ADVERTISEMENT

ರಸ್ತೆಯಲ್ಲೇ ಬಸ್: ಪ್ರಯಾಣಿಕರ ಪರದಾಟ

ಕೆ.ನರಸಿಂಹ ಮೂರ್ತಿ
Published 27 ಡಿಸೆಂಬರ್ 2017, 8:50 IST
Last Updated 27 ಡಿಸೆಂಬರ್ 2017, 8:50 IST
ಬಳ್ಳಾರಿಯ ಹಳೇ ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ನಿಂತ ಸರ್ಕಾರಿ ಸಾರಿಗೆ ಬಸ್‌, ಅದರ ಹಿಂದೆ ನಿಂತ ಖಾಸಗಿ ಬಸ್‌.
ಬಳ್ಳಾರಿಯ ಹಳೇ ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ನಿಂತ ಸರ್ಕಾರಿ ಸಾರಿಗೆ ಬಸ್‌, ಅದರ ಹಿಂದೆ ನಿಂತ ಖಾಸಗಿ ಬಸ್‌.   

ಬಳ್ಳಾರಿ: ನಗರದ ಹಳೇ ಬಸ್‌ ನಿಲ್ದಾಣ ಅಭಿವೃದ್ಧಿ ಕಾರ್ಯ ವೇಗ ಪಡೆದಿದ್ದು, ಪರ್ಯಾಯ ವ್ಯವಸ್ಥೆ ಮಾಡದೇ ಬಸ್‌ಗಳ ಪ್ರವೇಶವನ್ನು ನಿಲ್ದಾಣದ ಒಳಗೆ ನಿಷೇಧಿಸಲಾಗಿದೆ. ಪರಿಣಾಮವಾಗಿ ನಿಲ್ದಾಣದ ಹೊರಗಿನ ರಸ್ತೆಯುದ್ದಕ್ಕೂ ಜನ ದಟ್ಟಣೆ ಮತ್ತು ವಾಹನ ದಟ್ಟಣೆ ಹೆಚ್ಚಾಗಿದೆ.

ನೂತನ ಮಾದರಿಯ ನಗರ ಸಾರಿಗೆ ಬಸ್‌ ನಿಲ್ದಾಣದ ಕಟ್ಟಡ ಕಾಮಗಾರಿಗಾಗಿ ಇಡೀ ಆವರಣವನ್ನು ಬಿಟ್ಟುಕೊಡಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ, ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊರಗಿನ ಆವರಣದ ಸ್ಥಳವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂಬ ಮಾತೂ ಕೇಳಿಬಂದಿದೆ.

ಬಸ್‌ ನಿಲ್ದಾಣದ ಹೊರಗೆ ಎಂದಿನಂತೆ ಆಟೋರಿಕ್ಷಾಗಳು ಅಡ್ಡಾದಿಡ್ಡಿಯಾಗಿ ನಿಲುಗಡೆಯಾಗುತ್ತಿವೆ. ಅಭಿವೃದ್ಧಿಯ ಕಾರಣಕ್ಕೆ ಬದಲಾದ ಸನ್ನಿವೇಶದಲ್ಲಿ ಆಟೋರಿಕ್ಷಾಗಳಿಗೆ ಬೇರೆ ಸ್ಥಳವನ್ನು ನೀಡದೇ ಇರುವುದು, ನಿಲ್ದಾಣದ ಆಸುಪಾಸಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವ ತಳ್ಳುಗಾಡಿ ಹೋಟೆಲ್‌ಗಳನ್ನು ಸ್ಥಳಾಂತರಿಸದೇ ಇರುವುದು ಕೂಡ ಸದ್ಯದ ಪರಿಸ್ಥಿತಿಗೆ ಕಾರಣವಾಗಿದೆ.

ADVERTISEMENT

ಸರ್ಕಾರಿ ಬಸ್‌ಗಳ ಜೊತೆಗೆ ಖಾಸಗಿ ಬಸ್‌ಗಳೂ ರಸ್ತೆಯಲ್ಲೇ ನಿಂತು ಪೈಪೋಟಿ ನೀಡುತ್ತಿರುವುದು ಸನ್ನಿವೇಶವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವವರಿಗೂ ತೊಂದರೆ ಎದುರಾಗಿದೆ.

ಪ್ರಯಾಣಿಕರಿಗೆ ಸ್ಥಳವೇ ಇಲ್ಲ: ಇಂಥ ಪರಿಸ್ಥಿತಿಯಲ್ಲಿ ಪ್ರಯಾಣಿಕರು, ನಿಲ್ದಾಣ ಪಕ್ಕದ ಪೆಟ್ರೋಲ್‌ ಬಂಕ್‌ ಮುಂಭಾಗದಲ್ಲಿ, ನಿಲ್ದಾಣದ ಇನ್ನೊಂದು ಬದಿ ಫುಟ್‌ಪಾತ್‌ ಒತ್ತುವರಿ ಮಾಡಿಕೊಂಡಿರುವ ತಳ್ಳುಗಾಡಿ ಹೋಟೆಲ್‌ ಮುಂದೆ, ಬಸ್‌ಗಳ ಹಿಂದೆ–ಮುಂದೆ, ಅಕ್ಕ–ಪಕ್ಕ ಅತಂತ್ರರಾಗಿ ನಿಲ್ಲುವುದು ಸಾಮಾನ್ಯ ದೃಶ್ಯವಾಗಿದೆ, ಕುರ್ಚಿಗಳ ಸೌಕರ್ಯವೂ ಇಲ್ಲದಿರುವುದರಿಂದ ಗರ್ಭಿಣಿಯರು, ವೃದ್ಧ–ವೃದ್ಧೆಯರು ನೆಲದಲ್ಲೇ ಕುಳಿತು ಬಸ್‌ಗಾಗಿ ಕಾಯುತ್ತಾರೆ.

ಫಲಕ ಪ್ರದರ್ಶನ: ‘ಹಳೇ ಬಸ್‌ ನಿಲ್ದಾಣದಿಂದ ಪ್ರಯಾಣ ಆರಂಭಿಸುತ್ತಿದ್ದ ಬಸ್‌ಗಳ ಪೈಕಿ ಹಲವನ್ನು ಹೊಸ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಉಳಿದಂತೆ, ಮೋಕಾ, ತಾಳೂರು, ಉತ್ತನೂರು, ಕುರುಗೋಡು, ಕಂಪ್ಲಿ, ಸಿರುಗುಪ್ಪ, ಹೊಸಪೇಟೆ ಮತ್ತು ಗಂಗಾವತಿ ಮಾರ್ಗಗಳ ಮೂಲಕ ಕಾರ್ಯಾಚರಣೆ ನಡೆಸುವ ಬಸ್‌ಗಳು ಹಳೇ ಬಸ್‌ ನಿಲ್ದಾಣದ ಮುಂದಿನಿಂದಲೇ ಸಂಚರಿಸುತ್ತವೆ’ ಎಂದು ಸಂಸ್ಥೆಯು ಫಲಕವನ್ನು ಪ್ರದರ್ಶಿಸಿದೆ.

ಪ್ರಾಯೋಗಿಕ ತಿಳಿವು ಅಗತ್ಯ: ‘ನಿಲ್ದಾಣವನ್ನು ಅಭಿವೃದ್ಧಿಪಡಿಸುತ್ತಿರುವುದು ಸ್ವಾಗತಾರ್ಹ. ಆದರೆ ಅಭಿವೃದ್ಧಿಯ ಕಾರಣಕ್ಕೆ ಪ್ರಯಾಣಿಕರು ದಿನವೂ ಬಳಲಬಾರದು ಎಂಬ ತಿಳಿವಳಿಕೆಯೂ ಸಂಸ್ಥೆಯ ಅಧಿಕಾರಿಗಳಿಗೆ ಇರಬೇಕು. ಬಳ್ಳಾರಿ ತಾಲ್ಲೂಕಷ್ಟೇ ಅಲ್ಲದೆ ಸಿರುಗುಪ್ಪ, ಹೊಸಪೇಟೆಯ ಗ್ರಾಮೀಣ ಪ್ರದೇಶದ ಬಸ್‌ಗಳನ್ನು ಅವಲಂಬಿಸಿದ ಜನರಿಗೆ ತಾತ್ಕಾಲಿಕವಾಗಿ ಅನುಕೂಲ ಮಾಡಿಕೊಡಬೇಕು’ ಎಂದು ಮೋಕಾದ ಮುರಳಿ ಆಗ್ರಹಿಸಿದರು.

‘ನಿಲ್ದಾಣದ ಹೊರ ಆವರಣದಲ್ಲಿ ಇಂಥ ಸನ್ನಿವೇಶದಲ್ಲೂ ಆಟೋರಿಕ್ಷಾ ನಿಲ್ದಾಣ ಇರಲೇಬೇಕೆಂದೇನಿಲ್ಲ. ತಳ್ಳುಗಾಡಿ ಹೋಟೆಲ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಖಾಸಗಿ ಬಸ್‌ಗಳಿಗೆ ಅವಕಾಶ ಕೊಡಬಾರದು. ಆಗ ಸನ್ನಿವೇಶ ಸುಧಾರಿಸಬಹುದು’ ಎಂದು ಕುರುಗೋಡಿನ ರಾಮಾಂಜಿ, ತಾಳೂರಿನ ಸುರೇಶ ಅಭಿಪ್ರಾಯಪಟ್ಟರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ’ಪ್ರಜಾವಾಣಿ’ಯು ಈಶಾನ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್‌ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.

ಹಳೇ ಬಸ್‌ ನಿಲ್ದಾಣದ ಹೊರಗೆ ಕುಳಿತುಕೊಳ್ಳಲು ವೃದ್ಧ–ವೃದ್ಧೆಯರು ಮತ್ತು ಗರ್ಭಿಣಿಯರಿಗಾದರೂ ಸಾರಿಗೆ ಸಂಸ್ಥೆಯು ಕೊಂಚ ಅನುಕೂಲ ಮಾಡಿಕೊಡಬೇಕು
–ರಾಮಕ್ಕ, ನಂಜಮ್ಮ, ಮೋಕಾ ನಿವಾಸಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.