತಂತೆ ಮಳೆ ಮಾಪನ ಕೇಂದ್ರದಲ್ಲಿ ದಾಖಲಾಗಿದೆ.

ಬೆಳೆಗೆ ಮರುಜೀವ
ಕೂಡ್ಲಿಗಿ: ತಾಲ್ಲೂಕಿನಾದ್ಯಂತ ಮಂಗಳ ವಾರ ಬೆಳಿಗ್ಗೆ ಧಾರಾಕಾರ ಮಳೆಯಾಗಿದೆ. ಮಳೆ ಇಲ್ಲದೇ ರೈತರು ಬೆಳೆದಿದ್ದ ಮೆಕ್ಕೆ ಜೋಳ, ರಾಗಿ, ಶೇಂಗಾ ಬೆಳೆಗಳು ಬಾಡಲಾರಂಬಿಸಿದ್ದವು. ಮಂಗಳವಾರ ಸುರಿದ ಮಳೆಯಿಂದ ಬೆಳೆಗಳಿಗೆ ಮರು ಜೀವ ಬಂದಂತಾಗಿದೆ. ರೈತರ ಮೊಗದಲ್ಲಿ ನಗೆ ಮೂಡಿಸಿದೆ.

ತಾಲ್ಲೂಕಿನಲ್ಲಿ ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ ತಿಳಿಸಿದರು. ರಸ್ತೆಯಲ್ಲಿಯೇ ಹರಿದ ನೀರು: ಬೆಳಿಗ್ಗೆ ಸುರಿದ ಮಳೆಯಿಂದ ಕೂಡ್ಲಿಗಿ ಪಟ್ಟಣ ದಲ್ಲಿನ ಮುಖ್ಯ ರಸ್ತೆಯಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಕಂಡು ಬಂತು.

ಪಟ್ಟಣದ ಅಂಬೇಡ್ಕರ್ ವೃತ್ತ, ಪಾದಗಟ್ಟೆ, ಮದಕರಿ ವೃತ್ತದಿಂದ ಹಿಡಿದು ಕೊಟ್ಟೂರು ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 50ರವರೆಗೂ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ ಮಳೆ ನೀರು ಚರಂಡಿ ಸೇರಲು ಎಲ್ಲಿಯೂ ಅವಕಾಶವಿಲ್ಲದೆ ರಸ್ತೆಯಲ್ಲಿಯೇ ಹರಿಯಿತು. ವಾಹನ ಸವಾರರು ಪರದಾಡಿದರು.

ಶಾಲೆಗಳಿಗೆ ರಜೆ
ಪಟ್ಟಣದಲ್ಲಿ ಬೆಳಗಿನ ಜಾವದಿಂದಲೇ ಸತತ ಮೂರು ಗಂಟೆಗಳ ಕಾಲ ಮಳೆ ಸುರಿದ ಹಿನ್ನೆಲೆಯಲ್ಲಿ ಶಾಲೆಗಳಿಗೆ ವಿದ್ಯಾರ್ಥಿಗಳು ತೆರಳಲು ಅಡಚಣೆ ಉಂಟಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಪಾರಿ ಬಸವರಾಜ ಅವರಿಂದ ಅನುಮತಿ ಪಡೆದ ಶಾಲೆಯ ಆಡಳಿತ ಮಂಡಳಿ ಅಧಿಕಾರಿಗಳು ಪ್ರಸಿದ್ಧಿ ಶಾಲೆ, ರಾಷ್ಟ್ರೋತ್ಥಾನ ವಿದ್ಯಾಲಯಗಳಿಗೆ ರಜೆ ಘೋಷಿಸಿದರು. ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳು ಮನೆಗಳಿಗೆ ಹಿಂತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.