ADVERTISEMENT

ಮಾಯವಾದ ಮಳೆ; ಸಂಕಷ್ಟದಲ್ಲಿ ಅನ್ನದಾತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 10:08 IST
Last Updated 15 ಜುಲೈ 2017, 10:08 IST

ಕುರುಗೋಡು: ಮುಂಗಾರು ಮಳೆ ಕೊರತೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮಳೆಯನ್ನೇ ಆಶ್ರಯಿಸಿರುವ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈಗಾಗಲೇ ಅಲ್ಪಸ್ವಲ್ಪ ಮಳೆಗೆ ಬೆಳೆ ದಿರುವ ಬೆಳೆಗಳು ಒಣಗಲಾರಂಭಿಸಿವೆ.

ಉತ್ತಮ ಇಳುವರಿಯ ಕನಸು ಕಂಡಿದ್ದ ರೈತರ ಮೊಗದಲ್ಲಿ ಈಗ ನಿರಾಶೆಯ ಕಾರ್ಮೋಡ ಕವಿದಿದೆ. ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟದಿಂದ ನಿರ್ವಹಣಾ ವೆಚ್ಚದ ಹೊರೆ ನಿಭಾಯಿ ಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಸರಬರಾಜು ಆಗಿರುವ ಭತ್ತ, ಸೂರ್ಯ ಕಾಂತಿ, ಮೆಕ್ಕೆಜೋಳ, ತೊಗರಿ, ಸಜ್ಜೆ ಬೀಜದ ದಾಸ್ತಾನು ಮಾರಾಟವಾಗದೇ ಉಳಿದಿದೆ.

‘ಸರಿಯಾದ ಮಳೆ ಬಂದಿಲ್ಲ. ಹೊಲದಾಗ ಬೆಳೆದ ಬೆಳಿ ಒಣಗಾಕ ಕುಂತಾವ. ಅವುನ್ನ ನೋಡಿದ್ರೆ ಕರುಳು ಚುರುಕ್ ಅಂತೈತಿ. ಮಳೆದೇವ್ರು ಕಣ್ಣು ತಗಿವಲ್ಲ. ರೈತುರ್ದು ವರ್ಸಾ ಇದೇ ಗೋಳು’ ಎಂದು ಮಳೆಯಾಶ್ರಿತ ಭೂಮಿ ಯಲ್ಲಿ ತೊಗರಿ ಬಿತ್ತನೆ ಮಾಡಿರುವ ರೈತ ಬಸವರಾಜ ನೋವು ತೋಡಿಕೊಂಡರು.

ADVERTISEMENT

ಹೋಬಳಿಯಲ್ಲಿ ಒಟ್ಟು  14,855 ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, 3500 ಹೆಕ್ಟೇರ್‌ನಲ್ಲಿ ಒಣ ಬೇಸಾಯ ಮಾಡಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆ ಗುರಿ 16,656 ಹೆಕ್ಟೇರ್ ಇದ್ದು ಈವರೆಗೆ 560 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.