ADVERTISEMENT

ರೆಡ್ಡಿ ಆಸ್ತಿ ಜಪ್ತಿ: ದೋಷಾರೋಪ ಪಟ್ಟಿ ರದ್ದು ಮಾಡಿದ ನ್ಯಾಯಮೂರ್ತಿ ವಿರುದ್ಧ ಭ್ರಷ್ಟಾಚಾರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:24 IST
Last Updated 20 ಮಾರ್ಚ್ 2017, 7:24 IST

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಒಡೆತನದ ಕಂಪೆನಿಯ ₹ 900 ಕೋಟಿಗೂ ಮಿಕ್ಕಿದ ಸ್ಥಿರ ಮತ್ತು ಚರಾಸ್ತಿ ಮುಟ್ಟುಗೋಲು ಹಾಕಿಕೊಂಡು ಜಾರಿ ನಿರ್ದೇಶನಾಲಯವು (ಇ.ಡಿ), ಸಿಬಿಐ ನ್ಯಾಯಾಲಯದಲ್ಲಿ ದಾಖಲಿಸಿದ್ದ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿರುವಲ್ಲಿ ಭ್ರಷ್ಟಾಚಾರ ನಡೆದಿದ್ದು,

ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ಜೆ.ಎಸ್‌.ಖೆಹರ್‌ ಅವರಿಗೆ ದೂರು ಸಲ್ಲಿಸಿದ್ದಾರೆ. ನ್ಯಾಯಾಧೀಶರಾದ ದೀಪಕ್‌ ಮಿಶ್ರಾ, ಜಸ್ತಿ ಚೆಲಮೇಶ್ವರ್‌, ರಂಜನ್‌ ಗೋಗಯ್ ಹಾಗೂ ಮದ್ದನ್‌ ಲೊಕೂರ್‌ ಅವರಿಗೂ ಆರು ಪುಟಗಳ ದೂರು ಸಲ್ಲಿಸಿದ್ದಾರೆ.

‘ರೆಡ್ಡಿ ವಿರುದ್ಧ 2010ರಲ್ಲಿ ಸಲ್ಲಿಸಲಾಗಿದ್ದ ದೋಷಾರೋಪಟ್ಟಿಯ ವಿರುದ್ಧದ ಅರ್ಜಿಯನ್ನು ಆರು ವರ್ಷಗಳ ಬಳಿಕ ಮುಖ್ಯ ನ್ಯಾಯಮೂರ್ತಿಯ ಮುಂದೆ ತಪ್ಪಾಗಿ, ಉದ್ದೇಶಪೂರ್ವಕವಾಗಿ ಸಲ್ಲಿಸಲಾಗಿತ್ತು. ಮುಖರ್ಜಿ ಅವರು ಆ ಹುದ್ದೆಗೆ ನೇಮಕಗೊಂಡು ಪ್ರಮಾಣವಚನ ಸ್ವೀಕರಿಸಿದ 2016ರ ಫೆಬ್ರುವರಿ 23ರಂದೇ, ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆಯೂ ದೊರಕಿತ್ತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಮಧ್ಯಂತರ ತಡೆಯಾಜ್ಞೆಯನ್ನು ಆಧರಿಸಿಯೇ ರೆಡ್ಡಿ ಒಡೆತನದ ಬ್ರಹ್ಮಿಣಿ ಸಂಸ್ಥೆ ಹಾಗೂ ರೆಡ್ಡಿ ಪತ್ನಿ ಜಿ.ಲಕ್ಷ್ಮಿ ಅರುಣ ಅದೇ ತಿಂಗಳ 29ರಂದು ರಿಟ್‌ ಅರ್ಜಿಗಳನ್ನು ಸಲ್ಲಿಸಿದರು. ಮೊದಲಿನಂತೆಯೇ, ಪ್ರಕರಣವನ್ನು ‘ಗಣಿ ಮತ್ತು ಖನಿಜ’ಕ್ಕೆ ಸಂಬಂಧಿಸಿದ್ದು ಎಂದು ವಿಭಾಗಿಸಿ ಸಲ್ಲಿಸಲಾಗಿತ್ತು. ಪ್ರಕರಣ ಸಂಬಂಧ ಜಾರಿ ನಿರ್ದೇಶನಲಾಯದ ಪರ ವಾದವೂ ಸಮರ್ಪಕವಾಗಿ ನಡೆಯಲಿಲ್ಲ’ ಎಂದಿದ್ದಾರೆ.

‘ಪ್ರಕರಣಗಳನ್ನು ತಪ್ಪಾಗಿ ಅರ್ಥೈಸುವುದು ಮತ್ತು ತಪ್ಪು ಆದೇಶಗಳನ್ನು ಹೊರಡಿಸಿದ್ದ ಕಾರಣಕ್ಕೆ ಕರ್ನಾಟಕದ ಹಿಂದಿನ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರನ್ನು ಸಂಸದೀಯ ಮಂಡಳಿ ವಾಗ್ದಂಡನೆಗೆ ಗುರಿ ಮಾಡಿತ್ತು. ರೆಡ್ಡಿ ಅವರ ಪ್ರಕರಣದಲ್ಲೂ ಈಗಿನ ನ್ಯಾಯಮೂರ್ತಿ ಇದೇ ರೀತಿ ವರ್ತಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಬೇಕು. ಅವರು ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಬೇಕು’ ಎಂದು ಕೋರಿದ್ದಾರೆ.

*
ದೂರನ್ನು ಶನಿವಾರ ಅಂಚೆ ಮೂಲಕ ಸುಪ್ರೀಂಕೋರ್ಟ್‌ಗೆ ರವಾನಿಸಲಾಗಿದೆ. ಮುಖ್ಯ ನ್ಯಾಯಮೂರ್ತಿ ವಿರುದ್ಧ ಕಾನೂನು ಹೋರಾಟ ಮುಂದುವರಿಯಲಿದೆ.
-ರವಿಕೃಷ್ಣಾರೆಡ್ಡಿ,
ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ  ಅಧ್ಯಕ್ಷ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.