ADVERTISEMENT

ವಿಜ್ಞಾನ ಕ್ಷೇತ್ರಕ್ಕೆ ಕೂಲಿಗಳು ಅನಗತ್ಯ: ಪ್ರೊ. ರಾಮಮೂರ್ತಿ

ಕರ್ನಾಟಕ ವಿಜ್ಞಾನ–ತಂತ್ರಜ್ಞಾನ ಅಕಾಡೆಮಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:49 IST
Last Updated 9 ಮಾರ್ಚ್ 2017, 11:49 IST
ಬಳ್ಳಾರಿ: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವಂತೆ ವಿಜ್ಞಾನ ಕ್ಷೇತ್ರದಲ್ಲಿ ಸಂಬಳಕ್ಕೆ ತಕ್ಕಷ್ಟು ಮಾತ್ರ ಕೆಲಸ ಮಾಡುವ ಕೂಲಿಗಳಿರಬೇಕಾಗಿಲ್ಲ. ಸ್ವತಂತ್ರವಾಗಿ ಯೋಚಿಸಿ, ಸಂಶೋಧನೆ ಮಾಡಬಲ್ಲ ವಿಜ್ಞಾನಿಗಳಿರಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ವಿ.ಎಸ್‌. ರಾಮಮೂರ್ತಿ ಪ್ರತಿಪಾದಿಸಿದರು.
 
‘ಸಮಾಜ ಮತ್ತು ಆರ್ಥಿಕತೆಯ ಮೇಲೆ ವಿಜ್ಞಾನ ಹಾಗೂ ತಂತ್ರಜ್ಞಾನದ ಪರಿಣಾಮ ಕುರಿತು’ ನಗರದಲ್ಲಿ ಬುಧವಾರದಿಂದ ಕರ್ನಾಟಕ ವಿಜ್ಞಾನ–ತಂತ್ರಜ್ಞಾನ ಅಕಾಡೆಮಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಸಮ್ಮೇಳನದಲ್ಲಿ ‘ಮಾನವ ನಾಗರೀಕತೆ: ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆ’  ಕುರಿತು  ಅವರು ಉಪನ್ಯಾಸ ನೀಡಿದರು.
 
‘ದೇಶದಲ್ಲಿ ದೊಡ್ಡ ಸಂಖ್ಯೆಯ ಮಾಹಿತಿ ತಂತ್ರಜ್ಞಾನ ಪದವೀಧರರಿದ್ದಾರೆ. ಅವರು ಆ ಕ್ಷೇತ್ರದಲ್ಲಿ ತಜ್ಞರಾಗಿಲ್ಲ. ತಮ್ಮ ತಿಳಿವಳಿಕೆಯಿಂದ ಏನು ಮಾಡಬೇಕೆಂದು ತಿಳಿಯದ ಕೂಲಿಗಳಾಗಿಯೇ ಉಳಿದಿದ್ದಾರೆ ಎಂದು ಪ್ರೊ.ಯು.ಆರ್‌.ರಾವ್‌ ಹೇಳುತ್ತಿದ್ದರು. ಈಗಲೂ ಪರಿಸ್ಥಿತಿ ಸುಧಾರಿಸಿಲ್ಲ’ ಎಂದರು,
 
ಕಾರ್ಪೊರೇಟೀಕರಣ
’ವಿಜ್ಞಾನ ಸಂಶೋಧನೆ ಎಂಬುದು ಕೆಲವು ದಶಕಗಳ ಹಿಂದೆಯೇ ಕಾರ್ಪೋರೇಟ್‌ ಶಿಸ್ತಿಗೆ ಒಳಪಟ್ಟಿದ್ದಾಗಿದೆ. ಇತ್ತೀಚಿನ ಬೆಳವಣಿಗೆ ಎಂದರೆ, ವಿಶ್ವದ ಎಲ್ಲೆಡೆ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಅನುದಾನ ನೀಡುವ ಸಂಸ್ಥೆಗಳು ಜನ ಸಮುದಾಯದ ಮೇಲೆ ಬಾಜಿ ಕಟ್ಟಲು ಶುರುವಾಗಿವೆ. 
 
ಜನರನ್ನು ಅಚ್ಚರಿಗೆ ದೂಡುವ, ರೋಮಾಂಚನ ಗೊಳಿಸುವ ಸಂಶೋಧನೆಗಳಿದ್ದರೆ ಕೂಡಲೇ ಅನುದಾನ ನೀಡುತ್ತವೆ. ಅವು ವಿಧಿಸುವ ಒಂದೇ ಷರತ್ತೆಂದರೆ, ಆ ಸಂಶೋಧನೆಯನ್ನು ಯಾರೂ ವಿರೋಧಿಸಬಾರದಷ್ಟೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.