ADVERTISEMENT

ಮೀಟರ್‌ ಇಲ್ಲದ ದುಬಾರಿ ಆಟೊ!

ಚಾಲಕರು ಹೇಳಿದ್ದೇ ದರ: ನಿಯಂತ್ರಿಸದ ಸಾರಿಗೆ ಪ್ರಾಧಿಕಾರ, ಪ್ರಯಾಣಿಕರಿಗೆ ಇಕ್ಕಟ್ಟು

ಕೆ.ನರಸಿಂಹ ಮೂರ್ತಿ
Published 24 ಜುಲೈ 2017, 9:21 IST
Last Updated 24 ಜುಲೈ 2017, 9:21 IST
ಬಳ್ಳಾರಿಯಲ್ಲಿ ಮೀಟರ್‌ ಇಲ್ಲದ ಆಟೋರಿಕ್ಷಾದಲ್ಲಿ ಪ್ರಯಾಣಿಕರ ಸಂಚಾರ
ಬಳ್ಳಾರಿಯಲ್ಲಿ ಮೀಟರ್‌ ಇಲ್ಲದ ಆಟೋರಿಕ್ಷಾದಲ್ಲಿ ಪ್ರಯಾಣಿಕರ ಸಂಚಾರ   

ಬಳ್ಳಾರಿ: ಮೈಸೂರಿನಿಂದ ರಾತ್ರಿ ಪ್ರಯಾ ಣಿಸಿ ಬೆಳಿಗ್ಗೆ 6ರ ವೇಳೆಗೆ ನಗರದ ಬಸ್‌ ನಿಲ್ದಾಣದಲ್ಲಿ ಇಳಿದ ಖಾಸಗಿ ಸಂಸ್ಥೆ ಯೊಂದರ ಉದ್ಯೋಗಿ ಶ್ವೇತಾ ಕಪ್ಪಗಲ್ಲು ರಸ್ತೆಗೆ ತೆರಳಬೇಕಿತ್ತು. ಹತ್ತಿಸಿಕೊಳ್ಳಲು ದುಂಬಾಲು ಬಿದ್ದ ಆಟೊರಿಕ್ಷಾ ಚಾಲಕರಿಗೆ ವಿಳಾಸ ಹೇಳಿದಾಗ ಅವರು ₹100 ಕೇಳಿದರು!

ಸರಿಯಾಗಿ ಎರಡೂವರೆ ಕಿ.ಮೀ ದೂರವೂ ಅಲ್ಲದ ಪ್ರದೇಶವೊಂದಕ್ಕೆ ಕರೆದೊಯ್ಯಲು ಅಷ್ಟೊಂದು ಹಣ ಏಕೆ ಕೇಳುತ್ತೀರಿ? ಎಂಬ ಅವರ ಪ್ರಶ್ನೆಗೆ ತಕ್ಕ ಸಮಜಾಯಿಷಿ ಸಿಗಲಿಲ್ಲ. ಚೌಕಾಸಿಯೂ ನಡೆಯಲಿಲ್ಲ. ಅನಿವಾರ್ಯವಾಗಿ ಚಾಲ ಕರು ಕೇಳಿದಷ್ಟು ಹಣ ನೀಡಲೇಬೇಕಾ ಯಿತು. ನಗರದ ಗಾಂಧಿನಗರದ ನಿವಾಸಿ ನಾಗಣ್ಣ ಬೆಂಗಳೂರು ರಸ್ತೆಯಲ್ಲಿರುವ ಕೆನರಾಬ್ಯಾಂಕ್‌ ಹತ್ತಿರ ಗೆಳೆಯರೊಬ್ಬ ರನ್ನು ನೋಡುವ ಸಲುವಾಗಿ ಆಟೊ ಹತ್ತಿದರು. ಬಾಡಿಗೆ ಎಷ್ಟು? ಎಂದರೆ ಚಾಲಕ ಐವತ್ತು ರೂಪಾಯಿ ಎಂದರು! ಚೌಕಾಸಿ ಮಾಡಿದ್ದಕ್ಕೆ ಅದು ₹40ಕ್ಕೆ ಇಳಿಯಿತು.

ಹೀಗೆ, ಮೀಟರ್‌ ಅಳವಡಿಸದ ಆಟೊ ರಿಕ್ಷಾಗಳ ಸಂಚಾರದಿಂದ ಜನರಿಗೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚಾಗಿದೆ. ಜತೆಗೆ ಜೇಬಿಗೆ ಭಾರ. ದುಬಾರಿ ಬಾಡಿಗೆ ದರಕ್ಕೆ ಸಮರ್ಥನೀ ಯವಾದ ಉತ್ತರವೂ ದೊರಕುವುದಿಲ್ಲ. ಚಾಲಕರಿಂದ ಕೇಳಿ ಬರುವ ಒಂದೇ ಸಬೂಬು ಎಂದರೆ ‘ಇಂಧನ ದರ ಹೆಚ್ಚಾಗಿದೆ ಸ್ವಾಮಿ’.

ADVERTISEMENT

ಅತಾರ್ಕಿಕ ದರ: ನಗರದ ಒಳ ಪ್ರದೇಶಗಳಲ್ಲಿ ಸಂಚರಿಸಲು ಆಟೊ ರಿಕ್ಷಾವನ್ನು ಅವಲಂಬಿಸುವವರ ಕಷ್ಟ ಒಂದಾದರೆ, ಹೊರವಲಯದ ಪ್ರದೇಶಗಳಿಗೆ ತೆರಳುವವರ ಸಂಕಟ ಮತ್ತೊಂದು ಬಗೆಯದು. ಬಹಳಷ್ಟು ಆಟೊರಿಕ್ಷಾ ಚಾಲಕರು ಹೊರವಲಯಕ್ಕೆ ಬರಲು ನಿರಾಕರಿಸುತ್ತಾರೆ.

ಬರಲು ಒಪ್ಪಿದರೂ ಮತ್ತೆ ನಿರೀಕ್ಷಿಸಲು ಮತ್ತು ಭರಿಸಲು ಆಗದಷ್ಟು ಬಾಡಿಗೆ ದರವನ್ನು ಕೇಳುತ್ತಾರೆ. ನಗರದ ಯಾವುದೇ ಮೂಲೆ ಯಿಂದ ಸುಧಾ ವೃತ್ತಕ್ಕೆ ತೆರಳಲು ಕನಿಷ್ಠ 75 ರೂಪಾಯಿ ಕೊಡಲೇಬೇಕು.

ಪ್ರಯಾಣಿಕರ ಬಗ್ಗೆ ಅನುಕಂಪವುಳ್ಳ ಕೆಲವೇ ಚಾಲಕರು ಮಾತ್ರ 50ರಿಂದ 60 ರೂಪಾಯಿಗೆ ಕರೆದೊಯ್ಯುತ್ತಾರೆ. ಅಂಥ ವರು ದೊರಕುವುದು ಅಪರೂಪವಾದ್ದ ರಿಂದ ಆಟೊರಿಕ್ಷಾ ಪ್ರಯಾಣ ಸದಾ ಕಾಲ ದುಬಾರಿ ಆಗಿರುತ್ತದೆ ಎನ್ನು ತ್ತಾರೆ ಬೆಂಗಳೂರು ರಸ್ತೆ ನಿವಾಸಿ ರಾಜಶೇಖರ್‌.

ಮೈಸೂರು ಬಸ್‌, ರೈಲು ನಿಲ್ದಾಣ ಮಾದರಿಯಾಗಲಿ
ಮೈಸೂರಿನ ರೈಲು ಮತ್ತು ಬಸ್‌ ನಿಲ್ದಾಣದಲ್ಲಿ ಮುಂಗಡ ಪಾವತಿಯ ಆಟೊರಿಕ್ಷಾ ಸೇವಾ ಕೇಂದ್ರಗಳನ್ನು ಅಲ್ಲಿನ ಸಂಚಾರ ನಿಯಂತ್ರಣ ಪೊಲೀಸರು ನಿರ್ವಹಿಸುತ್ತಿದ್ದಾರೆ.

ನಗರದ ವಿವಿಧ ಪ್ರದೇಶಗಳು, ನಿಲ್ದಾಣದಿಂದ ಅಲ್ಲಿಗೆ ಇರುವ ಅಂತರ, ತೆರಳಲು ಬೇಕಾಗುವ ಸಮಯ, ಖರ್ಚಾಗುವ ಇಂಧನ, ಆಟೊರಿಕ್ಷಾ ಚಾಲಕರ ಕನಿಷ್ಠ ದುಡಿಮೆಯನ್ನು ಗಣನೆಗೆ ತೆಗೆದುಕೊಂಡು ಅಲ್ಲಿ ಪ್ರಯಾಣಿಕ ಸ್ನೇಹಿ ದರವನ್ನು ನಿಗದಿ ಮಾಡಲಾಗಿದೆ.

ಆಟೊ ರಿಕ್ಷಾ ಚಾಲಕರ ಜೊತೆ ಅನಗತ್ಯ ವಾಗ್ವಾದ, ಜಗಳ, ಚೌಕಾಸಿಗೆ ಅವಕಾಶವೇ ಇರುವುದಿಲ್ಲ. ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದವರ ವಿರುದ್ಧ ದೂರು ನೀಡುವ ಅವಕಾಶವೂ ಇದೆ. ಅಂಥ ಅನುಕೂಲವನ್ನು ನಗರದಲ್ಲೂ ಏರ್ಪಡಿಸಿದರೆ ಉತ್ತಮ. ಅದಕ್ಕೆ ಎಸ್ಪಿ ಅವರು ಉತ್ಸಾಹ ತೋರಬೇಕಷ್ಟೇ ಎನ್ನುತ್ತಾರೆ ನಗರದ ನಿವಾಸಿಗಳಾದ ರಮೇಶ್‌, ಮಧು, ಸುರೇಖಾ.

ಪ್ರಾಧಿಕಾರದ ಸಭೆ ನಾಳೆ
ಸಾರಿಗೆ ಪ್ರಾಧಿಕಾರ ಸಭೆಯು ಜುಲೈ 25ರಂದು ನಡೆಯಲಿದೆ. ಈ ಸಭೆಯಲ್ಲಿ ದುಬಾರಿ ಆಟೊ ರಿಕ್ಷಾ ಪ್ರಯಾಣದ ಕುರಿತು ಚರ್ಚೆ ನಡೆಸಬೇಕು ಎಂಬುದು ಕಪ್ಪಗಲ್ಲು ರಸ್ತೆ ನಿವಾಸಿ ಶ್ರೀನಾಥ ಅವರ ಆಗ್ರಹ. ಶಿಷ್ಟಾಚಾರ ಪಾಲಿಸ ಲೆಂದು ಮಾತ್ರ ಸಭೆಯನ್ನು ನಡೆಸಿ ದರೆ ಯಾವುದೇ ಪ್ರಯೋಜನ ವಿಲ್ಲ. ಚಾಲಕರು, ಮಾಲೀಕರು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಖಚಿತ ತೀರ್ಮಾನವನ್ನು ಕೈಗೊಳ್ಳಬೇಕು ಎನ್ನುತ್ತಾರೆ ಅವರು.

*
ಆಟೊರಿಕ್ಷಾಗಳ ದುಬಾರಿ ಬಾಡಿಗೆ ದರದ ಕುರಿತು ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
-ಆರ್‌.ಚೇತನ್‌,
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.