ADVERTISEMENT

ರೈಲು ಮೇಲ್ಸೇತುವೆ ಉದ್ಘಾಟನೆ ವಿಳಂಬ!

ಕೆ.ನರಸಿಂಹ ಮೂರ್ತಿ
Published 11 ಸೆಪ್ಟೆಂಬರ್ 2017, 6:24 IST
Last Updated 11 ಸೆಪ್ಟೆಂಬರ್ 2017, 6:24 IST
ಬಳ್ಳಾರಿಯ ರೈಲು ಮೇಲ್ಸೇತುವೆ ಪಕ್ಕದ ರಸ್ತೆ ಅಭಿವೃದ್ಧಿಯಾಗಿದ್ದು, ವಾಹನ ಸಂಚಾರ ಸುಗಮವಾಗಿದೆ
ಬಳ್ಳಾರಿಯ ರೈಲು ಮೇಲ್ಸೇತುವೆ ಪಕ್ಕದ ರಸ್ತೆ ಅಭಿವೃದ್ಧಿಯಾಗಿದ್ದು, ವಾಹನ ಸಂಚಾರ ಸುಗಮವಾಗಿದೆ   

ಬಳ್ಳಾರಿ: ನಗರದ ಜನರ ದಶಕಗಳ ಕನಸಾದ ರೈಲು ಮೇಲ್ಸೇತುವೆ  ನಿರ್ಮಾಣಗೊಂಡು ತಿಂಗಳುಗಳಾಗಿ ದ್ದರೂ ಉದ್ಘಾಟನೆಯಾಗದೇ, ವಾಹನ ಸಂಚಾರಕ್ಕೂ ಅನುವಾಗದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಸೆ,12ರಂದು ನಗರದಲ್ಲಿ ನಡೆಯಲಿರುವ ಬಳ್ಳಾರಿ ಅಭಿವೃದ್ಧಿ ಮತ್ತು ಸಾಮಾಜಿಕ ಸಾಧನಾ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿರುವ ಸಂದರ್ಭದಲ್ಲೇ ಸೇತುವೆಯನ್ನೂ ಸಾರ್ವಜನಿಕರ ಬಳಕೆಗೆ ತೆರೆಯಲಾಗುವುದು ಎಂದು ಹೇಳಲಾಗಿತ್ತು. ಆದರೆ ಸಮಾವೇಶಕ್ಕೆ ಇನ್ನು ಒಂದೇ ದಿನ ಇರುವಾಗ, ಈ ಬಗ್ಗೆ ಯಾವ ಅಧಿಕಾರಿಯ ಬಳಿಯೂ ಸ್ಪಷ್ಟ ನಿಲುವು ವ್ಯಕ್ತವಾಗಿಲ್ಲ.

ಇಂಥ ಪರಿಸ್ಥಿತಿಯಲ್ಲೇ, ಸೇತುವೆ ಯಲ್ಲಿ ಏಕಮುಖ ಸಂಚಾರ ನಡೆ ಯುತ್ತದೋ ದ್ವಿಮುಖ ಸಂಚಾರಕ್ಕೆ ಅವಕಾಶವಿರುವುದೋ ಎಂದೂ ಜನ ಚರ್ಚಿಸುತ್ತಿದ್ದಾರೆ. ನಗರದ ಇನ್ನೂ ಎರಡು ರೈಲು ಗೇಟ್‌ಗಳಿರುವ ಕಡೆ ಮೇಲ್ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.

ಸೇತುವೆಯ ಕನಸು: ನಗರದ ಕೌಲ್‌ ಬಜಾರ್‌ ಪ್ರದೇಶದ ಒಂದನೇ ರೈಲ್ವೆ ಗೇಟ್‌, ರೇಡಿಯೋಪಾರ್ಕ್‌ ಪ್ರದೇಶದ ಎರಡನೇ ಗೇಟ್‌ ಮತ್ತು ಸುಧಾಕ್ರಾಸ್‌ ವೃತ್ತದಲ್ಲಿರುವ ಮೂರನೇ ಗೇಟ್‌ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಎಂಬುದು ಜನರ ಆಗ್ರಹವಾಗಿತ್ತು.  1ನೇ ಗೇಟ್ ಬಳಿ ಸೇತುವೆ ನಿರ್ಮಾಣ ಕಾರ್ಯ 2013ರಲ್ಲಿ ಆರಂಭಗೊಂಡು, ಈಗ  ಪೂರ್ಣ ಗೊಂಡಿದ್ದು ಬಹು ತೇಕರಲ್ಲಿ ಸಂತಸ ತಂದಿದೆ. ಆದರೆ ಬಳಸಲು ಆಗದ ಸನ್ನಿವೇಶದಿಂದ ವಿಷಾದವೂ ಮೂಡಿದೆ.

ADVERTISEMENT

ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ರೈಲ್ವೆ ಇಲಾಖೆಯು ಒಂದು ಮತ್ತು ಎರಡನೇ ಗೇಟ್‌ ಬಳಿ ಸೇತುವೆ ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿದೆ. ಮೂರನೇ ಗೇಟ್‌ ಬಳಿ ಸೇತುವೆ ನಿರ್ಮಿಸುವ ಹೊಣೆಯನ್ನು ಪ್ರಾಧಿಕಾರ ಹೊತ್ತಿದೆ.

ಆದರೆ ಒಂದನೇ ಸೇತುವೆ ಬಹುತೇಕ ನಿರ್ಮಾಣಗೊಂಡು ಸುಮಾರು ಎರಡು ತಿಂಗಳಾದರೂ ಜನರ ಬಳಕೆಗೆ ಅವಕಾಶವಾಗಿಲ್ಲ. ಸೇತುವೆ ನಿರ್ಮಾಣಕ್ಕೆ ₹3.5 ಕೋಟಿ, ಸೇತುವೆಯ ಎರಡೂ ಬದಿ ರಸ್ತೆ ಅಭಿವೃದ್ಧಿಗೆ ₹8.5 ಕೋಟಿ ವ್ಯಯಿಸ ಲಾಗಿದೆ ಎಂದು ತಿಳಿದುಬಂದಿದೆ.

ದ್ವಿಮುಖ ಸಂಚಾರ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ‘ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗು ವುದು’ ಎಂದು ತಿಳಿಸಿದರು. ಆದರೆ ಸೇತುವೆಯ ಉದ್ಘಾಟನೆ ಕುರಿತು ತಮಗೆ ಯಾವ ಮಾಹಿತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಭಿವೃದ್ಧಿ ಪರ್ವ: ‘ನಗರದಲ್ಲಿ ರಸ್ತೆ ಮತ್ತು ವೃತ್ತಗಳ ಅಭಿವೃದ್ಧಿ ಪರ್ವ ಈಗ ಆರಂಭವಾಗಿದ್ದು ವಾಹನ ಸಂಚಾರ ವ್ಯವಸ್ಥೆ ಕೆಲವೇ ವರ್ಷಗಳಲ್ಲಿ ಉತ್ತಮ ಗೊಳ್ಳಲಿದೆ. ಈ ನಿಟ್ಟಿನಲ್ಲಿ ಸಿಸಿ ಕ್ಯಾಮೆ ರಾಗಳ ಅಳವಡಿಕೆ ಕಾರ್ಯವೂ ಭರದಿಂದ ನಡೆದಿದೆ. ಹಲವು ವೃತ್ತಗಳಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಕಂಟ್ರೋಲ್‌ ರೂಂನಲ್ಲಿ ಸಿಬ್ಬಂದಿ ಕಣ್ಗಾವಲು ಇಟ್ಟಿದ್ದಾರೆ’ ಎಂದರು.

ಮಾಹಿತಿ ಇಲ್ಲ: ಸೇತುವೆ ಉದ್ಘಾಟನೆ ಯಾಗುವುದೇ? ಎಂಬ ಬಗ್ಗೆ ಪಾಲಿಕೆ ಯಲ್ಲೂ ಸ್ಪಷ್ಟ ಉತ್ತರವಿಲ್ಲ. ಒಂದನೇ ರೈಲು ಗೇಟ್‌ ಪ್ರದೇಶವು ಪಾಲಿಕೆಯ ವ್ಯಾಪ್ತಿಯಲ್ಲೇ ಇರುವುದರಿಂದ, ಸ್ವಚ್ಛತೆ ನಿರ್ವಹಣೆ ಸಲುವಾಗಿ ಸೇತುವೆಯನ್ನು ಪಾಲಿಕೆಗೆ ಒಪ್ಪಿಸುವ ಕುರಿತು ಇದುವರೆಗೂ ರೈಲ್ವೆ ಇಲಾಖೆ ಯಾಗಲೀ ಲೋಕೋಪ ಯೋಗಿ ಇಲಾಖೆಯಾಗಲೀ ಪತ್ರ ವ್ಯವಹಾರ ವನ್ನು ನಡೆಸಿಲ್ಲ.

ಕಾಯುವ ಕಷ್ಟ ದೂರವಾಗಲಿ
‘ಅದಿರು ತುಂಬಿದ ಗೂಡ್ಸ್‌  ರೈಲು ಮತ್ತು ಪ್ರಯಾಣಿಕರ ರೈಲು ಸಂಚಾರ ಬಳ್ಳಾರಿ ಹೊಸಪೇಟೆ ಮಾರ್ಗದಲ್ಲಿ ಹೆಚ್ಚಿದೆ. ಸರಾಸರಿ ಪ್ರತಿ ಒಂದು ಗಂಟೆಗೆ ರೈಲು ಸಂಚರಿಸುವುದರಿಂದ ವಾಹನ ಸವಾರರು ಹಲವು ವರ್ಷಗಳಿಂದ ನಿತ್ಯವೂ ತೊಂದರೆ ಅನುಭವಿಸುತ್ತಿದ್ದರು,ಕ್ರಾಸಿಂಗ್‌ ಸಂದರ್ಭದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ರೈಲು ನಿಲುಗಡೆಯಾದರೆ ಕಾಯುವುದು ಇನ್ನಷ್ಟು ಕಷ್ಟವಾಗುತ್ತಿತ್ತು. ಈ ಸೇತುವೆ ನಿರ್ಮಾಣವಾಗಿರುವುದರಿಂದ ಕಾಯುವ ಕಷ್ಟ ತಪ್ಪಲಿದೆ’ ಎಂದು ಕೌಲ್‌ಬಜಾರ್‌ನ ಮೆಹಬೂಬ್‌ ಬಾಷಾ ಮತ್ತು ದೇವಿನಗರದ ರಾಘವೇಂದ್ರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊಸಪೇಟೆಯಿಂದ ಬಳ್ಳಾರಿಗೆ ಪ್ರವೇಶ ಕಲ್ಪಿಸುವ ಸುಧಾ ಕ್ರಾಸ್‌ ವೃತ್ತದಲ್ಲೂ ರೈಲುಗೇಟ್‌ ಇರುವುದರಿಂದ ಸಮೀಪದ ವಿಮ್ಸ್‌ ಆಸ್ಪತ್ರೆ ಮತ್ತು ಶಾಲೆ–ಕಾಲೇಜುಗಳಿಗೆ ತೆರಳಲು ಜನ ಈಗಲೂ ತೊಂದರೆ ಅನುಭವಿಸು ತ್ತಿದ್ದಾರೆ, ಈ ಪ್ರದೇಶದಲ್ಲೂ ಮೇಲ್ಸೇತುವೆಯನ್ನು ಸಾಧ್ಯ ವಾದಷ್ಟು ಬೇಗ ನಿರ್ಮಿಸಬೇಕು’ ಎಂಬುದು ಬೆಳಗಲ್ಲು ರಸ್ತೆ ನಿವಾಸಿ ರಾಜಾರಾಂ ಅವರ ಆಗ್ರಹ.

* * 

ರೈಲು ಮೇಲ್ಸೇತುವೆಯ ಉದ್ಘಾಟನೆ ಕುರಿತು ಯಾವ ಇಲಾಖೆಯೂ ಇದುವರೆಗೆ ಪಾಲಿಕೆಗೆ ಪತ್ರ ಬರೆದಿಲ್ಲ
ಎಂ.ಕೆ.ನಲ್ವಡಿ
ಪಾಲಿಕೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.